ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಂಸದರ ಜೊತೆ ರೌಡಿ ಸುನೀಲ್ ಪ್ರತ್ಯಕ್ಷ

ಶಾಸಕರ ಕಾರಿನಲ್ಲಿ ತೆರಳಿದ ‘ಸೈಲೆಂಟ್’ l ಬಂಧನ ಕೈಬಿಟ್ಟ ಪೊಲೀಸರು!
Last Updated 28 ನವೆಂಬರ್ 2022, 20:02 IST
ಅಕ್ಷರ ಗಾತ್ರ

ಬೆಂಗಳೂರು: ಸಿಸಿಬಿ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದ ವೇಳೆ ನಾಪತ್ತೆಯಾಗಿದ್ದ ರೌಡಿ ಸೈಲೆಂಟ್ ಸುನೀಲ್, ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ಮುಖಂಡರ ಜೊತೆ ಪ್ರತ್ಯಕ್ಷನಾಗಿದ್ದಾನೆ. ಈ ಕಾರ್ಯಕ್ರಮದ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಸೈಲೆಂಟ್ ಸುನೀಲ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಭದ್ರತೆ ನೀಡಿದ್ದ ಪೊಲೀಸರ ವರ್ತನೆಗೆ ಗರಂ ಆಗಿರುವ ಕಮಿಷನರ್ ಪ್ರತಾಪ್ ರೆಡ್ಡಿ, ಘಟನೆ ಬಗ್ಗೆ ಸ್ಪಷ್ಟನೆ ಸಹಿತ ಉತ್ತರ ನೀಡುವಂತೆ ಸೂಚಿಸಿದ್ದಾರೆಂದು
ಗೊತ್ತಾಗಿದೆ.

ಮನೆಯಲ್ಲಿ ಪರಿಶೀಲಿಸಿದ್ದ ಸಿಸಿಬಿ: ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದ ಸಿಸಿಬಿ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ನಗರದ ಹಲವು ರೌಡಿಗಳ ಮನೆಗಳ ಮೇಲೆ ನ. 23ರಂದು ದಾಳಿ ಮಾಡಿದ್ದರು.

ಸೈಲೆಂಟ್ ಸುನೀಲ್‌ ಹಾಗೂ ಮತ್ತೊಬ್ಬ ರೌಡಿ ಒಂಟೆ ರೋಹಿತ್‌ನ ಕೊಡಿಗೇಹಳ್ಳಿ ಮನೆಗಳಿಗೂ ಹೋಗಿದ್ದ ಪೊಲೀಸರು, ಪರಿಶೀಲನೆ ನಡೆಸಿದ್ದರು. ಸುನೀಲ್‌ನ ಮನೆಯಲ್ಲಿ ಪತ್ನಿ ಮಾತ್ರ ಇದ್ದರು. ‘ದಾಳಿ ಮಾಡಲು ವಾರಂಟ್ ಇದೆಯಾ’ ಎಂದು ಪತ್ನಿ ಪ್ರಶ್ನಿಸಿದ್ದರು. ಮನೆಯಲ್ಲೆಲ್ಲ ಹುಡುಕಾಡಿದರೂ ಸುನೀಲ್ ಪತ್ತೆಯಾಗಿರಲಿಲ್ಲ. ಪರಾರಿಯಾಗಿರಬಹುದೆಂದು ಪೊಲೀಸರು ವಾಪಸು ಬಂದಿದ್ದರು.

ಮರುದಿನವೇ ಎಲ್ಲ ರೌಡಿಗಳಿಗೂ ನೋಟಿಸ್ ನೀಡಿ, ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಆದರೆ, ಕೆಲವರಷ್ಟೇ ವಿಚಾರಣೆಗೆ ಬಂದು ಮುಚ್ಚಳಿಕೆ ಬರೆದುಕೊಟ್ಟು ಹೋಗಿದ್ದರು. ಸೈಲೆಂಟ್ ಸುನೀಲ್ ಮಾತ್ರ ಬಂದಿರಲಿಲ್ಲ. ಆತನಿಗಾಗಿ ಹುಡುಕಾಟ ಮುಂದುವರಿದಿತ್ತು.

ಸಿಸಿಬಿ ಕಚೇರಿ ಬಳಿಯೇ ಕಾರ್ಯಕ್ರಮ: ಚಾಮರಾಜಪೇಟೆಯ ಮುಖ್ಯರಸ್ತೆಯಲ್ಲಿ ಸಿಸಿಬಿ ಕಚೇರಿ ಇದೆ. ಅದರ ಸಮೀಪದಲ್ಲಿರುವ 5ನೇ ಅಡ್ಡರಸ್ತೆಯ ಬಿ.ಎಸ್. ವೆಂಕಟರಾಮ್ ಕಲಾಭವನದಲ್ಲಿ ನ. 27ರಂದು ಸೈಲೆಂಟ್ ಸುನೀಲ್ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದ.

ಇದೇ ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿಸೂರ್ಯ, ಶಾಸಕ ಉದಯ ಗರುಡಾಚಾರ್ ಮುಂತಾದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಸುನೀಲ್ ಇರುವ ಮಾಹಿತಿ ತಿಳಿಯುತ್ತಿದ್ದಂತೆ ಸಿಸಿಬಿ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಬಿಜೆಪಿ ಮುಖಂಡರ ಪಕ್ಕದಲ್ಲಿ ಕುಳಿತಿದ್ದರಿಂದ, ಕೆಲ ಹೊತ್ತಿನ ನಂತರ ಬಂಧಿಸೋಣವೆಂದು ಸುಮ್ಮನಾಗಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಶಾಸಕ ಉದಯ್‌ ಗರುಡಾಚಾರ್ ಅವರ ಕಾರನ್ನು ಹತ್ತಿ ಸೈಲೆಂಟ್‌ ಸುನೀಲ್ ಹೊರಟು ಹೋದನೆಂದು ಸಿಸಿಬಿ ಮೂಲಗಳು
ಹೇಳಿವೆ.

17 ಪ್ರಕರಣಗಳಲ್ಲಿ ಆರೋಪಿ: ‘ಬೆಕ್ಕಿನ ಕಣ್ಣು ರಾಜೇಂದ್ರ ಕೊಲೆ ಸೇರಿ 17 ಪ್ರಕರಣಗಳಲ್ಲಿ ಆರೋಪಿ ಆಗಿದ್ದ ಸೈಲೆಂಟ್ ಸುನೀಲ್‌ನ ಹೆಸರು ಹಲವು ಠಾಣೆಗಳ ರೌಡಿಪಟ್ಟಿಯಲ್ಲಿದೆ. ತಮ್ಮ ವಿರುದ್ಧದ 17 ಪ್ರಕರಣಗಳಿಗೂ ಸುನೀಲ್, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾನೆ. ಯಾವುದೇ ವಾರಂಟ್‌ಗಳು ಬಾಕಿ ಇಲ್ಲ. ಬಿಬಿಎಂಪಿ ಕಸ ಸಾಗಣೆ ಹಾಗೂ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡು ಹಣ ಮಾಡುತ್ತಿದ್ದಾನೆ. ಈಗ ಬಿಜೆಪಿ ಸೇರಿ ರಾಜಕೀಯಕ್ಕೆ ಬರಲು ಯೋಚಿಸುತ್ತಿದ್ದಾನೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಸಚಿವ ಅಶ್ವತ್ಥನಾರಾಯಣ ಸಮಜಾಯಿಷಿ...

‘ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯ ರೀತಿಯಲ್ಲಿ ಬದುಕಿ ಬಾಳಲು ಅವಕಾಶವಿದೆ. ಕಾನೂನಿನ ಪ್ರಕಾರ ಯಾರಾದರೂ ತಪ್ಪಿತಸ್ಥರಾಗಿದ್ದರೆ ಅವರು ತಪ್ಪಿತಸ್ಥರೇ. ಅವರನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

‘ಸೈಲೆಂಟ್‌ ಸುನೀಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರ ಬಗೆಗೆ ಚರ್ಚೆ ನಡೆಯುತ್ತಿದೆ. ಯಾವುದೇ ರೀತಿಯ ಚಾರ್ಜ್‌ಶೀಟ್‌ ಆಗಿದ್ದರೆ ಅಥವಾ ಶಿಕ್ಷೆಯಲ್ಲಿದ್ದರೆ ಒಪ್ಪಿಕೊಳ್ಳಬಹುದು. ಏನೂ ಇಲ್ಲದ ವ್ಯಕ್ತಿಗಳಿಗೆ ಬದುಕಲು ಅವಕಾಶ ನೀಡದೇ ನಿಂದಿಸುವುದು ಸರಿಯಲ್ಲ. ಚಾರ್ಜ್‌ಶೀಟ್‌ ಆಗಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಆಗುವುದಿಲ್ಲ’ ಎಂದು ತಿಳಿಸಿದರು.

‌ಬಿಜೆಪಿಯವರಿಗೆ ರೌಡಿ ಸಿಕ್ಕಿದ್ದು ಹೇಗೆ: ಕಾಂಗ್ರೆಸ್‌ ಪ್ರಶ್ನೆ

‘ಕ್ರಿಮಿನಲ್‌ಗಳೊಂದಿಗೆ ಬಿಜೆಪಿಯ ನೆಂಟಸ್ತಿಕೆ ಇರುವಾಗ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಏರದಿರುತ್ತದೆಯೇ? ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ರಾಜ್ಯ ಕಾಂಗ್ರೆಸ್‌ ಘಟಕ ಪ್ರಶ್ನಿಸಿದೆ.

‘ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ? ಬಿಜೆಪಿಯ ಕೃಪಾಕಟಾಕ್ಷದಿಂದ ‘ಸೈಲೆಂಟ್‌ ಸುನೀಲ್‌ ಎಂಬ ರೌಡಿ‌ ಮುಂದೆ ಈಗ ಪೊಲೀಸರೇ ಸೈಲೆಂಟ್ ಆಗಿದ್ದಾರೆ. ‘ಸೈಲೆಂಟ್‌ ಸುನೀಲ್‌ ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರು ಇರಲಿಲ್ಲವೇ? ಬಂಧಿಸದಂತೆ ಪೊಲೀಸರನ್ನು ತಡೆದವರು ಯಾರು? ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ’ ಎಂದೂ ಕೆಣಕಿದೆ.

‘ಸುನೀಲ್‌ ನನ್ನ ಸ್ನೇಹಿತ, ರೌಡಿ ಅನ್ನೋದು ಗೊತ್ತಿಲ್ಲ’

‘ಸುನೀಲ್‌ ಹಲವು ವರ್ಷಗಳಿಂದ ಗೊತ್ತು. ಸ್ನೇಹಿತನೂ ಹೌದು. ಆದರೆ ಆತನೇ ಸೈಲೆಂಟ್‌ ಸುನೀಲ್‌ ಅಂತ ನನಗೆ ಗೊತ್ತಿಲ್ಲ’ ಎಂದು ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್‌ ಪ್ರತಿಕ್ರಿಯಿಸಿದ್ದಾರೆ.

‘ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದರು. ಒಳ್ಳೆಯ ಕಾರ್ಯಕ್ರಮ ಅಂತ ಹೋಗಿದ್ದೆ. ಆದರೆ, ಸುನೀಲ್‌ ನನ್ನ ಜತೆ ಕಾರಿನಲ್ಲಿ ಬಂದಿದ್ದ ಎಂಬುದು ಸತ್ಯವಲ್ಲ. ಅವನ ಹಿನ್ನೆಲೆ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT