ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ರೌಡಿಶೀಟರ್‌ಗೆ ಗುಂಡೇಟು

ಮೂರು ದಿನಗಳಲ್ಲಿ ಮೂವರ ಮೇಲೆ ಪೊಲೀಸರಿಂದ ಫೈರಿಂಗ್‌
Last Updated 25 ಜೂನ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ದರೋಡೆ, ಸುಲಿಗೆ ಮಾಡುತ್ತಿದ್ದ ಮತ್ತೊಬ್ಬ ರೌಡಿ ಶೀಟರ್‌ಗೆ ಸೋಮವಾರ ತಡರಾತ್ರಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಬಾಣಸವಾಡಿ ಇನ್‍ಸ್ಪೆಕ್ಟರ್ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿರುವ ರೌಡಿ ಶೀಟರ್‌ ಅಶೋಕ್ ಅಲಿಯಾಸ್‌ ಅರ್ಜುನ್‌ (22) ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

4–5 ವರ್ಷಗಳಿಂದ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಬಾಗಲೂರು ನಿವಾಸಿ ಅಶೋಕ್‌ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. 2016ರಲ್ಲಿ ಪೊಲೀಸರ ಮೇಲೆ ಖಾರದ ಪುಡಿ ಎರಚಿ, ಹಾಕಿ ಸ್ಟಿಕ್‍ನಿಂದ ಹಲ್ಲೆ ಮಾಡಿ ಜೈಲು ಸೇರಿದ್ದ ಅಶೋಕ್‍ನ ಹೆಸರು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದೆ.

ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ, ತನ್ನ ಸಹಚರರ ಜತೆ ಸೇರಿ ಭಾನುವಾರ ಮಧ್ಯಾಹ್ನ ಲಿಂಗರಾಜಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಸ್ಸಾಂ ರಾಜ್ಯದ ಮೆಹರ್ ಆಲಿ ಎಂಬುವರ ಮನೆಗೆ ನುಗ್ಗಿ ಚಾಕು ತೋರಿಸಿ ಒಂದು ಮೊಬೈಲ್, ₹ 6 ಸಾವಿರ ಕಸಿದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಬಾಸಣವಾಡಿ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.

ಎರಡು ದಿನಗಳಿಂದ ಅಶೋಕನ ಚಲನವಲನಗಳ ಮೇಲೆ ನಿಗಾ ವಹಿಸಿದ್ದ ವಿಶೇಷ ತಂಡ, ಸೋಮವಾರ ರಾತ್ರಿ 11.30ರ ಸುಮಾರಿಗೆ ಪುಲಕೇಶಿನಗರದ ಗಜೇಂದ್ರನಗರದಲ್ಲಿ ಅಡಗಿರುವ ಮಾಹಿತಿ ಸಂಗ್ರಹಿಸಿತ್ತು. ಇನ್‍ಸ್ಪೆಕ್ಟರ್ ವಿರೂಪಾಕ್ಷ ಸ್ವಾಮಿ ತಮ್ಮ ಸಿಬ್ಬಂದಿ ಜೊತೆ ಆತನನ್ನು ಬಂಧಿಸಲು ತೆರಳಿದ್ದರು.

ಬೈಕ್‍ನಲ್ಲಿ ಹೋಗುತ್ತಿದ್ದ ಆರೋಪಿಯನ್ನು ಪೊಲೀಸರು ಜೀಪ್‍ನಲ್ಲಿ ಬೆನ್ನಟ್ಟಿದ್ದರು. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ವರ್ತುಲ ರಸ್ತೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿದ ಆರೋಪಿ, ನಿಯಂತ್ರಣ ಕಳೆದುಕೊಂಡು ಕಸ್ತೂರಿನಗರ ಸಮೀಪದ ಮಣ್ಣಿನ ಗುಡ್ಡಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ತಕ್ಷಣ ಕಾನ್‍ಸ್ಟೆಬಲ್ ಸೌದಾಗರ್ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್‍ಸ್ಪೆಕ್ಟರ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ.

ಆದರೆ, ಆ ಎಚ್ಚರಿಕೆಯನ್ನು ಲೆಕ್ಕಿಸದೆ ಆರೋಪಿ ದಾಳಿಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಅವರು ಹಾರಿಸಿದ ಗುಂಡು ಆತನ ಬಲ ಕಾಲಿಗೆ ತಗುಲಿದೆ. ತಕ್ಷಣ ಸುತ್ತುವರಿದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಕೈ ಮತ್ತು ಕಾಲಿಗೆ ಗಾಯವಾಗಿರುವ ಪೊಲೀಸ್ ಕಾನ್‍ಸ್ಟೆಬಲ್ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಬ್ಬರಿಗೆ ಮುಂದುವರಿದ ಚಿಕಿತ್ಸೆ

ಸಿಸಿಬಿ ಪೊಲೀಸರು ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಕುಖ್ಯಾತ ರೌಡಿ ಫಯಾಜ್‌ ಪುತ್ರ ರೌಡಿಶೀಟರ್ ಅಮೀರ್‍ ಖಾನ್ ಅಲಿಯಾಸ್ ಪಪ್ಪು (34) ಗುಂಡೇಟಿಗೆ ಗಾಯಗೊಂಡಿದ್ದ. ಸುಲಿಗೆ, ದರೋಡೆ ಪ್ರಕರಣಗಳ ಆರೋಪಿ, ರೌಡಿ ಪಟ್ಟಿಯಲ್ಲಿರುವ ರಾಹುಲ್ ಅಲಿಯಾಸ್ ಗೋವಿಂದು (22) ಮೇಲೆ ಬ್ಯಾಟರಾಯನಪುರ ಪೊಲೀಸರು ಸೋಮವಾರ ಬೆಳಿಗ್ಗೆ ನಡೆಸಿದ ಕಾರ್ಯಾಚರಣೆ ವೇಳೆ ಗುಂಡು ಹೊಡೆದು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT