ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಣರಾಜ್ಯೋತ್ಸವ | 1500 ಮಕ್ಕಳಿಂದ ಸಾಂಸ್ಕೃತಿಕ ನೃತ್ಯ; ತಾಲೀಮು

ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಷಾ ಪರೇಡ್‌ ಮೈದಾನ
Published 24 ಜನವರಿ 2024, 22:39 IST
Last Updated 24 ಜನವರಿ 2024, 22:39 IST
ಅಕ್ಷರ ಗಾತ್ರ

ಬೆಂಗಳೂರು: ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಜ.26ರಂದು ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 1,500 ಮಕ್ಕಳು ಭಾಗವಹಿಸಲಿದ್ದಾರೆ.

ಮೈದಾನದಲ್ಲಿ ಪೂರ್ವಭಾವಿ ಸಿದ್ಧತೆಗಳನ್ನು ಬುಧವಾರ ಪರಿಶೀಲಿಸಿದ ನಂತರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ‘ಈ ದೇಶವು ನಮಗಾಗಿಯೇ ಎಂದೆಂದಿಗೂ... ಹಾಡಿಗೆ ಹೆಗ್ಗನಹಳ್ಳಿ ಕರ್ನಾಟಕ ಪಬ್ಲಿಕ್‌ ಶಾಲೆಯ 700 ಮಕ್ಕಳು ಹಾಗೂ ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ’ ಹಾಡಿಗೆ ಪಿಳ್ಳಣ್ಣಗಾರ್ಡನ್‌ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 700 ಮಕ್ಕಳು ನೃತ್ಯ ಮಾಡಲಿದ್ದಾರೆ‘ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕೇರಳ ಪೊಲೀಸ್‌, ಸ್ಕೌಟ್ಸ್‌–ಗೈಡ್ಸ್‌, ಎನ್‌ಸಿಸಿ, ಸೇವಾದಳ ಮತ್ತು ವಿವಿಧ ಶಾಲೆಗಳ ಮಕ್ಕಳು ಕವಾಯತು ಮತ್ತು ಬ್ಯಾಂಡ್‌ಗಳನ್ನು 38 ತುಕಡಿಗಳಲ್ಲಿ 1,150 ಮಂದಿ ನಡೆಸಿಕೊಡಲಿದ್ದಾರೆ. ಎಂಇಜಿ ತಂಡ ‘ಕಳರಿಪಯಟ್ಟು’, ಎಎಸ್‌ಸಿ ಸೆಂಟರ್‌ನ ಅನೀಶ್‌ ಥಾಮಸ್‌ ತಂಡದವರು ‘ದ್ವಿಚಕ್ರ ವಾಹನ ಸಾಹಸ’ ಪ್ರದರ್ಶನ ನೀಡಲಿದ್ದಾರೆ. ಎಸ್‌ಎಫ್‌ ವಿಶೇಷ ತಂಡದ ಜೇಮ್ಸ್‌ ಅವರು ‘ಅಡಗು ತಾಣಗಳಲ್ಲಿ ಹೊಕ್ಕು ದಾಳಿ ಮಾಡುವ ನಿರೂಪಣೆ’ಯನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

ನಗರ ಪೊಲೀಸ್ ಕಮಿಷನರ್‌ ದಯಾನಂದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಉಪಸ್ಥಿತರಿದ್ದರು.

ವಾಹನ ಸಂಚಾರ ಮಾರ್ಗ ಬದಲಾವಣೆ

ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಜ.26ರಂದು ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಕಾರುಗಳ ಪಾಸ್‌ ಹೊಂದಿರುವ ಎಲ್ಲ ಆಹ್ವಾನಿತರು ನಿಗದಿತ ಗೇಟ್‌ಗಳಲ್ಲಿ ‍ಪ್ರವೇಶಿಸಬೇಕು. ತುರ್ತುಸೇವಾ ವಾಹನಗಳಾದ ಆಂಬುಲೆನ್ಸ್‌, ಅಗ್ನಿ ಶಾಮಕದಳದ ವಾಹನಗಳು, ನೀರಿನ ಟ್ಯಾಂಕರ್‌, ಕೆಎಸ್‌ಆರ್‌ಪಿ, ಸಿಆರ್‌ಟಿ, ಬಿಬಿಎಂಪಿ, ಪಿಬ್ಲ್ಯುಡಿ ವಾಹನಗಳು ಪ್ರವೇಶ ದ್ವಾರ–2ರ ಮೂಲಕ ಪರೇಡ್‌ ಮೈದಾನಕ್ಕೆ ಪ್ರವೇಶಿಸಿ, ನಂತರ ಪೋರ್ಟ್‌ ವಾಲ್‌ ಹಿಂಭಾಗದಲ್ಲಿ (ದಕ್ಷಿಣ ಕಡೆಗೆ ) ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಸೂಚಿಸಲಾಗಿದೆ.

ಅಂದು ಬೆಳಿಗ್ಗೆ 8.30ರಿಂದ ಬೆಳಿಗ್ಗೆ 10.30ರ ವರೆಗೆ ಕಬ್ಬನ್‌ ರಸ್ತೆಯಲ್ಲಿ ಬರುವ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಿ, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿ ರಸ್ತೆ, ಸಫೀನಾ ಪ್ಲಾಜಾ– ಎಡ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ– ಆಲೀಸ್‌ ವೃತ್ತ– ಡಿಸ್ಪೆನ್ಸರಿ ರಸ್ತೆ– ಕಾಮರಾಜ ರಸ್ತೆ,– ಕಬ್ಬನ್‌ ರಸ್ತೆ ಮತ್ತು ಕಾಮರಾಜ ರಸ್ತೆಯ ಜಂಕ್ಷನ್‌ನಲ್ಲಿ ಎಡಕ್ಕೆ ತಿರವು ಪಡೆದು ಕಬ್ಬನ್‌ ರಸ್ತೆ ಮೂಲಕ ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗಬಹುದು.

ಕಬ್ಬನ್‌ ರಸ್ತೆಯಲ್ಲಿ, ಮಣಿಪಾಲ್‌ ಸೆಂಟರ್‌ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್‌ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್‌ ಸೆಂಟರ್‌ ಬಳಿ ನಿರ್ಬಂಧಿಸಿದ್ದು, ವಾಹನಗಳು ವೆಬ್ಸ್‌ ಜಂಕ್ಷನ್‌ ಬಳಿ ಬಲಕ್ಕೆ ತಿರುವು ಪಡೆದು ಎಂ.ಜಿ.ರಸ್ತೆಯ ಮೂಲಕ ಮೆಯೋಹಾಲ್‌, ಕಾವೇರಿ ಎಂಪೋರಿಯಂ, ಅನಿಲ್‌ ಕುಂಬ್ಳೆ ವೃತ್ತದಲ್ಲಿ ತಿರುವು ಪಡೆದು ಮುಂದಕ್ಕೆ ಸಾಗಬಹುದು.

ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್‌ ಸ್ಟ್ರೀಟ್‌ ರಸ್ತೆಯಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು ಇನ್‌ಫೆಂಟ್ರಿ ರಸ್ತೆ–ಸಫೀನಾ ಪ್ಲಾಜಾ ಬಳಿ ಎಡಕ್ಕೆ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ – ಆಲಿ ಸರ್ಕಲ್‌– ಡಿಸ್ಪೆನ್ಸರಿ ರಸ್ತೆ– ಕಾಮರಾಜ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಕಬ್ಬನ್‌ ರಸ್ತೆಯ ಮೂಲಕ ಮಣಿಪಾಲ್‌ ಸೆಂಟರ್‌ ಕಡೆಗೆ ವಾಹನಗಳು ಸಾಗಬಹುದು.

ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್‌ ನಿಲ್ದಾಣದವರೆಗೆ, ಕಬ್ಬನ್‌ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್ ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ, ಎಂ.ಜಿ .ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ ಅಂದು ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT