ಬುಧವಾರ, ನವೆಂಬರ್ 20, 2019
28 °C
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಕಾವೇರಿ–ಭೂಮಿ ತಂತ್ರಾಂಶ: ಮಾಹಿತಿ ಕೇಳಿದ ಕೋರ್ಟ್‌

Published:
Updated:

ಬೆಂಗಳೂರು: ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ‘ಕಾವೇರಿ’ ಹಾಗೂ ‘ಭೂಮಿ’ ತಂತ್ರಾಂಶ ಅನುಷ್ಠಾನಗೊಂಡಿದೆಯೋ ಇಲ್ಲವೊ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಕೆ.ಆರ್.ಪುರ ನಿವಾಸಿ ಕೆ.ಸುಸೈರಾಜ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಪಿ.ಬಿ.ಅಚ್ಚಪ್ಪ ಆಕ್ಷೇಪಣಾ ಪತ್ರ ಸಲ್ಲಿಸಿ, ‘ಸರ್ಕಾರಿ ಜಮೀನು ನೋಂದಣಿ ತಡೆಯುವ ನಿಟ್ಟಿನಲ್ಲಿ ತಂತ್ರಾಶದ ಮೂಲ ಸಮರ್ಥವಾಗಿ ಕೆಲಸ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಇದನ್ನು ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ರವಿ, ‘ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸರ್ಕಾರಿ ಜಮೀನು ನೋಂದಣಿ ಕಾರ್ಯ ಈಗಲೂ ಮುಂದುವರಿಯತ್ತಲೇ ಇದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ತಂತ್ರಾಂಶವನ್ನು ಎಂದಿನಿಂದ ಅನುಷ್ಠಾನಕ್ಕೆ ತರಲಾಗಿದೆ. ಸರ್ಕಾರ ಜಮೀನಿನ ಮಾಹಿತಿಯನ್ನು ಯಾವ ಆಧಾರದ ಮೇಲೆ ಸಂಗ್ರಹಿಸಲಾಗುತ್ತಿದೆ, ಈ ತಂತ್ರಾಂಶ ಬಳಸಿ ಎಷ್ಟು ಜಮೀನಿನ ನೋಂದಣಿ ತಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿ’ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಕೋರಿಕೆ ಏನು?: ‘ರಾಜ್ಯದಲ್ಲಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳು ನೋಂದಣಿ ಮಾಡಿಸಿಕೊಳ್ಳುತ್ತಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಇದನ್ನು ತಡೆಯಲು ಕಂಪ್ಯೂಟರ್ ಲಾಕಿಂಗ್ ಮಾದರಿಯ ತಂತ್ರಾಂಶ ಸಿದ್ಧಪಡಿಸಲು ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಪ್ರತಿಕ್ರಿಯಿಸಿ (+)