ಭಾನುವಾರ, ಏಪ್ರಿಲ್ 2, 2023
33 °C
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕ ಪಥಸಂಚಲನ l ಯೋಧರ ಸಾಹಸ ಪ್ರದರ್ಶನ

ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ| ಸಂವಿಧಾನ ಶಿಲ್ಪಿಗೆ ನಮನ, ರೈತನ ಶ್ರಮ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಕರ್ಷಕ ಪಥಸಂಚಲನ, ಮಿಲಿಟರಿ ಬ್ಯಾಂಡ್‌ ಹಿಮ್ಮೇಳ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಧರ ಸಾಹಸ ಪ್ರದರ್ಶನಗಳು 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಮನಸೆಳೆದವು.

ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ವಿಕ್ರಮಾದಿತ್ಯ ಸಿಂಗ್‌ ನೇತೃತ್ವದಲ್ಲಿ ಪರೇಡ್‌ ನಡೆಯಿತು.

ವಾಯುಪಡೆ, ಎಂಇಜಿ, ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್‌ ಪಡೆ, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ, ಬೆಂಗಳೂರು ನಗರ ಸಂಚಾರ ಪೊಲೀಸ್‌ ಸೇರಿ 30 ತುಕಡಿಗಳು ಭಾಗವಹಿಸಿದ್ದವು. ರಮಣ ಮಹರ್ಷಿ ಶಾಲೆಯ ಅಂಧ ಮಕ್ಕಳು ಆತ್ಮವಿಶ್ವಾಸದಿಂದ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು. ಶ್ವಾನದಳವೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕೇರಳ ಪೊಲೀಸ್‌ ತಂಡವು ಸಬ್‌ಇನ್‌ಸ್ಪೆಕ್ಟರ್‌ ಅಂಬಿಕಾ ಶ್ರೀಧರನ್‌ ನೇತೃತ್ವದಲ್ಲಿ ಪಾಲ್ಗೊಂಡಿತ್ತು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ರೂಪಿಸಿದ್ದ ಸ್ತಬ್ಧಚಿತ್ರವು ಕೂಡ ಈ ಸಂದರ್ಭದಲ್ಲಿ ಗಮನಸೆಳೆಯಿತು.

ಸಂವಿಧಾನ ಶಿಲ್ಪಿಗೆ ನಮನ: ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್‌ ಶಾಲೆಯ 750 ವಿದ್ಯಾರ್ಥಿಗಳು ಪ್ರದರ್ಶಿಸಿದ ’ಮಹಾನಾಯಕ‘ ನೃತ್ಯರೂಪಕವನ್ನು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಬದುಕಿನ ಹೋರಾಟದ ಹಾದಿ, ಸಾಹಸ ಗಾಥೆ ಮತ್ತು ಸ್ಫೂರ್ತಿಯ ಸೆಲೆಯಾಗಿ ಬಿಂಬಿಸಲಾಯಿತು.

ಮಾಗಡಿ ರಸ್ತೆಯ ಬಿಬಿಎಂಪಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಹಾಗೂ ವಿಜಯ ನಗರದ ಬಿಬಿಎಂಪಿ ಪ್ರೌಢಶಾಲೆಯ 650 ವಿದ್ಯಾರ್ಥಿಗಳು ಪ್ರದರ್ಶಿಸಿದ ‘ನಮ್ಮ ಭಾರತ ಭಾಗ್ಯ ವಿಧಾತ– ರೈತ’ ನೃತ್ಯರೂಪಕವು, ಅನ್ನದಾತ ಎದುರಿಸುತ್ತಿರುವ ಸಂಕಷ್ಟಗಳನ್ನು ಅನಾವರಣಗೊಳಿಸಿತು. ದಲ್ಲಾಳಿಗಳು, ಬಂಡವಾಳಶಾಹಿಗಳು, ಭೂಕಬಳಿಕೆದಾರರ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿರುವ ರೈತನ ಕುರಿತಾದ ಈ ರೂಪಕವು ಕಾಯಕಯೋಗಿಯ ಶ್ರಮವನ್ನು ಬಿಂಬಿಸಿತು. 

ಲಗ್ಗೆರೆಯ ಸಿರಿ ಸ್ಕೂಲ್‌, ವಿಷ್ಣು ಇಂಟರ್‌ನ್ಯಾಷನಲ್‌ ಸ್ಕೂಲ್‌, ವಿಷ್ಣು ಸ್ಕೂಲ್‌ನ 600 ವಿದ್ಯಾರ್ಥಿಗಳು ’ಭಾರತಾಂಬೆ ನಿನ್ನ ಜನ್ಮ ದಿನ‘ ನೃತ್ಯ ರೂಪಕವು ಗಮನಸೆಳೆಯಿತು. ಎಂಇಜಿ ಆ್ಯಂಡ್‌ ಸೆಂಟರ್‌ ತಂಡದ ಯೋಧರ ಸಾಹಸ ಪ್ರದರ್ಶನ ’ಕಲರಿ ಪಯಟ್ಟು‘ ಪ್ರೇಕ್ಷಕರನ್ನು
ರಂಜಿಸಿತು.

ಮೈನವಿರೇಳಿಸಿದ ಬೈಕ್‌ ಸಾಹಸ:  ದಿ ಆರ್ಮಿ ಸರ್ವಿಸ್‌ ಕ್ರಾಪ್ಸ್‌ನ ‘ಟಾರ್ನಾಡೊ’ ಯೋಧರು ಪ್ರದರ್ಶಿಸಿದ ಬೈಕ್‌ ಸಾಹಸ ನೋಡುಗರ ಮೈನವಿರೇಳಿಸಿತು. ಸೀಜರ್ ಕ್ರಾಸಿಂಗ್, ಡೈಮಂಡ್ ಕ್ರಾಸಿಂಗ್, ಒನ್ ಲೆಗ್ ರೈಡಿಂಗ್, ಸೈಡ್ ಬ್ಯಾಲೆನ್ಸಿಂಗ್‌ನಂತಹ ಕಸರತ್ತು ಪ್ರದರ್ಶಿಸಿದರು.

ಕೇರಳ: ಕೆಎಸ್‌ಆರ್‌ಪಿ ಮಹಿಳಾ ಪಡೆ ಪಥಸಂಚಲನ

ಕೇರಳದ ತಿರುವನಂತಪುರ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಮಹಿಳಾ ಸಿಬ್ಬಂದಿ ಪಡೆ, ಪೊಲೀಸ್ ಪೇಟ ಧರಿಸಿ ಶ‌ಸ್ತ್ರಸಜ್ಜಿತವಾಗಿ ಹೆಜ್ಜೆ ಹಾಕಿತು. ಅಧಿಕಾರಿಗಳು ಸೇರಿದಂತೆ 44 ಸಿಬ್ಬಂದಿ ತಂಡದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು