ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RGUHS ಘಟಿಕೋತ್ಸವ ನಾಳೆ: 88 ವಿದ್ಯಾರ್ಥಿಗಳಿಗೆ 100 ಚಿನ್ನದ ಪದಕ

Published 26 ಫೆಬ್ರುವರಿ 2024, 15:52 IST
Last Updated 26 ಫೆಬ್ರುವರಿ 2024, 15:52 IST
ಅಕ್ಷರ ಗಾತ್ರ

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ 88 ವಿದ್ಯಾರ್ಥಿಗಳು 100 ಚಿನ್ನದ ಪದಕ ಪಡೆಯಲಿದ್ದಾರೆ.

ಆರು ವಿದ್ಯಾರ್ಥಿನಿಯರು ಒಂದಕ್ಕಿಂತ ಹೆಚ್ಚು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಮಂಗಳವಾರ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಪದಕಗಳ ಜೊತೆಗೆ ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ರಮೇಶ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ವಿವಿಧ ವಿಷಯಗಳಲ್ಲಿ 52,650 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. 17 ಪಿಎಚ್‌.ಡಿ, 156 ಸೂಪರ್‌ ಸ್ಪೆಷಾಲಿಟಿ, 7,815 ಸ್ನಾತಕೋತ್ತರ ಪದವಿ, 7 ಸ್ನಾತಕೋತ್ತರ ಡಿಪ್ಲೊಮಾ, 122 ಫೆಲೋಷಿಪ್ ಕೋರ್ಸ್‌, 8 ಸರ್ಟಿಫಿಕೇಟ್‌ ಕೋರ್ಸ್‌ ಹಾಗೂ 44,525 ಸ್ನಾತಕ ಅಭ್ಯರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು. ವಿಶ್ವವಿದ್ಯಾಲಯದ ಎಲ್ಲ ನಿಕಾಯಗಳ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಶೇ 82.43ರಷ್ಟಾಗಿದೆ ಎಂದು ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳಿಗೆ ಪ್ರದಾನ ಮಾಡುವ ಚಿನ್ನದ ಪದಕವು 22 ಕ್ಯಾರೆಟ್‌ ಇದ್ದು, ತಲಾ 5 ಗ್ರಾಂ ತೂಕವಿರುತ್ತದೆ. ವಿಶ್ವವಿದ್ಯಾಲಯದ ಸಂಪನ್ಮೂಲ ಹಾಗೂ ದಾನಿಗಳ ದೇಣಿಗೆಯ ನಿಧಿಯಿಂದ ಈ ವೆಚ್ಚ ಭರಿಸಲಾಗುತ್ತದೆ’ ಎಂದು ಹೇಳಿದರು.

ನವದೆಹಲಿಯ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ. ಬಿ.ಎನ್‌. ಗಂಗಾಧರ್‌, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಆರ್‌. ಪಾಟೀಲ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಜ್ಞಾ ಎನ್‌.
ಪ್ರಜ್ಞಾ ಎನ್‌.
ಅನರ್ಘ್ಯ ವಿ. ಕುಲಕರ್ಣಿ
ಅನರ್ಘ್ಯ ವಿ. ಕುಲಕರ್ಣಿ
ಮಧುರಾ ಕೆ.ಐ
ಮಧುರಾ ಕೆ.ಐ
ಸ್ನೇಹಾ ಸುಸಾನ್‌ ಸನ್ನಿ
ಸ್ನೇಹಾ ಸುಸಾನ್‌ ಸನ್ನಿ
ಪ್ರಿಯಾ ಕುಮಾರಿ
ಪ್ರಿಯಾ ಕುಮಾರಿ

ಫೆಲೆಂಟಿನಾ ಜೇಮ್ಸ್‌ಗೆ 5 ಚಿನ್ನ

ಹುಬ್ಬಳ್ಳಿಯ ಕೆಎಲ್‌ಇ ಸೊಸೈಟಿ ಇನ್‌ಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಸೈನ್ಸಸ್‌ನ (ಬಿಎಸ್‌ಸಿ ನರ್ಸಿಂಗ್‌  ಕೋರ್ಸ್‌) ವಿದ್ಯಾರ್ಥಿನಿ ಫೆಲೆಂಟಿನಾ ಜೇಮ್ಸ್‌ ಅವರು 5 ಚಿನ್ನದ ಪದಕ ಪಡೆದಿದ್ದಾರೆ. ಉಡುಪಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ (ಆಯುಷ್‌ ಕೋರ್ಸ್) ಪ್ರಜ್ಞಾ ಎನ್‌. ಅವರು 4 ಚಿನ್ನದ ಪದಕ ಹಾಗೂ 2 ನಗದು ಬಹುಮಾನ; ಧಾರವಾಡದ ಸೋನಿಯಾ ಎಜುಕೇಷನ್‌ ಟ್ರಸ್ಟ್‌ ಕಾಲೇಜು ಆಫ್‌ ಫಾರ್ಮಸಿಯ (ಬಿ ಫಾರ್ಮ್‌ ಕೋರ್ಸ್) ಅನರ್ಘ್ಯ ವಿ. ಕುಲಕರ್ಣಿ ಅವರು 3 ಚಿನ್ನದ ಪದಕ; ಮಂಗಳೂರು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಂಬಿಬಿಎಸ್‌ ಕೋರ್ಸ್‌) ಮಧುರಾ ಕೆ.ಐ ಅವರು 2 ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ; ಬೆಂಗಳೂರಿನ ಈಸ್ಟ್‌ ವೆಸ್ಟ್‌ ಕಾಲೇಜ್‌ ಆಫ್‌ ಫಾರ್ಮಸಿಯ (ಫಾರ್ಮ್‌ ಡಿ ಕೋರ್ಸ್‌) ಸ್ನೇಹಾ ಸುಸಾನ್‌ ಸನ್ನಿ ಅವರು 2 ಚಿನ್ನದ ಪದಕ; ಮಂಗಳೂರು ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜಿನ (ಅಲೈಡ್‌ ಹೆಲ್ತ್‌ ಸೈನ್ಸಸ್‌ ಕೋರ್ಸ್‌) ಪ್ರಿಯಾ ಕುಮಾರಿ ಅವರು 2 ಚಿನ್ನದ ಪದಕ ಗಳಿಸಿದ್ದಾರೆ.

ಮೂವರಿಗೆ ಗೌರವ ಡಾಕ್ಟರೇಟ್‌

ಕಿಡ್ನಿ ರೋಗ ನಿಯಂತ್ರಣ ಹಾಗೂ ಚಿಕಿತ್ಸೆಯಲ್ಲಿ ಹೆಸರುವಾಸಿಯಾಗಿರುವ ಶಿವಮೊಗ್ಗ ಜಿಲ್ಲೆಯ ಡಾ. ಜಿ.ಕೆ. ವೆಂಕಟೇಶ್‌ ಚರ್ಮರೋಗ ವಿಷಯವಾಗಿ ಸ್ನಾತಕೋತ್ತರ ಕೋರ್ಸ್‌ ಆರಂಭಿಸಿದ ಬೀದರ್‌ ಜಿಲ್ಲೆಯ ಪಿ.ಎಂ. ಬಿರಾದಾರ್‌ ಮತ್ತು ಫಿಜಿಯೊಥೆರಪಿಯಲ್ಲಿ ದೇಶದಾದ್ಯಂತ ಖ್ಯಾತಿಗಳಿಸಿರುವ ಮಧ್ಯಪ್ರದೇಶ ಪಿಂಕಿ ಭಾಟಿಯಾ ಅವರಿಗೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ‘ಡಾಕ್ಟರ್‌ ಆಫ್‌ ಸೈನ್ಸ್‌’ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ. ಎಂ.ಕೆ. ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT