ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಒತ್ತುವರಿ ತೆರವು ಮತ್ತೆ ಆರಂಭ

10 ದಿನಗಳ ನಂತರ ಬಿಬಿಎಂಪಿ ಅಧಿಕಾರಿಗಳಿಂದ ಕಾರ್ಯಾಚರಣೆ
Last Updated 10 ಅಕ್ಟೋಬರ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ 10 ದಿನಗಳ ನಂತರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸೋಮವಾರ ಆರಂಭಿಸಿದೆ.

ಮಹದೇವಪುರ ವಲಯದಆರ್.ನಾರಾಯಣಪುರ, ಶೀಲವಂತ ನಕೆರೆ, ಕಸವನಹಳ್ಳಿ ಹಾಗೂ ಕೆ.ಆರ್.ಪುರ ವಿಭಾಗದ ಬಸವನಪುರ ವಾರ್ಡ್ ವ್ಯಾಪ್ತಿಯಲ್ಲಿ ಒತ್ತುವರಿತೆರವುಗೊಳಿಸಲಾಗಿದೆ.

ಮಹದೇವಪುರ ವಿಭಾಗದಆರ್.ನಾರಾಯಣಪುರ ಮತ್ತು ವೈಟ್ ಫೀಲ್ಡ್ ಹತ್ತಿರದ ಶೀಲವಂತನ ಕೆರೆಯ ಬಳಿ ರಾಜಕಾಲುವೆ ಮೇಲೆ ಸುಮಾರು 10 ಮೀಟರ್ ಉದ್ದ ಹಾಗೂ 4 ಮೀಟರ್ ಅಗಲದ ಕವರ್ ಸ್ಲ್ಯಾಬ್, 4 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಹಾಗೂ 4 ಶೆಡ್‌ಗಳನ್ನು ತೆರವುಗೊಳಿಸಲಾಗಿದೆ.

ಕಸವನಹಳ್ಳಿಯ ವಲ್ಲಿಯಮ್ಮ ಲೇಔಟ್‌ನಲ್ಲಿ ಸುಮಾರು 20 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ ಜಾಗದಲ್ಲಿದ್ದ 3 ಶೆಡ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಸ್ಥಳೀಯರ ಆಕ್ರೋಶ: ಕೆ.ಆರ್.ಪುರದ ಬಸವನಪುರ ವಾರ್ಡ್‌ನ ಎಸ್.ಆರ್.ಬಡಾವಣೆ ಮತ್ತು ದೇವಸಂದ್ರದ ವ್ಯಾಪ್ತಿಯ ಗಾಯಿತ್ರಿ ಬಡಾವಣೆಯಲ್ಲಿ ಸುಮಾರು 100 ಮೀಟರ್ ಉದ್ದದ ಅಪಾರ್ಟ್‌ಮೆಂಟ್‌ ಗೋಡೆ ಹಾಗೂ 2 ಮನೆಯ 10 ಮೀಟರ್ ಉದ್ದದ ಗೋಡೆ ಹಾಗೂ ಒಂದು ಶೆಡ್ ಅನ್ನು ತೆರವುಗೊಳಿಸಲಾಗಿದೆ.

ತೆರವು ಕಾರ್ಯಾಚರಣೆ ನಡೆಸಲು ಮುಂದಾದಾಗ, ‘20 ವರ್ಷಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಪ್ರತಿ ವರ್ಷ ತೆರಿಗೆ ಕಟ್ಟುತ್ತಿದ್ದೇವೆ, ನೀರಿನ ಬಿಲ್, ಕರೆಂಟ್ ಬಿಲ್ ಎಲ್ಲವೂ ಕಟ್ಟುತ್ತಿದ್ದೇವೆ. ಆದರೆ, ಆಗ ಇಲ್ಲದ ಒತ್ತುವರಿ ಈಗ ಏಕೆ? ನಾವು ಈಗ ಮನೆ ಖಾಲಿ ಮಾಡಿ ಎಲ್ಲಿ ಹೋಗಬೇಕು’ ಎಂದು ಅಧಿಕಾರಿಗಳನ್ನು‌ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

ಮಾಜಿ ಸಚಿವ ಎ. ಕೃಷ್ಣಪ್ಪ ಸಹೋದರ ಕಾಂಗ್ರೆಸ್ ಮುಖಂಡ ಡಿ.ಎ.ಗೋಪಾಲ್ ಮತ್ತು ಅಪಾರ್ಟ್‌ ಮೆಂಟ್ ನಿವಾಸಿಗಳು ತೆರವು ಕಾರ್ಯಾ ಚರಣೆಗೆ ವಿರೋಧ ವ್ಯಕ್ತಪಡಿಸಿದರು.

‘ನೀವು ಕೊಟ್ಟಿರುವ ನೋಟಿಸ್‌ನಲ್ಲಿ ಸರ್ವೇ ನಂಬರ್ ತಪ್ಪಾಗಿ ನಮೂದಿಸಲಾಗಿದೆ. ನಮ್ಮ ಅಪಾರ್ಟ್‌ಮೆಂಟ್ ಕೆ.ಆರ್.ಪುರ ವ್ಯಾಪ್ತಿಗೆ ಬರುತ್ತದೆ. ನೀವು ದೇವಸಂದ್ರ ಎಂದು ಬೇರೆ ಸರ್ವೇ ನಂಬರ್ ಕೊಟ್ಟಿದ್ದೀರಿ. ಅಲ್ಲದೇ ರಾಜಕಾಲುವೆ ಎಲ್ಲಿಂದ ಆರಂಭವಾಗಿದೆಯೋ ಅಲ್ಲಿಂದಲೇ ಮೊದಲು ಒತ್ತುವರಿ ತೆರವು ಮಾಡದೇ ಕಾಲುವೆ ಹಿಂದೆ ಮುಂದೆ ಬಿಟ್ಟು ಮಧ್ಯದಲ್ಲಿ ನಮ್ಮ ಅಪಾರ್ಟ್‌ಮೆಂಟ್ ಜಾಗ ಮಾತ್ರ ಏಕೆ ತೆರವು ಮಾಡುತ್ತಿದ್ದೀರಿ? ಯಾರ ಕೈವಾಡ‌ದಿಂದ ಬಂದಿದ್ದಿರಿ. ಎಲ್ಲ ಕಡೆ ಒತ್ತುವರಿ ತೆರವು ಮಾಡಿ ಅಮೇಲೆ ನಮ್ಮದು ಮಾಡಿ’ ಎಂದು ಆಗ್ರಹಿಸಿದರು.

ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ‌ಕೆಲಕಾಲ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಮಧ್ಯಾಹ್ನದ ಬಳಿಕ ಕೆ.ಆರ್.ಪುರ ತಹಶೀಲ್ದಾರ್ ಹೊರಡಿಸಿದ್ದ ತೆರವು ಆದೇಶದ ಪ್ರತಿ ನೀಡಿ ಪುನಃ ತೆರವು ಕಾರ್ಯ ಆರಂಭಿಸಲಾಯಿತು. ರಾಜಕಾಲುವೆ ಹಾದು ಹೋಗಿದ್ದ ಅಪಾರ್ಟ್‌ಮೆಂಟ್ ಪಕ್ಕದ ಕಾಂಪೌಂಡ್ ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT