ಮಂಗಳವಾರ, ಮಾರ್ಚ್ 21, 2023
23 °C

ರಸ್ತೆ ಸುರಕ್ಷತಾ ಸಪ್ತಾಹ: 'ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 36 ಸಾವಿರ ಅಪಘಾತ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ ಒಟ್ಟು 36 ಸಾವಿರ ಅಪಘಾತಗಳು ಸಂಭವಿಸಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಒಟ್ಟು 7 ಸಾವಿರ ಸವಾರರ ಪೈಕಿ ಶೇ.60ರಷ್ಟು ಮಧ್ಯಮ ವಯಸ್ಸಿನವರು’ ಎಂದು ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಡಾ.ಎಂ.ಎ.ಸಲೀಂ ಮಾಹಿತಿ ನೀಡಿದರು.

ಸಾರಿಗೆ ಇಲಾಖೆ ಹಾಗೂ ನಗರ ಸಂಚಾರ ಪೊಲೀಸ್‌ ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 7 ದಿನಗಳ ಕಾಲ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರು ಜಾರಿಗೆ ತಂದಿರುವ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಹೇಳಿದರು.

ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್‌.ವಿ.ಪ್ರಸಾದ್‌ ಮಾತನಾಡಿ, ‘ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುದರ ಮೂಲಕ ರಸ್ತೆ ಅಪಘಾತ ತಡೆಗಟ್ಟಿ ಜೀವ ರಕ್ಷಿಸಿಕೊಳ್ಳಿ. ಸಾರ್ವಜನಿಕರು ಸಾರಿಗೆಯನ್ನು ಆದಷ್ಟು ಉಪಯೋಗಿಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

‘ರಸ್ತೆ ಅಪಘಾತಗಳನ್ನು ತಪ್ಪಿಸಲು ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಪ್ತಾಹದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಆಶು ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ರಸ್ತೆ ಸುರಕ್ಷತಾ ಪ್ರಾಧಿಕಾರದ ಹೆಚ್ಚುವರಿ ಸಾರಿಗೆ ಆಯುಕ್ತ ಜೆ.ಪುರುಷೋತ್ತಮ್, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು