ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್.ಆರ್. ನಗರ ಅಕ್ರಮ: ಎಂಟು ಎಂಜಿನಿಯರ್‌ ಅಮಾನತು

ಕಾಮಗಾರಿ ನಡೆಸದೆ ಕೆಆರ್‌ಐಡಿಎಲ್‌ ಬಿಲ್‌: ₹118 ಕೋಟಿ ನಷ್ಟ; ಲೋಕಾಯುಕ್ತ ಶಿಫಾರಸು
Published 16 ಜೂನ್ 2023, 3:15 IST
Last Updated 16 ಜೂನ್ 2023, 3:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಮಗಾರಿ ನಡೆಸದೆ ನಕಲಿ ಬಿಲ್‌ ಮಾಡಿ ₹118 ಕೋಟಿಗೂ ಹೆಚ್ಚು ಮೊತ್ತವನ್ನು ನಷ್ಟ ಮಾಡಿರುವ ಎಂಟು ಎಂಜಿನಿಯರ್‌ಗಳನ್ನು ಲೋಕಾಯುಕ್ತರ ಶಿಫಾರಸಿನ ಮೇರೆಗೆ ಸರ್ಕಾರ ಅಮಾನತು ಮಾಡಿದೆ.

ಆರ್.ಆರ್. ನಗರದಲ್ಲಿ ಬಿಬಿಎಂಪಿಯಿಂದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ (ಕೆಆರ್‌ಐಡಿಎಲ್‌) ವಹಿಸಲಾದ ಕೆಲಸಗಳನ್ನು ಮಾಡದೆ ಬಿಲ್‌ ಮೊತ್ತ ಬಿಡುಗಡೆಯಾಗಿರುವುದು ಲೋಕಾಯುಕ್ತರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣವು ಗಂಭೀರ ಹಾಗೂ ಗುರುತರವಾಗಿದ್ದು, ಪ್ರಭಾವಿಗಳು ಹಾಗೂ ರಾಜಕಾರಣಿಗಳ ಕೈವಾಡವೂ ಇರುವ ಶಂಕೆ ಇದೆ. ಹೀಗಾಗಿ ಉನ್ನತ ತನಿಖೆಗೆ ಸಂದರ್ಭದಲ್ಲಿ ಅಧಿಕಾರಿಗಳು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ಅವರನ್ನು ಅಮಾನತು ಮಾಡಬೇಕು ಎಂದು ಲೋಕಾಯುಕ್ತರು ಶಿಫಾರಸು ಮಾಡಿದ್ದರು.

ಕೆಆರ್‌ಐಡಿಎಲ್‌ಗೆ ವಹಿಸಿರುವ ಎಲ್ಲ ಕಾಮಗಾರಿಗಳ ಬಗ್ಗೆ ಉನ್ನತ ತನಿಖೆಗೆ ವಹಿಸದ ಸಂದರ್ಭದಲ್ಲಿ ದಾಖಲೆಗಳನ್ನು ತಿದ್ದುವುದು, ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳು ಮನದಟ್ಟಾಗಿವೆ. ಜೊತೆಗೆ 114 ಕಾಮಗಾರಿಗಳ ಪರಿಶೀಲನೆಯಿಂದ ಇಷ್ಟು ಬೃಹತ್‌ ಮೊತ್ತದ ದುರುಪಯೋಗ ಕಂಡುಬಂದಿದ್ದು, ಇನ್ನೂ ಹೆಚ್ಚಿನ ಕಾಮಗಾರಿಗಳ ಪರಿಶೀಲನೆಯಿಂದ ಬೃಹತ್‌ ಮೊತ್ತದ ಅಕ್ರಮ, ಹಣ ದುರುಪಯೋಗ ಪತ್ತೆಯಾಗುವ ಸಾಧ್ಯತೆ ಇರುತ್ತದೆ. ಪ್ರಕರಣದಲ್ಲಿ ಆರೋಪಿತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜೆ.ಎಂ. ಚಂದ್ರನಾಥ್‌ ಈಗಾಗಲೇ ನಿವೃತ್ತಿ ಹೊಂದಿದ್ದು, ಅವರನ್ನು ಹೊರತುಪಡಿಸಿ ಎಂಟು ಜನರನ್ನು ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಜೂನ್‌ 6ರಂದು ಆದೇಶ ಹೊರಡಿಸಿದೆ.

‘ಪ್ರಜಾವಾಣಿ’ಯಲ್ಲಿ 2022ರ ಫೆ.9ರಂದು ಪ್ರಕಟವಾಗಿದ್ದ ವರದಿ
‘ಪ್ರಜಾವಾಣಿ’ಯಲ್ಲಿ 2022ರ ಫೆ.9ರಂದು ಪ್ರಕಟವಾಗಿದ್ದ ವರದಿ

ಸಂಸದ ಡಿ.ಕೆ. ಸುರೇಶ್‌ ಅವರು ದೂರಿನಲ್ಲಿ ತಿಳಿಸಿರುವಂತೆ, 126 ಕಾಮಗಾರಿಗಳ ಪಟ್ಟಿಯಲ್ಲಿ 11 ಕಾಮಗಾರಿಗಳು ಪುನರಾವರ್ತಿತಗೊಂಡಿವೆ. ಒಂದು ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸಿಲ್ಲ. ಇನ್ನೊಂದು ಕಾಮಗಾರಿಗೆ ಸರಿಯಾದ ಜಾಬ್‌ಕೋಡ್‌ ನಮೂದಿಸಿಲ್ಲ. ಉಳಿದ 113 ಕಾಮಗಾರಿಗಳಿಗೆ ಬಿಬಿಎಂಪಿ ಮತ್ತು ಕೆಆರ್‌ಐಡಿಎಲ್‌ ನಡುವೆ ಕರಾರು ಪತ್ರವಾಗಿದೆ. 114 ಕಾಮಗಾರಿಗಳಲ್ಲಿ ಅಂದಾಜುಪಟ್ಟಿಯಲ್ಲಿ ತಿಳಿಸಿರುವಂತೆ ನಿರ್ವಹಿಸಿಲ್ಲ. ಅಳತೆ ಪುಸ್ತಕಗಳಲ್ಲಿ ಹೆಚ್ಚು ಅಳತೆ ನಮೂದಿಸಲಾಗಿದೆ. ಕಳಪೆ ಮಟ್ಟದ ಡಾಂಬರು ಕೆಲಸಗಳನ್ನು ನಿರ್ವಹಿಸಿದ್ದು, ಇದರಿಂದ ಸರ್ಕಾರಕ್ಕೆ ₹118,25,79,797 ಹೆಚ್ಚುವರಿ ಹಣ ಪಾವತಿಸಲಾಗಿದೆ ಎಂದು ತನಿಖಾಧಿಕಾರಿಗಳು ವರದಿ ನೀಡಿದ್ದರು. ಬಿಲ್‌ಗಳನ್ನು ಪಾವತಿಸಲು ಮತ್ತು ಕಾಮಗಾರಿಗಳನ್ನು ನಿರ್ವಹಿಸದಿದ್ದರೂ ಹಣವನ್ನು ಪಾವತಿಸಲು ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ಕಳಪೆ ಮಟ್ಟದ ಕಾಮಗಾರಿ ನಿರ್ವಹಿಸಿರುವುದು ಗಂಭೀರ ವಿಷಯ ಎಂದು ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿದೆ.

ಕೆಆರ್‌ಐಡಿಎಲ್‌ಗೆ ಕೆಲಸ ಕೊಡಬೇಡಿ!

ಬಿಬಿಎಂಪಿ ವತಿಯಿಂದ ಕೆಆರ್‌ಐಡಿಎಲ್‌ಗೆ ವಹಿಸಿರುವ ಕಾಮಗಾರಿಗಳನ್ನು ನಿರ್ವಹಿಸುವುದರಲ್ಲಿ ಮತ್ತು ಮೇಲುಸ್ತುವಾರಿಯಲ್ಲಿ ಬಿಬಿಎಂಪಿ ಅಧಿಕಾರಿಗಳಿಂದ ಗಂಭೀರ ಲೋಪಗಳಾಗಿವೆ. ಹಣಕಾಸಿನ ಸೋರಿಕೆಯನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಹಣ ದುರುಪಯೋಗವಾಗದಿರಲು ಲೋಕಾಯುಕ್ತರು ನಾಲ್ಕು ಶಿಫಾರಸು ಮಾಡಿದ್ದಾರೆ. ಬಿಬಿಎಂಪಿಯಿಂದ ಅನುಷ್ಠಾನಗೊಳಿಸಬೇಕಾದ ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಅಥವಾ ಇತರೆ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಬಾರದು. ಸಿವಿಲ್‌ ಸ್ಕ್ವೇರ್‌ ಕನ್ಸಲ್ಟೆಂಟ್ಸ್‌ (ಸಿವಿಲ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್ಸ್ 3ನೇ ಪಾರ್ಟಿ ಪರಿಶೀಲನೆ ಪಿಎಂಸಿ ಮೆಟೀರಿಯಲ್‌ ಟೆಸ್ಟಿಂಗ್‌ ಲ್ಯಾಬೊರೇಟರಿ) ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಇನ್ನು  ಮುಂದೆ ಬಿಬಿಎಂಪಿ ಮತ್ತು ಕೆಆರ್‌ಐಡಿಎಲ್‌ ಸಂಸ್ಥೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆಯನ್ನು ಅನುಮೋದಿತ ಪಟ್ಟಿಯಿಂದ ತೆಗೆದುಹಾಕಬೇಕು. ರಾಜ್ಯ ಸರ್ಕಾರ ಯಾವುದೇ ಸಿವಿಲ್‌ ಕಾಮಗಾರಿಗಳನ್ನು ಇವರಿಗೆ ವಹಿಸಬಾರದು. ಬಿಬಿಎಂಪಿ ವತಿಯಿಂದ ಎರಡು ವರ್ಷಗಳಲ್ಲಿ ಕೆಆರ್‌ಐಡಿಎಲ್‌ಗೆ ವಹಿಸಿರುವ ಕಾಮಗಾರಿಗಳ ಪೈಕಿ ಅನುಷ್ಠಾನವಾಗಿರುವ ಮತ್ತು ಅನುಷ್ಠಾನವಾಗುತ್ತಿರುವ ಕಾಮಗಾರಿಗಳಲ್ಲಿ ಶೇ 10ರಷ್ಟನ್ನು ಮಾದರಿ ಸಮೀಕ್ಷೆ ಮಾಡಬೇಕು. ಇದಕ್ಕಾಗಿ ಉನ್ನತ ಮಟ್ಟದ ಅಧಿಕಾರಿಯ ಅಧ್ಯಕ್ಷತೆಯಲ್ಲಿ ತಜ್ಞರೊಂದಿಗೆ ವಿಶೇಷ ಸಮಿತಿ ರಚಿಸಬೇಕು. ಇಲ್ಲದಿದ್ದರೆ ಎಲ್ಲ ಕಾಮಗಾರಿಗಳ ಬಗ್ಗೆ ತನಿಖೆ ಮಾಡಲು ಸರ್ಕಾರ ಲೋಕಾಯುಕ್ತಕ್ಕೆ ವಹಿಬೇಕು.

ಸಿಇ ದೊಡ್ಡಯ್ಯ ಸೇರಿ ಅಮಾನತಾದವರು

* ದೊಡ್ಡಯ್ಯ ಮುಖ್ಯ ಎಂಜಿನಿಯರ್‌ ಟಿವಿಸಿಸಿ ಕೋಶ. (ಪ್ರಸ್ತುತ– ಮುಖ್ಯ ಎಂಜಿನಿಯರ್‌ ಪಶ್ಚಿಮ ವಲಯ)

* ಸತೀಶ್‌ಕುಮಾರ್‌ ಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಟಿವಿಸಿಸಿ ಕೋಶ.

* ಬಸವರಾಜ್‌ ಎನ್‌ ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜರಾಜೇಶ್ವರಿನಗರ ವಿಭಾಗ (ಕರ್ನಾಟಕ ವಿದ್ಯುತ್ ನಿಗಮದಿಂದ ಎರವಲು ಸೇವೆ)

* ಸಿದ್ದರಾಮಯ್ಯ ಎಂ ಸಹಾಯಕ ಎಂಜಿನಿಯರ್ ವಾರ್ಡ್‌ 129 160 ರಾಜರಾಜೇಶ್ವರಿನಗರ ಉಪವಿಭಾಗ.

* ಎನ್‌.ಜಿ. ಉಮೇಶ್‌ ಸಹಾಯಕ ಎಂಜಿನಿಯರ್‌ (ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ಯಶವಂತಪುರ ವಿಭಾಗ).

* ಶ್ರೀನಿವಾಸ್‌ ಕಾರ್ಯಪಾಲಕ ಎಂಜಿನಿಯರ್‌ ಕೆಆರ್‌ಐಡಿಎಲ್‌ ಆನಂದರಾವ್‌ ವೃತ್ತ.

* ವೆಂಕಟಲಕ್ಷ್ಮಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಟಿವಿಸಿಸಿ ಕೋಶ.

* ಶ್ರೀತೇಜ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಟಿವಿಸಿಸಿ ಕೋಶ (ಪ್ರಸ್ತುತ– ಕಾರ್ಯಪಾಲಕ ಎಂಜಿನಿಯರ್‌ ಟಿವಿಸಿಸಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT