ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ: ಪೌರಕಾರ್ಮಿಕರ ಮೊದಲ ಪಥಸಂಚಲನ

ಸಜ್ಜುಗೊಳ್ಳುತ್ತಿದೆ ಮಾಣೆಕ್‌ ಷಾ ಪರೇಡ್‌ ಮೈದಾನ,
Last Updated 24 ಜನವರಿ 2020, 23:22 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಇದೇ ಮೊದಲ ಬಾರಿಗೆ ಬಿಬಿಎಂಪಿ ಪೌರಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ.

ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನ ಸಜ್ಜಾಗುತ್ತಿದೆ.ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಕೆಎಸ್‌ಆರ್‌ಪಿ, ಸ್ಕೌಟ್ಸ್‌-ಗೈಡ್ಸ್‌, ಎನ್‌ಸಿಸಿ, ಸೇವಾದಳದ ಸದಸ್ಯರು ಹಾಗೂ ಸಾವಿರಾರು ಮಕ್ಕಳು ಶುಕ್ರವಾರ ಅಂತಿಮ ತಾಲೀಮು ನಡೆಸಿದರು.

ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್, ‘ನಗರದ ಸ್ವಚ್ಛತೆಗೆ ಪರಿಶ್ರಮಿಸುವ ಪೌರಕಾರ್ಮಿಕರನ್ನು ಗೌರವಿಸುವ ಉದ್ದೇಶದಿಂದ ಈ ಬಾರಿ ಪಥಸಂಚಲನದಲ್ಲಿ ಅವರಿಗೂ ಅವಕಾಶ ನೀಡಲಾಗಿದೆ.ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಹಾಗೂ ಸ್ವಚ್ಚ ಭಾರತ ಅಭಿಯಾನ ಅಡಿಅವರನ್ನು ಪ್ರೋತ್ಸಾಹಿಸುವ ಉದ್ದೇಶವೂ ಇದರಲ್ಲಿದೆ. ಪೌರಕಾರ್ಮಿಕರೂ ಸೇರಿದಂತೆ ವಿವಿಧ ತುಕಡಿಗಳ ಒಟ್ಟು 1,750 ಮಂದಿ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

‘ಭಾನುವಾರ ಬೆಳಗ್ಗೆ 8.58ಕ್ಕೆ ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದಾರೆ. ಬಳಿಕ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ವಾಯುಪಡೆಯ ಹೆಲಿಕಾಪ್ಟರ್‌ ಮೂಲಕ ಹೂವಿನ ಮಳೆಗೆರೆಯಲಾಗುತ್ತದೆ.ಬಳಿಕ ಪರೇಡ್‌ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಪಥಸಂಚಲನದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.

ಸಾರ್ವಜನಿಕರಿಗಾಗಿ 4,000, ಅತಿಗಣ್ಯರಿಗೆ 2,000, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ 2,000, ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗಾಗಿ 2,000 ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ನಗರ ಪೊಲೀಸ್‌ ಕಮಿಷನರ್ ಭಾಸ್ಕರ್‌ರಾವ್‌, ‘ಮಾಣೆಕ್‌ ಷಾ ಪರೇಡ್‌ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. ಮೈದಾನದ ಸಮೀಪದಲ್ಲಿರುವ ಎತ್ತರದ ಕಟ್ಟಡಗಳು, ಕಾಮಗಾರಿ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಜತೆಗೆ ನಗರದ ಎಲ್ಲಾ ಪೊಲೀಸ್‌ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯಲ್ಲಿನ ರೈಲು ನಿಲ್ದಾಣ, ಹೋಟೆಲ್‌ಗ‌ಳು ಸೇರಿದಂತೆ ಎಲ್ಲೆಡೆಯೂ ಪರಿಶೀಲನೆ ನಡೆಸಲಾಗಿದೆ’ ಎಂದು ತಿಳಿಸಿದರು.

‘ಮೈದಾನದ ನಾಲ್ಕೂ ದ್ವಾರಗಳಲ್ಲೂ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ. ಮೈದಾನದ ಒಳಗೆ ಅಥವಾ ಸುತ್ತ ಮುತ್ತಲ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು, ವ್ಯಕ್ತಿ ಕಂಡು ಬಂದರೆ ಸರ್ವಜನಿಕರು ಹತ್ತಿರದ ಪೊಲೀಸ್‌ ಸಿಬ್ಬಂದಿಗೆ ತಿಳಿಸಬಹುದು’ ಎಂದು ಅವರು ತಿಳಿಸಿದರು.

ನಮ್ಮ ಮೆಟ್ರೊ: ಕಾಗದದ ಟಿಕೆಟ್‌ ಸೌಲಭ್ಯ
ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಈ ಶನಿವಾರ ಮತ್ತು ಭಾನುವಾರ ಮರು ಪ್ರಯಾಣಕ್ಕಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು ಕಾಗದದ ಟಿಕೆಟ್‌ಗಳನ್ನು ನೀಡಲಿದೆ.

ಈ ದಿನಗಳಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದಿಂದ ಯಾವುದೇ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸಲು ₹30 ಟಿಕೆಟ್‌ ದರ ನಿಗದಿ ಪಡಿಸಲಾಗಿದೆ.

ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಈ ದಿನಗಳಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕಾಗದದ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಲಾಲ್‌ಬಾಗ್‌ ನಿಲ್ದಾಣದಲ್ಲಿ ಮಾತ್ರ ಕಾಗದದ ಟಿಕೆಟ್‌ ರಾತ್ರಿ 8ರವರೆಗೆ ಲಭ್ಯ ಎಂದು ನಿಗಮ ಹೇಳಿದೆ.

ಸಂಚಾರ ನಿರ್ಬಂಧ: ಬದಲಿ ಮಾರ್ಗ
ಗಣರಾಜ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ ಭಾನುವಾರ ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆಯ ಸುತ್ತ–ಮುತ್ತ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಜ. 26ರಂದು ಬೆಳಗ್ಗೆ 8ರಿಂದ 10.30ರ ವರೆಗೆ ಕಬ್ಬನ್‌ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೂ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗವನ್ನು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

*ಕಬ್ಬನ್‌ ಪಾರ್ಕ್‌, ಬಿವಿಆರ್‌ ಜಂಕ್ಷನ್‌ ಕಡೆಯಿಂದ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ಇನ್‌ಫೆಂಟ್ರಿ ರಸ್ತೆಗೆ ಬಂದು ಸಫೀನಾ ಪ್ಲಾಜಾದ ಬಳಿ ಎಡ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ – ಆಲೀಸ್‌ ಸರ್ಕಲ್‌- ಡಿಸ್ಪೆನ್ಸರಿ
ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕನ್ಸನ್‌ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆದು ಮಣಿಪಾಲ್‌ ಸೆಂಟರ್‌ಗೆ ಹೋಗಬಹುದು.

*ಮಣಿಪಾಲ್‌ ಸೆಂಟರ್‌ ಕಡೆಯಿಂದ ಬಿಆರ್‌ವಿ ಜಂಕ್ಷನ್‌ ಕಡೆ ಹೋಗುವ ವಾಹನಗಳು ಎಂ.ಜಿ.ರಸ್ತೆಗೆ ತೆರಳಿ ಅನಿಲ್‌ಕುಂಬ್ಳೆ ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುವ ಮೂಲಕ ಸಾಗಬಹುದು.

*ಭದ್ರತಾ ದೃಷ್ಟಿ ಹಿನ್ನೆಲೆ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ಮಾಣೆಕ್ ಷಾ ಮೈದಾನ ಸುತ್ತ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧಿಸಿದ ರಸ್ತೆಗಳು:

*ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್‌ ನಿಲ್ದಾಣವರೆಗೆ.

*ಕಬ್ಬನ್‌ ರಸ್ತೆ, ಸಿಟಿಒ ವೃತ್ತ, ಕೆ.ಆರ್‌.ರಸ್ತೆ.

*ಎಂ.ಜಿ.ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ರಸ್ತೆವರೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT