ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಬೊಟಿಕ್‌ ಸೌಲಭ್ಯ: CM ಸಿದ್ದರಾಮಯ್ಯ ಭರವಸೆ

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ₹ 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದ ಸಿ.ಎಂ
Published : 27 ಆಗಸ್ಟ್ 2024, 14:07 IST
Last Updated : 27 ಆಗಸ್ಟ್ 2024, 14:07 IST
ಫಾಲೋ ಮಾಡಿ
Comments

ಬೆಂಗಳೂರು: ‘ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಖಾಸಗಿ ಆಸ್ಪತ್ರೆಗಳಂತೆ ಅತ್ಯಾಧುನಿಕ ಸೌಲಭ್ಯಗಳು ಸಿಗುವಂತಾಗಬೇಕು. ಆದ್ದರಿಂದ ರೋಬೊಟಿಕ್ ತಂತ್ರಜ್ಞಾನವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಲು ಕ್ರಮವಹಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. 

ಆರೋಗ್ಯ ಇಲಾಖೆಯು ಕೆ.ಸಿ. ಜನರಲ್ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಸೇರಿ ₹ 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ರೋಬೊಟಿಕ್ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಈ ತಂತ್ರಜ್ಞಾನವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಅಳವಡಿಸಿಕೊಂಡು, ಶಸ್ತ್ರಚಿಕಿತ್ಸೆ ನಡೆಸಬೇಕು. ಖಾಸಗಿ ಆಸ್ಪತ್ರೆಗಳು ವಿವಿಧ ಶಸ್ತ್ರಚಿಕಿತ್ಸೆಗಳಿಗೆ ₹ 30 ಲಕ್ಷದವರೆಗೂ ಬಿಲ್ ಮಾಡುತ್ತಿವೆ. ಇದನ್ನು ಪಾವತಿಸಲಾಗದೆ ಪ್ರತಿನಿತ್ಯ ಹಲವರು ನೆರವು ಕೇಳಿಕೊಂಡು ಬರುತ್ತಾರೆ. ಎಲ್ಲ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸಿಗುವಂತೆ ಮಾಡಿದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಕಡಿಮೆ ಆಗುತ್ತದೆ’ ಎಂದರು. 

‘ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೌಹಾರ್ದಯುತವಾಗಿ ವರ್ತಿಸಿ, ಅವರ ಕಷ್ಟಗಳನ್ನು ಆಲಿಸಬೇಕು. ಇದರಿಂದ ರೋಗಿಗಳು ತಕ್ಕ ಮಟ್ಟಿಗೆ ನಿರಾಳರಾಗುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರವನ್ನೂ ಒದಗಿಸಬೇಕು. ಅದಕ್ಕೆ ಬೇಕಾದ ಸೌಲಭ್ಯವನ್ನು ಸರ್ಕಾರ ಒದಗಿಸಲಿದೆ’ ಎಂದು ತಿಳಿಸಿದರು. 

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಬಿಬಿಎಂಪಿ ನಿರ್ವಹಿಸುತ್ತಿರುವ ಪ್ರಮುಖ ಆಸ್ಪತ್ರೆಗಳ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಹೇಳಿದರು. 

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಆರೋಗ್ಯ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಕ್ರಮವಹಿಸಲಾಗಿದೆ. ಕಿಮೋಥೆರಪಿಗೆ ಸಂಬಂಧಿಸಿದಂತೆ ದೊಡ್ಡ ಆಸ್ಪತ್ರೆಗಳಿಗೆ ತೆರಳುವುದನ್ನು ತಪ್ಪಿಸಲು ಮುಂದಿನ ತಿಂಗಳಿಂದ ಜಿಲ್ಲಾ ಆಸ್ಪತ್ರೆಗಳಲ್ಲಿಯೇ ಕಿಮೋಥೆರಪಿ ಡೇ ಕೇರ್ ಸೆಂಟರ್ ಪ್ರಾರಂಭಿಸಲಾಗುವುದು. ಅಪಘಾತಕ್ಕೆ ಒಳಗಾದವವರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಪ್ರತ್ಯೇಕ ಆಂಬುಲೆನ್ಸ್ ಸೇವೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುತ್ತದೆ.‌ ಈ ಸಂಬಂಧ ಅಪಘಾತ ವಲಯವನ್ನು (ಹಾಟ್‌ ಸ್ಪಾಟ್‌) ಗುರುತಿಸಿ, ಹತ್ತಿರದಲ್ಲಿಯೇ ಟ್ರಾಮಾ ಸೌಲಭ್ಯವನ್ನೂ ಒದಗಿಸಲಾಗುವುದು’ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಇಂದಿರಾ ಕಬಾಡೆ ಉಪಸ್ಥಿತರಿದ್ದರು.

ಜಯದೇವ ಘಟಕದಲ್ಲಿ 24 ಗಂಟೆ ಸೇವೆ

‘ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆ ಜಾಸ್ತಿಯಾಗುತ್ತಿದೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಘಟಕವು ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದೆ. ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿಯನ್ನು ಸಕಾಲದಲ್ಲಿ ಮಾಡಬೇಕಾಗುತ್ತದೆ. ಆದ್ದರಿಂದ ಕೆ.ಸಿ. ಜನರಲ್‌ ಆಸ್ಪತ್ರೆ ಆವರಣದಲ್ಲಿರುವ ಜಯದೇವ ಆಸ್ಪತ್ರೆಯ ಘಟಕದಲ್ಲಿ 24 ಗಂಟೆಯೂ ಸೇವೆ ಒದಗಿಸುವಂತೆ ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು. 

200 ಹಾಸಿಗೆಗಳ ಆಸ್ಪತ್ರೆ

ಕೆ.ಸಿ. ಜನರಲ್ ಆಸ್ಪತ್ರೆಯ ಆವರಣದಲ್ಲಿ ಒಟ್ಟು 12824 ಚದರ ಮೀಟರ್ ವಿಸ್ತೀರ್ಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಲಿದೆ. ಇದರಲ್ಲಿ ಕಟ್ಟಡದ ಅಡಿಪಾಯದ ವಿಸ್ತೀರ್ಣ 2131 ಚದರ ಮೀಟರ್ ಇರಲಿದೆ. ಇದಕ್ಕೆ ₹ 66.78 ಕೋಟಿ ವೆಚ್ಚವಾಗಲಿದೆ. ನಾಲ್ಕು ಮಹಡಿಯ ಈ ಆಸ್ಪತ್ರೆಯು 200 ಹಾಸಿಗೆಗಳನ್ನು ಒಳಗೊಂಡಿರಲಿದೆ. 

ಭೂಮಿ ಪೂಜೆ ನೆರವೇರಿಸಲಾದ ಇತರ ಯೋಜನೆಗಳು

  • ಒಟ್ಟು 8810 ಚದರ ಮೀಟರ್ ವಿಸ್ತೀರ್ಣದಲ್ಲಿ ₹ 38.28 ಕೋಟಿ ವೆಚ್ಚದಲ್ಲಿ ಭೋದಕ ವಿಭಾಗದ ಕಟ್ಟಡ ನಿರ್ಮಾಣ. ಈ ಕಟ್ಟಡ ಐದು ಮಹಡಿಗಳನ್ನು ಹೊಂದಿರಲಿದೆ. 

  • ಒಟ್ಟು 790 ಚದರ ಮೀಟರ್ ವಿಸ್ತೀರ್ಣದಲ್ಲಿ ₹ 4.28 ಕೋಟಿ ವೆಚ್ಚದಲ್ಲಿ ಶವಾಗಾರ ಕೊಠಡಿ ನಿರ್ಮಾಣ. 

  • ಒಟ್ಟು 230 ಚದರ ಮೀಟರ್ ವಿಸ್ತೀರ್ಣದಲ್ಲಿ ₹ 1.77 ಕೋಟಿ ವೆಚ್ಚದಲ್ಲಿ ಅಡುಗೆ ಮನೆ ಕಟ್ಟಡ ನಿರ್ಮಾಣ.

  • 190 ಚದರ ಮೀಟರ್ ವಿಸ್ತೀರ್ಣದಲ್ಲಿ ₹ 1.98 ಕೋಟಿ ವೆಚ್ಚದಲ್ಲಿ ಲಾಂಡ್ರಿ ಕಟ್ಟಡ ನಿರ್ಮಾಣ.

  • 135 ಚದರ ಮೀಟರ್ ವಿಸ್ತೀರ್ಣದಲ್ಲಿ ₹ 38 ಲಕ್ಷ ವೆಚ್ಚದಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕೊಠಡಿ ನಿರ್ಮಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT