ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆಯಿಂದ ರಸ್ತೆ ಅಪಘಾತ ಕಡಿಮೆ: ಎಂ.ಎ. ಸಲೀಂ ಅಭಿಮತ

ನಿಮ್ಹಾನ್ಸ್‌ ಕಾರ್ಯಕ್ರಮದಲ್ಲಿ ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಅಭಿಮತ
Last Updated 20 ಮಾರ್ಚ್ 2023, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿರುವ ಒಟ್ಟು ವಾಹನಗಳಲ್ಲಿ ಶೇ 50ರಷ್ಟು ವಾಹನಗಳು ಬೆಂಗಳೂರಿನಲ್ಲಿಯೇ ಇವೆ. ಆದರೆ, ಸಂಚಾರ ದಟ್ಟಣೆಯಿಂದಾಗಿ ಇಲ್ಲಿ ರಸ್ತೆ ಅಪಘಾತ ಪ್ರಮಾಣ ಕಡಿಮೆ ಇದೆ’ ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಅವರು ತಿಳಿಸಿದರು.

ವಿಶ್ವ ತಲೆ ಗಾಯದ ಜಾಗೃತಿ ದಿನದ ಪ್ರಯುಕ್ತ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ನಗರದಲ್ಲಿ ಸೋಮವಾರ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ‘ರಾಜ್ಯದಲ್ಲಿ ವರದಿಯಾಗುತ್ತಿರುವ ರಸ್ತೆ ಅಪಘಾತ
ಪ್ರಕರಣಗಳಲ್ಲಿ ಶೇ 7ರಷ್ಟು ಪ್ರಕರಣಗಳು ಮಾತ್ರ ಬೆಂಗಳೂರಿನಲ್ಲಿ ವರದಿ ಯಾಗುತ್ತಿವೆ. ಸಂಚಾರ ದಟ್ಟಣೆಯು ಇಲ್ಲಿ ವೇಗದ ಪ್ರಯಾಣಕ್ಕೆ ಅಡ್ಡಿಯಾಗಿದೆ. ಇದರಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವುದು ನಮ್ಮ ಆದ್ಯತೆ. ಆದರೆ, ರಸ್ತೆ ಉತ್ತಮವಾಗಿದೆ ಎಂದು ವೇಗದ ಮಿತಿ ದಾಟಬಾರದು’ ಎಂದು ಹೇಳಿದರು.

‘ಎರಡು ದಶಕಗಳ ಹಿಂದೆ ಹೊರವರ್ತುಲ ರಸ್ತೆ ಪ್ರಾರಂಭವಾದ ಬಳಿಕ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಯಿತು. ವೇಗದ ಪ್ರಯಾಣ, ಸಂಚಾರ ನಿಯಮಗಳ ಉಲ್ಲಂಘನೆ ರಸ್ತೆ ಅಪಘಾತಕ್ಕೆ ಪ್ರಮುಖ ಕಾರಣ. ಬೆಂಗಳೂರು–ಮೈಸೂರು ಹೆದ್ದಾರಿ ಉತ್ತಮವಾಗಿದೆ ಎಂಬ ಕಾರಣಕ್ಕೆ ಅತಿಯಾದ ವೇಗದಲ್ಲಿ ವಾಹನ ಚಲಾಯಿಸಬಾರದು. 45 ಲಕ್ಷ ಜನರಿರುವ ದುಬೈನಲ್ಲಿ 2019ರಲ್ಲಿ ರಸ್ತೆ ಅಪಘಾತದಿಂದ ಇಬ್ಬರು ಮಾತ್ರ ಮೃತಪಟ್ಟಿದ್ದಾರೆ‌’ ಎಂದು ಹೇಳಿದರು.

‘ನಗರದ ಹೈಡೆನ್ಸಿಟಿ ಕಾರಿಡಾರ್‌ಗಳಲ್ಲಿ ತಡೆರಹಿತ ವಾಹನ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಸುರಕ್ಷತೆ, ವಾಹನ ಸಂಖ್ಯೆ ಪರಿಶೀಲಿಸುವ, ವಾಹನ ಸಾಮರ್ಥ್ಯವನ್ನು ಪರಿಶೀಲಿಸುವ ಆಧುನಿಕ ಕ್ಯಾಮೆರಾಗಳನ್ನು ಅಳವಡಿ
ಸಲಾಗುತ್ತಿದೆ’ ಎಂದು ಹೇಳಿದರು.

ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು, ‘ರಸ್ತೆ ಅಪಘಾತಗಳಿಂದ ಆಗುತ್ತಿರುವ ತಲೆ ಗಾಯ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ. ದೇಶದಲ್ಲಿ ವಾರ್ಷಿಕ ಸರಾಸರಿ 1.5 ಲಕ್ಷ ಜನರು ರಸ್ತೆ ಅಪಘಾತದಿಂದ ಮೃತಪಡುತ್ತಿದ್ದಾರೆ. ರಸ್ತೆ ಅಪಘಾತದಿಂದ ಸಂಭವಿಸುತ್ತಿರುವ ಗಾಯಗಳು ಮಿದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಗಾಯಗೊಂಡ ಒಂದು ಗಂಟೆಯೊಳಗೆ ಚಿಕಿತ್ಸೆ ಒದಗಿಸುವುದು ಮುಖ್ಯ ವಾಗುತ್ತದೆ’ ಎಂದು ತಿಳಿಸಿದರು.

ನಿಮ್ಹಾನ್ಸ್ ವೈದ್ಯಕೀಯ ಅಧೀಕ್ಷಕ ಡಾ. ಮುರಳೀಧರನ್ ಕೆ., ಕುಲಸಚಿವ ಡಾ.ಬಿ.ಎಸ್. ಶಂಕರನಾರಾಯಣ ರಾವ್ ಮತ್ತು ಡೀನ್ ಡಾ. ಯಶಾ ಟಿ.ಸಿ. ಇದ್ದರು.

‘ಕೋವಿಡ್‌ಗೆ ಸಿಕ್ಕ ಆದ್ಯತೆ ರಸ್ತೆ ಅಪಘಾತಕ್ಕೆ ಇಲ್ಲ’

‘ದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೋವಿಡ್‌ಗೆ 5 ಲಕ್ಷ ಮಂದಿ ಮೃತಪಟ್ಟಿದ್ದಾರೆ. ರಸ್ತೆ ಅಪಘಾತಕ್ಕೆ 4.5 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದರೂ ಕೋವಿಡ್‌ಗೆ ದೊರೆತಷ್ಟು ಆದ್ಯತೆ ಸಿಗಲಿಲ್ಲ. ರಸ್ತೆ ಅಪಘಾತ ತಡೆಗೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಿಸಿಕೊಂಡು, ತುರ್ತು ಆರೈಕೆಗೆ ಆದ್ಯತೆ ನೀಡಬೇಕು’ ಎಂದು ಎಂ.ಎ. ಸಲೀಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT