ರಾಜರಾಜೇಶ್ವರಿನಗರ: ಮಳೆ ಬಂದಾಗ ಕೆಸರುಗದ್ದೆಯಂತಾಗುತ್ತದೆ. ಬಿಸಿಲಿನಲ್ಲಿ ದೂಳುಮಯ. ಪಾದಚಾರಿಗಳಿಗೆ, ವಾಹನ ಸವಾರರಿಗೆ ನಿತ್ಯ ನರಕ ದರ್ಶನ..!
ಇದು ಮಾಗಡಿ -ಕೆಂಗೇರಿ ಹೊರವರ್ತುಲ ರಸ್ತೆಯ ಮರಿಯಪ್ಪನಪಾಳ್ಯ ಬಳಿಯ ಶನೇಶ್ವರಸ್ವಾಮಿ ದೇವಸ್ಥಾನದಿಂದ ಅಮೃತಾನಂದ ಆಶ್ರಮವರೆಗಿನ ರಸ್ತೆ ಸ್ಥಿತಿ–ಗತಿ.
ಈ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಎರಡು ಬದಿಗಳಲ್ಲೂ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಮಣ್ಣನ್ನು ಅಗೆದು ರಸ್ತೆಯಲ್ಲಿ ಗುಡ್ಡೆ ಹಾಕಿರುವುದರಿಂದ ಕಷ್ಟಪಟ್ಟು ಓಡಾಡುವಂತಾಗಿದೆ ಎಂದು ನಾಗರಿಕರು ಹೇಳಿದರು.
’ಗಾಳಿ ಬೀಸಿದಾಗ ರಸ್ತೆಯಲ್ಲಿನ ದೂಳು ಮನೆ, ಕಿಟಕಿ, ಬಾಗಿಲಲ್ಲಿ ತುಂಬಿಕೊಳ್ಳುತ್ತದೆ. ನಿತ್ಯ ಸ್ವಚ್ಛ ಮಾಡುವುದೇ ಕೆಲಸವಾಗಿದೆ’ ಎಂದು ಸ್ಥಳೀಯ ನಿವಾಸಿ ಆಶಾ ಬೇಸರ ವ್ಯಕ್ತಪಡಿಸಿದರು.
‘ಕಾಮಗಾರಿ ಪ್ರಾರಂಭವಾಗಿ ನಾಲ್ಕು ತಿಂಗಳಾಗಿದೆ. ವಾಹನ ನಿಲುಗಡೆ ಮಾಡಲು ಸಾಧ್ಯವಿಲ್ಲ. ಇದರಿಂದ ಗ್ರಾಹಕರು ಬರುತ್ತಿಲ್ಲ, ವ್ಯಾಪಾರವಿಲ್ಲ. ಹೀಗಾಗಿ ವ್ಯಾಪಾರಕ್ಕಾಗಿ ಮಾಡಿರುವ ಬ್ಯಾಂಕ್, ಕೈ ಸಾಲ ತೀರಿಸಲು ಕಷ್ಟವಾಗುತ್ತಿದೆ. ಕಾಮಗಾರಿ ವಿಳಂಬವಾದರೆ ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ’ ಎನ್ನುತ್ತಾರೆ ಅಯೋಧ್ಯ ಡೀ ನೈಟ್ ಹೋಟೆಲ್ ಮಾಲೀಕ ನಿರಂಜನ್ ಬಾರಿಕ್.
’ರಸ್ತೆ ಅಧ್ವಾನವಾಗಿರುವುದರಿಂದ ಜನರು ಇಲ್ಲಿ ಓಡಾಡುವುದು ಕಡಿಮೆಯಾಗಿದೆ. ವ್ಯಾಪಾರವಿಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಪಾನಿಪುರಿ ವ್ಯಾಪಾರಿ ನಾಗರತ್ನ ಹೇಳಿದರು.
ಒಳಚರಂಡಿ ಹಾಗೂ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಯುಜಿಡಿ ಕಾಮಗಾರಿ ಮತ್ತು ಕಾವೇರಿ ನೀರಿನ ಕೊಳವೆ ಅಳವಡಿಕೆ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ನಂತರ ವೈಟ್ ಟಾಪಿಂಗ್ ಆರಂಭವಾಗುತ್ತದೆ.ಮಹಮದ್ ಅಜ್ಮಲ್ ಕಾರ್ಯಪಾಲಕ ಎಂಜಿನಿಯರ್ ಬಿಬಿಎಂಪಿ
‘ವಾರದಲ್ಲಿ ಕಾಮಗಾರಿ ಆರಂಭ’
‘ನಿತ್ಯ ನಾಲ್ಕು ಬಾರಿ ರಸ್ತೆಗೆ ನೀರು ಹಾಕಿ ದೂಳು ನಿಯಂತ್ರಿಸಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಸಲಹೆ ಮೇರೆಗೆ ಸಂಜೆ ನಂತರ ಕಾಮಗಾರಿ ನಿಲ್ಲಿಸಲಾಗುತ್ತಿದೆ. ಹಗಲು– ರಾತ್ರಿ ಕಾಮಗಾರಿ ಕೈಗೊಂಡರೆ ಒಂದು ವಾರದೊಳಗೆ ಒಳಚರಂಡಿ ಪೈಪ್‌ಗಳನ್ನು ಅಳವಡಿಸಿ ವೈಟ್ ಟೈಪಿಂಗ್ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಕಾಮಗಾರಿ ಗುತ್ತಿಗೆ ಪಡೆದಿರುವ ಅಪ್ಪಾಜಿ ಬಿಲ್ಡರ್ಸ್‌ನ ಶಂಕರೇಗೌಡ ಹೊಸಮನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.