ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಹೊರಬಂದು ಗ್ಯಾಂಗ್‌ ಕಟ್ಟಿ ದರೋಡೆ: ಮೂವರ ಬಂಧನ

ಹಾಡಹಗಲೇ ಚಿನ್ನಾಭರಣ ಮಳಿಗೆಗೆ ನುಗ್ಗಿ ಕೃತ್ಯ
Last Updated 26 ಸೆಪ್ಟೆಂಬರ್ 2020, 21:45 IST
ಅಕ್ಷರ ಗಾತ್ರ

ಬೆಂಗಳೂರು: ಜಾಲಹಳ್ಳಿ ಬಳಿಯ ‘ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್’ ಹೆಸರಿನ ಆಭರಣ ಮಳಿಗೆಗೆ ನುಗ್ಗಿ ಸಿಬ್ಬಂದಿ ಕೈ– ಕಾಲು ಕಟ್ಟಿ ಹಾಕಿ ₹ 1.49 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ₹ 3.96 ಲಕ್ಷ ನಗದು ದೋಚಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ರಾಜಸ್ಥಾನದ ಗೋಪಾಲ್ ಅಲಿಯಾಸ್ ಗೋಪಾರಾಮ್ (28), ಜಿತೇಂದ್ರ ಮಾಳಿ ಅಲಿಯಾಸ್ ಜೀತು (31) ಮತ್ತು ಮಿರ್ವಾರಾಮ್ ಅಲಿಯಾಸ್ ಮಾಂಗಿ ಲಾಲ್ (32) ಬಂಧಿತರು. ಅವರಿಂದ ₹ 90 ಲಕ್ಷ ರೂ. ಮೌಲ್ಯದ 1.7 ಕೆ.ಜಿ. ಚಿನ್ನಾಭರಣ, ₹3.5 ಲಕ್ಷ ನಗದು, 2 ದ್ವಿಚಕ್ರ ವಾಹನ, 1 ಏರ್ ಗನ್ ಜಪ್ತಿ ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

‘ಜಾಲಹಳ್ಳಿಯ ಬಾಹುಬಲಿ ನಗರದಲ್ಲಿ ವಿನೋದ್ ಎಂಬುವರು ‘ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್’ ಮಳಿಗೆ ಇಟ್ಟುಕೊಂಡಿದ್ದಾರೆ. ಸೆ. 20ರಂದು ಕೆಲಸಗಾರ ರಾಹುಲ್ ಮಾತ್ರ ಮಳಿಗೆಯಲ್ಲಿದ್ದರು. ಬೆಳಿಗ್ಗೆಯೇ ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ನುಗ್ಗಿದ್ದ ಆರೋಪಿಗಳು, ರಾಹುಲ್ ಅವರಿಗೆ ಪಿಸ್ತೂಲ್ ಹಾಗೂ ಚಾಕು ತೋರಿಸಿ ಬೆದರಿಸಿದ್ದರು. ಕೈ–ಕಾಲು ಕಟ್ಟಿಹಾಕಿ ದರೋಡೆ ಮಾಡಿದ್ದರು’ ಎಂದೂ ಹೇಳಿದರು.

ಬೆರಳಚ್ಚು ನೀಡಿದ್ದ ಸುಳಿವು: ’ಮಳಿಗೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಘಟನಾ ಸ್ಥಳದಲ್ಲಿದ್ದ ಬೆರಳಚ್ಚು ಸಂಗ್ರಹಿಸಿ ಪರಿಶೀಲಿಸಲಾಗಿತ್ತು. ಬೆರಳಚ್ಚಿನಿಂದಾಗಿ ಹಳೇ ಆರೋಪಿ ಗೋಪಾಲ್‌ನ ಸುಳಿವು ಸಿಕ್ಕಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ. ನಂತರ, ಉಳಿದವರೂ ಸಿಕ್ಕಿಬಿದ್ದರು’ ಎಂದು ಡಿಸಿಪಿ ಧಮೇಂದ್ರಕುಮಾರ್ ವಿವರಿಸಿದರು.

‘2004ರಲ್ಲಿ ರಾಜಸ್ಥಾನದಿಂದ ನಗರಕ್ಕೆ ಬಂದಿದ್ದ ಗೋಪಾಲ್, ಯಲಹಂಕದ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಆ ಕೆಲಸ ಬಿಟ್ಟು 2014ರಲ್ಲಿ ಬಾಗಲೂರಿನ ರಾಜಲಕ್ಷ್ಮೀ ಜ್ಯುವೆಲರ್ಸ್ ಮಳಿಗೆಗೆ ಸೇರಿದ್ದ. ಅದೇ ಮಳಿಗೆಯಲ್ಲಿ ಆಭರಣ ಕಳವು ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಆ ಪ್ರಕರಣದಲ್ಲಿ ಜೈಲು ಸೇರಿದ್ದ ಗೋಪಾಲ್, ಜಾಮೀನು ಮೇಲೆ ಹೊರಬಂದಿದ್ದ.’

‘ಕೆಲ ತಿಂಗಳು ರಾಜಸ್ಥಾನಕ್ಕೆ ಹೋಗಿದ್ದ ಆತ, 2017ರಲ್ಲಿ ನಗರಕ್ಕೆ ಪುನಃ ವಾಪಸು ಬಂದಿದ್ದ. ಆಹಾರ ಸರಬರಾಜು ಕೆಲಸ ಮಾಡಲಾರಂಭಿಸಿದ್ದ. ಇದೇ ವೇಳೆ ಪರಿಚಯವಾದ ಜಿತೇಂದ್ರ ಹಾಗೂ ಮಾಂಗಿ ಲಾಲ್ ಜೊತೆಗೂಡಿ ಗ್ಯಾಂಗ್ ಕಟ್ಟಿಕೊಂಡಿದ್ದ. ಎಲ್ಲರೂ ಸೇರಿ ಬಾಹುಬಲಿ ನಗರದಲ್ಲಿರುವ ಮಳಿಗೆ ಬಳಿ ಸುತ್ತಾಡಿ ಸಂಚು ರೂಪಿಸಿ ದರೋಡೆ ಮಾಡಿದ್ದರು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT