ಭಾನುವಾರ, ಸೆಪ್ಟೆಂಬರ್ 19, 2021
29 °C

ಜಾಗ ಮಂಜೂರಾತಿಗೆ ಒಕ್ಕಲಿಗರ ಸಂಘದಿಂದ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಶವಂತಪುರ ಹೋಬಳಿಯ ಶ್ರೀಗಂಧದ ಕಾವಲು ಸರ್ವೆ ನಂಬರ್ 129ರಲ್ಲಿರುವ 15 ಎಕರೆ ಜಾಗವನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ಮಂಜೂರು ಮಾಡಿಕೊಡಬೇಕು ಎಂದು ಕಂದಾಯ ಸಚಿವ ಆರ್‌. ಅಶೋಕ ಅವರಿಗೆ ರಾಜ್ಯ ಒಕ್ಕಲಿಗರ ಸಂಘ ಗುರುವಾರ ಮನವಿ ಸಲ್ಲಿಸಿದೆ.

1906ರಲ್ಲಿ ಸ್ಥಾಪನೆಗೊಂಡಿರುವ ಸಂಘ, ಒಕ್ಕಲಿಗರ ಸಮುದಾಯದ ಉನ್ನತಿಗಾಗಿ ಶ್ರಮಿಸುತ್ತಿದೆ. ಸಂಘದಲ್ಲಿ ಸದ್ಯ 5.29 ಲಕ್ಷ ಸದಸ್ಯರಿದ್ದಾರೆ. ಈಗಾಗಲೇ 26 ಶಿಕ್ಷಣ ಸಂಸ್ಥೆಗಳನ್ನು, 15 ಉಚಿತ ವಿದ್ಯಾರ್ಥಿ ನಿಲಯಗಳು ಮತ್ತು ಆಸ್ಪತ್ರೆಯನ್ನು ಸ್ಥಾಪಿಸಿ, ನಡೆಸುತ್ತಿದೆ. 1967ರಲ್ಲಿ ಶ್ರೀಗಂಧ ಕಾವಲ್ ಗ್ರಾಮದ ಸರ್ವೆ ನಂಬರ್‌ 51ರಲ್ಲಿ ಗೋಲ್ಡನ್‌ ವ್ಯಾಲಿ ಎಜುಕೇಷನ್‌ ಟ್ರಸ್ಟ್‌ಗೆ 10 ಎಕರೆ ಗ್ರಾಂಟ್‌ ಮತ್ತು 15 ಎಕರೆ ಭೋಗ್ಯಕ್ಕೆ (ಲೀಜ್‌) ಸೇರಿ ಒಟ್ಟು 25 ಎಕರೆ ಜಮೀನು ಮಂಜೂರು ಮಾಡಿದೆ. ಮರು ಸರ್ವೆಯ ನಂತರ ಮಂಜೂರು ಮಾಡಿರುವ ಜಾಗವನ್ನು ಸರ್ವೆ ನಂಬರ್‌ 128 ಮತ್ತು ಭೋಗ್ಯದ ಜಾಗಕ್ಕೆ 129 ಎಂದು ಸಂಖ್ಯೆ ನೀಡಲಾಗಿದೆ. ಭೋಗ್ಯಕ್ಕೆ ನೀಡಿದ ಜಾಗವನ್ನು ಸಂಘ  ಅಭಿವೃದ್ಧಿಪಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಜಾಗದಲ್ಲಿ ಸಂಘವು ಪ್ರಾಥಮಿಕ ಶಾಲೆ, ಕಾಲೇಜು ನಡೆಸುತ್ತಿದ್ದು, ಸುಮಾರು 2 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 2010ರಲ್ಲಿ ಭೋಗ್ಯ ರದ್ದುಪಡಿಸಲಾಗಿದೆ. ಆದರೆ, ಈ ಜಾಗ ಈಗಲೂ ಸಂಘದ ಸುಪರ್ದಿಯಲ್ಲಿದೆ. ಈ ಜಾಗದಲ್ಲಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು ಸ್ಥಾಪಿಸಲು ಸಂಘ ಉದ್ದೇಶಿಸಿದೆ. ಆದ್ದರಿಂದ, ಜಾಗವನ್ನು ಸಂಘದ ಹೆಸರಿಗೆ ಮಂಜೂರು ಮಾಡಿಕೊಡಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ.

ರಾಜ್ಯ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಆಡಿಟರ್‌ ನಾಗರಾಜ್‌ ಯಲಚವಾಡಿ, ಸಂಘದ ನಿಕಟಪೂರ್ವ ನಿರ್ದೇಶಕರೂ ಆಗಿರುವ ವಿಧಾನ ಪರಿಷತ್ ಸದಸ್ಯ ಆ. ದೇವೇಗೌಡ, ಪ್ರೊ. ಮಲ್ಲಯ್ಯ, ಪ್ರೊ. ನಾಗರಾಜ್, ಅಪ್ಪಾಜಿಗೌಡ, ಎಂ.ಎ. ಆನಂದ್, ಜಾಲಳ್ಳಿ ಎ. ರವಿ, ಮುನೇಗೌಡ, ಗಾಯಕರ ಆಲೂರು ನಾಗಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು