ಬೆಂಗಳೂರು: ಬಾಕಿ ತೆರಿಗೆ ಪಾವತಿಸದ ಕಾರಣ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಒಡೆತನದ ರಾಕ್‌ಲೈನ್ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ರಾಕ್‌ಲೈನ್ ಮಾಲ್‌ನಿಂದ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದರೂ ಕೂಡ ತೆರಿಗೆ ಪಾವತಿ ಮಾಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH | Karnataka | Rockline Mall in Bengaluru sealed due to non-payment of due tax. Corporation Revenue Officers sealed the Mall today. pic.twitter.com/zK1zbXOe7M
— ANI (@ANI) February 14, 2024
2021ರಲ್ಲಿ ರಾಕ್‌ಲೈನ್ ವೆಂಕಟೇಶ್ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ ₹8.5 ಕೋಟಿಗೂ ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎನ್.ಆರ್. ರಮೇಶ್ ಆರೋಪಿಸಿದ್ದರು.
‘ಬಿಬಿಎಂಪಿಯ ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿರುವ ರಾಕ್‌ಲೈನ್ ಮಾಲ್ ಕೇವಲ 48,500 ಚದರ ಅಡಿ ವಿಸ್ತೀರ್ಣ ಇದೆ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಆರು ಮಹಡಿ ಸೇರಿದಂತೆ 1,22,743 ಚದರ ಅಡಿ ವಿಸ್ತಾರದಲ್ಲಿ ಈ ಮಾಲ್ ನಿರ್ಮಾಣಗೊಂಡಿದೆ’ ಎಂದು ಅವರು ದೂರಿದ್ದರು.
‘ಪಾಲಿಕೆಗೆ ಬೃಹತ್ ಮೊತ್ತದ ತೆರಿಗೆ ವಂಚಿಸಿರುವ ಬಗ್ಗೆ ಮಹಾಲೆಕ್ಕ ಪರಿಶೋಧಕರ ಕಚೇರಿಯ ಅಧಿಕಾರಿಗಳು ಮತ್ತು ದಾಸರಹಳ್ಳಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆ ಕಾರ್ಯದಲ್ಲಿ ತಿಳಿದು ಬಂದಿತ್ತು. 74,243 ಚದರ ಅಡಿ ವಿಸ್ತೀರ್ಣವನ್ನು ಮುಚ್ಚಿಟ್ಟು, ಪಾಲಿಕೆಗೆ ತೆರಿಗೆ ವಂಚಿಸಲಾಗಿದೆ’ ಎಂದು ಅವರು ಹೇಳಿದ್ದರು.
‘2012ರ ಅ.25ರಂದು ₹3.78 ಲಕ್ಷ ಮಾತ್ರ ತೆರಿಗೆ ಪಾವತಿಸಿದ್ದಾರೆ. ಬಡ್ಡಿ ಸೇರಿದಂತೆ ₹2.63 ಕೋಟಿ ಪಾವತಿಸುವಂತೆ 2015ರಲ್ಲಿಯೇ ಬಿಬಿಎಂಪಿಯು ರಾಕ್‌ಲೈನ್ ವೆಂಕಟೇಶ್ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಪಾಲಿಕೆಯು ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ, ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿದೆ’ ಎಂದಿದ್ದರು.
‘2011–12ರಿಂದ 2020–21ರವರೆಗಿನ ಅವಧಿಯವರೆಗೆ ಒಟ್ಟು ₹3.8 ಕೋಟಿ ಆಸ್ತಿ ತೆರಿಗೆ, ವಾರ್ಷಿಕ ಬಡ್ಡಿದರ, ದಂಡ ಸೇರಿ, ₹8.51 ಕೋಟಿ ತೆರಿಗೆ ಪಾವತಿಸಬೇಕಾಗಿದೆ’ ಎಂದೂ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.