ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ: ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಕೆರಳಿದ್ದ ಪವಿತ್ರಾ ಗೌಡ

ದರ್ಶನ್‌ ಸೇರಿದಂತೆ ಹಲವರ ಬಟ್ಟೆಗಳಲ್ಲಿ ರಕ್ತದ ಕಲೆ ಪತ್ತೆ: ಕೃತ್ಯ ಬಯಲಾಗಿದ್ದು ಹೇಗೆ?
Published 5 ಸೆಪ್ಟೆಂಬರ್ 2024, 0:40 IST
Last Updated 5 ಸೆಪ್ಟೆಂಬರ್ 2024, 0:40 IST
ಅಕ್ಷರ ಗಾತ್ರ

ಬೆಂಗಳೂರು: ‘ನಟ ದರ್ಶನ್ ಅವರ ಆಪ್ತೆ ಪವಿತ್ರಾಗೌಡ ಅವರಿಗೆ ರೇಣುಕಸ್ವಾಮಿ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಅಶ್ಲೀಲ ಸಂದೇಶ ಹಾಗೂ ನಗ್ನ ಫೋಟೊ ಕಳುಹಿಸಿದ್ದೇ ಕೃತ್ಯಕ್ಕೆ ಮೂಲ ಕಾರಣ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿ ಹೇಳಿದೆ.

‘ಫೆಬ್ರುವರಿಯಲ್ಲಿ ಪವಿತ್ರಾ ಅವರು ದುಬೈಗೆ ತೆರಳಿದ್ದರು. ಅದೇ ವೇಳೆಯಲ್ಲಿ ರೇಣುಕಸ್ವಾಮಿ ಅವರು ಪವಿತ್ರಾಗೆ ಸಂದೇಶ ಕಳುಹಿಸುತ್ತಿದ್ದರು. ಸಂದೇಶ ಗಮನಿಸಿದ್ದ ಪವಿತ್ರಾ ಪ್ರತಿಕ್ರಿಯಿಸಿರಲಿಲ್ಲ. ಜೂನ್‌ 5ರಂದು ಮತ್ತೆ ಕೆಲವು ಅಶ್ಲೀಲ ಸಂದೇಶ ಬಂದಿದ್ದಕ್ಕೆ ಕೆರಳಿದ್ದ ಪವಿತ್ರಾ, ತಮ್ಮ ವ್ಯವಸ್ಥಾಪಕ ಕೆ.ಪವನ್‌ಗೆ ಈ ವಿಷಯ ತಿಳಿಸಿದ್ದರು. ಪವಿತ್ರಾ ಅವರ ಹೆಸರಿನಲ್ಲೇ ಪವನ್ ಸಂದೇಶ ಕಳುಹಿಸಿ, ರೇಣುಕಸ್ವಾಮಿ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದರು. ಈ ಮೊಬೈಲ್‌ ಸಂಖ್ಯೆಯನ್ನು ದರ್ಶನ್‌ ಅವರಿಗೆ ನೀಡಿದ್ದರು. ಚಿತ್ರದುರ್ಗದ ರಾಘವೇಂದ್ರನನ್ನು ಸಂಪರ್ಕಿಸಿದ್ದ ದರ್ಶನ್, ಸಂದೇಶ ಕಳುಹಿಸಿದ್ದ ವ್ಯಕ್ತಿಯನ್ನು ಕರೆತರುವಂತೆ ಸೂಚಿಸಿದ್ದರು. ನಟನನ್ನು ಭೇಟಿ ಮಾಡಿಸುವುದಾಗಿ ಆಮಿಷವೊಡ್ಡಿ ಪಟ್ಟಣಗೆರೆಯ ಶೆಡ್‌ಗೆ ಕರೆ ತಂದಿದ್ದರು.

‘ಕೃತ್ಯಕ್ಕೊ ಮೊದಲು ದರ್ಶನ್‌ ಅವರು ಆರ್.ಆರ್‌.ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಅದರ ಮಾಲೀಕ ವಿನಯ್‌, ನಟ ಚಿಕ್ಕಣ್ಣ ಅವರೊಂದಿಗೆ ಪಾರ್ಟಿ ನಡೆಸುತ್ತಿದ್ದರು. ಆಗ ಪವನ್‌ ಕರೆ ಮಾಡಿ ರೇಣುಕಸ್ವಾಮಿಯನ್ನು ಶೆಡ್‌ಗೆ ಕರೆ ತಂದಿರುವುದಾಗಿ ಮಾಹಿತಿ ನೀಡಿದ್ದರು. ಪಾರ್ಟಿಯಿಂದ ಗಡಿಬಿಡಿಯಲ್ಲಿ ಹೊರಟಿದ್ದ ದರ್ಶನ್ ಅವರು ರಾಜರಾಜೇಶ್ವರಿನಗರಕ್ಕೆ ತೆರಳಿ, ಅಲ್ಲಿಂದ ಪವಿತ್ರಾ ಜತೆಗೆ ಶೆಡ್‌ಗೆ ಬಂದಿದ್ದರು. ಶೆಡ್‌ನಲ್ಲಿ ರೇಣುಕಸ್ವಾಮಿಯನ್ನು ಕಂಡು ಆಕ್ರೋಶಗೊಂಡ ಪವಿತ್ರಾ ಚಪ್ಪಲಿಯಲ್ಲಿ ಹೊಡೆದಿದ್ದರು. ‘ಇವನಿಗೆ ಬದುಕಲು ಯೋಗ್ಯತೆ ಇಲ್ಲ. ಇವನನ್ನು ಸಾಯಿಸಿ...’ ಎಂದೂ ಕೂಗಾಡಿದ್ದರು. ಅದಾದ ಮೇಲೆ ದರ್ಶನ್‌ ಸೇರಿ 13 ಮಂದಿ ಹಲ್ಲೆ ನಡೆಸಿದ್ದರು. ಹಲ್ಲೆಗೂ ಮುನ್ನ ಕ್ಷಮೆ ಕೇಳಿಸಿ ವಿಡಿಯೊ ಮಾಡಿಕೊಂಡಿದ್ದರು’ ಎಂಬುದು ದೃಢಪಟ್ಟಿದೆ.

ಎಲೆಕ್ಟ್ರಿಕ್‌ ಶಾಕ್‌

‘ಆರೋಪಿ ಧನರಾಜ್‌ ಖರೀದಿಸಿ ತಂದಿದ್ದ ಮೆಗ್ಗರ್‌ ಉಪಕರಣದಿಂದ ರೇಣುಕಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್ ನೀಡಿದ್ದರು. ಕೆಲವರು ರೇಣುಕಸ್ವಾಮಿ ಮರ್ಮಾಂಗಕ್ಕೂ ಒದ್ದಿದ್ದರು. ಬ್ಯಾಟ್‌ನಿಂದ ಹೊಡೆದು ಶೆಡ್‌ನಲ್ಲಿ ನಿಂತಿದ್ದ ಲಾರಿಗೆ ತಲೆಯನ್ನು ಗುದ್ದಿಸಿದ್ದರು. ಈ ರೀತಿ ಬಲವಾದ ಹಲ್ಲೆಯಿಂದ ಸಾವಾಗಿದೆ ಎಂದು ಮರಣೋತ್ತರ ವರದಿಯಲ್ಲಿ ವಿವರಿಸಲಾಗಿತ್ತು. ಆ ವರದಿಯನ್ನೂ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ದರ್ಶನ್‌, ಪವಿತ್ರಾಗೌಡ, ನಾಗರಾಜ್‌, ವಿನಯ್‌, ರಾಘವೇಂದ್ರ ಸೇರಿ ಹಲವರು ಕೃತ್ಯ ನಡೆದ ವೇಳೆ ಧರಿಸಿದ್ದ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಇರುವುದು ಎಫ್‌ಎಸ್‌ಎಲ್‌ ವರದಿಯಲ್ಲಿ ತಾಳೆಯಾಗಿದೆ. ಕೃತ್ಯ ನಡೆದ ದಿನ ಆರೋಪಿಗಳು ಪರಸ್ಪರ ವಾಟ್ಸ್‌ಆ್ಯಪ್‌ ಕರೆ ಮಾಡಿರುವುದು ಹಾಗೂ ಚಾಟಿಂಗ್‌ ನಡೆಸಿರುವುದು ದೃಢಪಟ್ಟಿದೆ’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಆರೋಪಿಗಳು

ರೇಣುಕಾಸ್ವಾಮಿ ಕೊಲೆ ಆರೋಪಿಗಳು

ಆರೋಪಿಗಳ ವಿವರ

  1. ಪವಿತ್ರಾಗೌಡ, ಕೆಂಚೇನಹಳ್ಳಿ ರಸ್ತೆ, ರಾಜರಾಜೇಶ್ವರಿ ನಗರ

  2. ದರ್ಶನ್‌ ಅಲಿಯಾಸ್ ‘ಡಿ’ ಬಾಸ್‌, ರಾಜರಾಜೇಶ್ವರಿ ನಗರ

  3. ಕೆ.ಪವನ್‌, ಅಕ್ಕೂರು ಗ್ರಾಮ, ಚನ್ನಪಟ್ಟಣ, ರಾಮನಗರ

  4. ರಾಘವೇಂದ್ರ, ದೊಡ್ಡಹಟ್ಟಿ, ಚಿತ್ರದುರ್ಗ

  5. ನಂದೀಶ, ಚಾಮಲಾಪುರ, ಮಂಡ್ಯ

  6. ಜಗದೀಶ, ಚಿತ್ರದುರ್ಗ

  7. ಅನುಕುಮಾರ್‌, ಸಿಹಿನೀರು ಹೊಂಡ, ಹೊಳಲ್ಕೆರೆ ರಸ್ತೆ, ಚಿತ್ರದುರ್ಗ

  8. ರವಿಶಂಕರ್‌, ಕುರುಬರ ಹಟ್ಟಿ, ಚಿತ್ರದುರ್ಗ

  9. ಧನರಾಜ್‌, ರಾಜರಾಜೇಶ್ವರಿ ನಗರ

  10. ವಿ.ವಿನಯ್‌, ಪಟ್ಟಣಗೆರೆ

  11. ನಾಗರಾಜ್‌, ರಾಮಕೃಷ್ಣನಗರ, ಮೈಸೂರು

  12. ಲಕ್ಷ್ಮಣ್‌, ಆರ್‌ಪಿಸಿ ಲೇಔಟ್

  13. ದೀಪಕ್‌, ಬಿಇಎಂಎಲ್‌ ಲೇಔಟ್‌

  14. ಪ್ರದೂಷ್‌, ಜೆ.ಪಿ.ನಗರ

  15. ಕಾರ್ತಿಕ್‌, ಗಿರಿನಗರ

  16. ಕೇಶವಮೂರ್ತಿ, ಗಿರಿನಗರ

  17. ನಿಖಿಲ್‌ ನಾಯಕ್‌, ಬನ್ನೇರುಘಟ್ಟ ಮುಖ್ಯರಸ್ತೆ

ಯಾವಾಗ ಏನು?

ಜೂನ್‌ 8: ಕೊಲೆ ನಡೆದ ದಿನ ಜೂನ್‌ 9: ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ರಾಜಕಾಲುವೆಯ ಬಳಿ ಮೃತದೇಹ ಪತ್ತೆಜೂನ್‌ 10: ದರ್ಶನ್‌ ಅವರಿಂದ ಹಣ ಪಡೆದು ತಾವೇ ಕೊಲೆ ಮಾಡಿರುವುದಾಗಿ ಹೇಳಿ ನಾಲ್ವರು ಪೊಲೀಸರಿಗೆ ಶರಣಾಗಿದ್ದರುಜೂನ್‌ 11: ಮೈಸೂರಿನಲ್ಲಿ ದರ್ಶನ್‌ ಹಾಗೂ ಬೆಂಗಳೂರಿನಲ್ಲಿ ಪವಿತ್ರಾಗೌಡ ಅವರನ್ನು ಬಂಧಿಸಲಾಗಿತ್ತು

ಕೃತ್ಯ ಬಯಲಾಗಿದ್ದು ಹೇಗೆ?

‘ರೇಣುಕಸ್ವಾಮಿ ಕೊಲೆಯಾದ ನಂತರ ಗಾಬರಿಕೊಂಡಿದ್ದ ದರ್ಶನ್ ಹಾಗೂ ಸಹಚರರು ಕೂಡಲೇ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿ ವಿಚಾರ ತಿಳಿಸಿ ನೆರವು ಕೋರಿದ್ದರು. ಅವರ ಸಲಹೆ ಮೇರೆಗೆ ರೇಣುಕಸ್ವಾಮಿ ಮೃತದೇಹವನ್ನು ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್ ಮುಂಭಾಗದ ರಾಜಕಾಲುವೆ ಸಮೀಪ ಎಸೆದಿದ್ದರು. ತಾವೇ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗುವಂತೆ ನಾಲ್ವರ ಮನವೊಲಿಸಿ ವಿನಯ್‌ ಹಾಗೂ ದೀಪಕ್‌ ಮೂಲಕ ತಲಾ ₹5 ಲಕ್ಷ ಪಾವತಿಸಿದ್ದರು. ಅವರು ಶರಣಾಗಿದ್ದರು. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿತ್ತು’ ಎಂದು ಪೊಲೀಸರು ಹೇಳಿದರು. 

ಮೂವರು ಪ್ರತ್ಯಕ್ಷ ಸಾಕ್ಷಿದಾರರು

ಪಟ್ಟಣಗೆರೆ ಜಯಣ್ಣ ಅವರ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಕೃತ್ಯ ನಡೆದ ದಿನ ದರ್ಶನ್‌ ಅವರು ಜೀಪಿನಲ್ಲಿ ಬಂದುಹೋಗಿದ್ದನ್ನು ನೋಡಿದ್ದರು. ಅವರೂ ಸೇರಿದಂತೆ ಮೂವರನ್ನು ಪ್ರತ್ಯಕ್ಷ ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ. ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ಗಾರ್ಡ್‌ ಹಾಗೂ ಫುಡ್‌ ಡೆಲಿವರಿ ಹುಡುಗ ರೇಣುಕಸ್ವಾಮಿಯ ಮೃತದೇಹ ನೋಡಿದ್ದರು. ಆ ವಿವರವನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಲೊಕೇಶನ್‌ ಹೊಂದಾಣಿಕೆ

ದರ್ಶನ್ ಅವರು ಕೃತ್ಯ ನಡೆದ ಸ್ಥಳ ಕೃತ್ಯದ ನಡೆದ ಬಳಿಕ ಬೇರೆ ಬೇರೆ ಸ್ಥಳಗಳಿಗೆ ತೆರಳಿದ್ದು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್‌ ಲೊಕೇಶನ್‌ಗಳಲ್ಲಿ ಹೊಂದಾಣಿಕೆ ಆಗುತ್ತಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ‘ಜೂನ್ 8ರ ಸಂಜೆ ಪಾರ್ಟಿ ವೇಳೆ ರೇಣುಕಸ್ವಾಮಿಯನ್ನು ಶೆಡ್‌ಗೆ ಕರೆತಂದಿದ್ದ ಫೋಟೊ ಮೊಬೈಲ್‌ಗೆ ಬಂದಿತ್ತು. ನಂತರ ದರ್ಶನ್‌ ಹಾಗೂ ಪವಿತ್ರಾಗೌಡ ಜೀಪಿನಲ್ಲಿ ಶೆಡ್‌ಗೆ ತೆರಳಿದ್ದರು. ಅಲ್ಲಿಂದ ದರ್ಶನ್‌ ರಾಜರಾಜೇಶ್ವರಿ ನಗರಕ್ಕೆ ಹೋಗಿ ಬಟ್ಟೆ ಬದಲಿಸಿದ್ದರು. ಅಲ್ಲಿಂದ ಪತ್ನಿ ವಿಜಯಲಕ್ಷ್ಮಿ ಮನೆಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಿದ್ದರು. ಮರು ದಿನ ಮೈಸೂರಿನ ಫಾರ್ಮ್‌ ಹೌಸ್‌ಗೆ ಹೋಗಿದ್ದರು. ಅಲ್ಲಿಂದ ನೇರವಾಗಿ ಹೋಟೆಲ್‌ಗೆ ಬಂದಿದ್ದರು. ಅಲ್ಲಿಂದ ‘ಡೆವಿಲ್‌’ ಸಿನಿಮಾದ ಚಿತ್ರೀಕರಣ ಸ್ಥಳಕ್ಕೆ ತೆರಳಿದ್ದರು. ಜೂನ್‌ 11ರಂದು ಬೆಳಿಗ್ಗೆ ಜಿಮ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಸ್ಥಳದಲ್ಲಿನ ದೃಶ್ಯಾವಳಿ ಮೊಬೈಲ್‌ ಲೊಕೇಶನ್‌ ಹೊಂದಾಣಿಕೆ ಆಗಿದೆ. ಅದನ್ನೂ ನಮೂದಿಸಲಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT