ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಮೋದನೆಯಾಗದ ನಿವೇಶನಗಳು/ಖಾತೆಗಳ ನೋಂದಣಿ/ಖಾತಾ ವರ್ಗಾವಣೆಯನ್ನು ನಿಲ್ಲಿಸಿರುವುದರಿಂದ ಉಂಟಾಗಿರುವ ಸಮಸ್ಯೆ ನಿವಾರಿಸಲು ಕಾನೂನಿಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ನಿಯಮ 69ರ ಅಡಿಯಲ್ಲಿ ಸದಸ್ಯರಾದ ಹರತಾಳು ಹಾಲಪ್ಪ, ಸಿದ್ದು ಸವದಿ, ಸುಭಾಷ್ ಗುತ್ತೇದಾರ್ ಹಾಗೂ ಕಳಕಪ್ಪ ಜಿ.ಬಂಡಿ ಅವರು ನಗರ ಪ್ರದೇಶದ
ನಿವೇಶನಗಳ ಖಾತಾ ದಾಖಲು/ವರ್ಗಾವಣೆ ಸ್ಥಗಿತದಿಂದ ಸಾರ್ವಜನಿಕರಿಗೆ ಆಗಿರುವ ತೊಂದರೆಗಳ ಬಗ್ಗೆ ಗಮನ ಸೆಳೆದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ‘ಅನಧಿಕೃತ ಬಡಾವಣೆಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961ಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ನಿಯಮಗಳ ಅನ್ವಯ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬಂದಿರುವ ಅನಧಿಕೃತ ಬಡಾವಣೆಗಳನ್ನು ಆಯಾ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಯೋಜನಾ ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಡ್ವೊಕೇಟ್ ಜನರಲ್ ಜತೆಗೆ ಸಮಾಲೋಚನೆ ನಡೆಸಲಾಗಿದೆ’ ಎಂದರು.
ಹರತಾಳು ಹಾಲಪ್ಪ, ‘ಗೊಂದಲ ಸೃಷ್ಟಿಯಾಗಿದ್ದರಿಂದ ಆಸ್ತಿಗಳ ನೋಂದಣಿ ಆಗುತ್ತಿಲ್ಲ’ ಎಂದರು.
ಆರಗ ಜ್ಞಾನೇಂದ್ರ, ‘ಈ ಸಮಸ್ಯೆ ರಾಜ್ಯವ್ಯಾಪಿ ಇದೆ. ಇ–ಖಾತೆ ಆಗುತ್ತಿಲ್ಲ’ ಎಂದರು. ಉತ್ತರ ಕನ್ನಡ ಜಿಲ್ಲೆಯ ಆಸ್ತಿ ನೋಂದಣಿ ಬಗ್ಗೆ ದಿನಕರ ಶೆಟ್ಟಿ ಗಮನ ಸೆಳೆದರು.
ಮಾಗಡಿಯ ಮಂಜುನಾಥ್, ‘ರಾಮನಗರ ನಗರಸಭೆಯಲ್ಲಿ 1,909 ನಿಯಮಬಾಹಿರ ಖಾತೆಗಳ ನೋಂದಣಿ ಆಗಿದೆ. ಅಲ್ಲಿ ತಪ್ಪು ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಎಲ್ಲರಿಗೂ ತೊಂದರೆ ಕೊಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.
ಬಿಜೆಪಿಯ ಜ್ಯೋತಿ ಗಣೇಶ್, ‘ತುಮಕೂರಿನಲ್ಲಿ 8 ಸಾವಿರ ಖಾತೆಗಳಿಗೆ ಎ ಖಾತೆ ನೀಡಲಾಗಿದೆ. ಆಯುಕ್ತರ ಹಂತದ ಅಧಿಕಾರಿಯೇ ಈ ಅಕ್ರಮ ನಡೆಸಿದ್ದಾರೆ. ಇದು ₹70 ಕೋಟಿಯ ಅವ್ಯವಹಾರ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.