ಗುರುವಾರ , ಜೂನ್ 24, 2021
27 °C

ಅಪಘಾತ: ಬೆಂಗಳೂರಿನಲ್ಲಿ ಒಂದು ವರ್ಷಕ್ಕೆ 850 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ವರ್ಷಕ್ಕೆ 850 ಮಂದಿ ಸಾವಿಗೀಡಾಗುತ್ತಿದ್ದಾರೆ. ಅಂದರೆ, ದಿನಕ್ಕೆ ಇಬ್ಬರು ಅಥವಾ ಮೂವರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್ ರಾವ್‌ ಹೇಳಿದರು. 

ನಗರದ ಪುರಭವನದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಅತಿ ವೇಗ ಮತ್ತು ಅವಸರದ ಚಾಲನೆಗಳಿಂದ ಅಪಘಾತಗಳು ಸಂಭವಿಸುತ್ತಿವೆ. 18 ರಿಂದ 37 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ’ ಎಂದರು.

ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಆಯುಕ್ತ ಪಿ.ಎಸ್.ಸಂಧು ಮಾತನಾಡಿ, `2018ರಲ್ಲಿ ರಾಜ್ಯದಲ್ಲಿ ಸಂಭವಿಸಿದ ಅಪಘಾತಗಳಲ್ಲಿ 10,990 ಮಂದಿ ಮೃತಪಟ್ಟಿದ್ದಾರೆ. ರಸ್ತೆ ಅಪಘಾತಗಳಿಂದ ಜಿಡಿಪಿಯಲ್ಲಿ ಶೇ 3ರಷ್ಟು ನಷ್ಟವಾಗುತ್ತಿದೆ’ ಎಂದರು. 

‘ರಸ್ತೆ ಅಪಘಾತಗಳಲ್ಲಿ ಶೇ 47ರಷ್ಟು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳೇ ಮೃತಪಡುತ್ತಿದ್ದಾರೆ. ಅಪಘಾತಗಳಲ್ಲಿ ಮೃತಪಡುವವರ ಪ್ರಮಾಣವನ್ನು ಪ್ರತಿ ವರ್ಷ ಶೇ 10ರಷ್ಟು ಕಡಿಮೆ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದೆ. ಅಪಘಾತ ಸ್ಥಳಕ್ಕೆ ಆಂಬುಲೆನ್ಸ್‌ಗಳು 12 ನಿಮಿಷಗಳಿಂದ 16 ನಿಮಿಷದೊಳಗೆ ತಲುಪುತ್ತಿದ್ದು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಸಾವಿನ ಪ್ರಮಾಣ ತಗ್ಗಿದೆ’ ಎಂದು ಹೇಳಿದರು.

‘ಆಟೊರಿಕ್ಷಾಗಳಲ್ಲಿ 6 ಮಕ್ಕಳಿಗಿಂತ ಹೆಚ್ಚು ಮಂದಿಯನ್ನು ಕರೆದೊಯ್ಯುವಂತಿಲ್ಲ. ನಿಯಮ ಉಲ್ಲಂಘನೆ ಪ್ರಕರಣಗಳು ಕಣ್ಣಿಗೆ ಬಿದ್ದಾಗ ದೂರು ನೀಡಬೇಕು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು