ಅಕ್ರಮ ಸಂಬಂಧ ಮುಂದುವರಿಸದಿದ್ದಕ್ಕೆ ಚಾಕು ಇರಿತ

ಬೆಂಗಳೂರು: ಅಕ್ರಮ ಸಂಬಂಧ ಮುಂದುವರಿಸಲಿಲ್ಲವೆಂಬ ಕಾರಣಕ್ಕೆ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಆರೋಪಿ ಶೇಖ್ ಮೆಹಬೂಬ್ (32) ಎಂಬುವವರನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.
‘ಮಠದಹಳ್ಳಿ ಬಳಿ ಭಾನುವಾರ ತಡರಾತ್ರಿ ನಡೆದಿರುವ ಘಟನೆಯಲ್ಲಿ 30 ವರ್ಷದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆ ಹೇಳಿಕೆ ಹಾಗೂ ಸಹೋದರನ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಶೇಖ್ ಮೆಹಬೂಬ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸ್ಥಳೀಯ ನಿವಾಸಿಯಾದ ಮಹಿಳೆಯ ಪತಿ 6 ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಆಟೊ ಚಾಲಕನಾದ ಶೇಖ್ ಮೆಹಬೂಬ್, ಮಹಿಳೆಯನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದ. ಇಬ್ಬರ ನಡುವೆ ಅಕ್ರಮ ಸಂಬಂಧವೂ ಬೆಳೆದಿತ್ತು’ ಎಂದು ತಿಳಿಸಿದರು.
‘ತನಗೆ ಮದುವೆಯಾಗಿಲ್ಲವೆಂದು ಆರೋಪಿ ಹೇಳಿಕೊಂಡಿದ್ದ. ಆದರೆ, ಆತನಿಗೆ ಮದುವೆಯಾಗಿ ಮಕ್ಕಳಿದ್ದರು. ಇತ್ತೀಚೆಗೆ ಈ ಸಂಗತಿ ಮಹಿಳೆಗೆ ಗೊತ್ತಾಗಿತ್ತು. ಹೀಗಾಗಿ, ಅವರು ಆರೋಪಿಯಿಂದ ದೂರವಿರಲು ಯತ್ನಿಸಿದ್ದರು’ ಎಂದು ಹೇಳಿದರು.
‘ಒಂಟಿಯಾಗಿದ್ದ ಮಹಿಳೆ, ಎರಡನೇ ಮದುವೆಯಾಗಲು ತಯಾರಿ ನಡೆಸುತ್ತಿದ್ದರು. ಈ ಸಂಗತಿ ತಿಳಿಯುತ್ತಿದ್ದಂತೆ ಆರೋಪಿ, ಮಹಿಳೆಯ ಮನೆಗೆ ಹೋಗಿ ಗಲಾಟೆ ಮಾಡಿ ಚಾಕುವಿನಿಂದ ಇರಿದಿದ್ದಾನೆ’ ಎಂದು ತಿಳಿಸಿದರು.
ಶುಶ್ರೂಷಕಿ ಸೋಗು: ಆಭರಣ ಕಳ್ಳತನ
ಬೆಂಗಳೂರು: ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಶುಶ್ರೂಷಕಿ ಸೋಗಿನಲ್ಲಿ ರೋಗಿಯೊಬ್ಬರ ಚಿನ್ನಾಭರಣ ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜ. 14ರಂದು ನಡೆದಿರುವ ಕಳ್ಳತನ ಸಂಬಂಧ ರೋಗಿಯ ಸಂಬಂಧಿಕರು ದೂರು ನೀಡಿದ್ದಾರೆ. ಅಸಲಿ ಚಿನ್ನಾಭರಣ ಕದ್ದಿರುವ ಆರೋಪಿ, ಅದೇ ಜಾಗದಲ್ಲಿ ನಕಲಿ ಚಿನ್ನಾಭರಣವನ್ನಿಟ್ಟು ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಅಪರಿಚಿತ ಮಹಿಳೆ ಹಾಗೂ ಸೂಕ್ತ ಭದ್ರತೆ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.
ಸಿಗರೇಟ್ ವಿಚಾರ: ಹಲ್ಲೆ
ಬೆಂಗಳೂರು: ಸಿಗರೇಟ್ ವಿಚಾರವಾಗಿ ಬೇಕರಿ ಮಾಲೀಕ ಮಂಜುನಾಥ್ ಶೆಟ್ಟಿ ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಜೆ.ಪಿ. ನಗರದ 24ನೇ ಮುಖ್ಯರಸ್ತೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ಗಾಯಗೊಂಡಿರುವ ಮಂಜುನಾಥ್ ಶೆಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಮಂಜುನಾಥ್ ಶೆಟ್ಟಿ ಅವರು ‘ಶ್ರೀ ಮಂಜುನಾಥೇಶ್ವರ್ ಕಾಂಡಿಮೆಂಡ್ಸ್’ ಬೇಕರಿ ನಡೆಸುತ್ತಿದ್ದರು. ಬೇಕರಿಗೆ ಬಂದಿದ್ದ ಆರೋಪಿಗಳು, ನೇರವಾಗಿ ಸಿಗರೇಟ್ ಪ್ಯಾಕ್‌ಗಳಿಗೆ ಕೈ ಹಾಕಿ ತೆಗೆದುಕೊಳ್ಳಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದ್ದ ಮಂಜುನಾಥ್ ಜೊತೆ ಜಗಳ ತೆಗೆದಿದ್ದರು. ‘ಹಲ್ಲೆಯ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಹಿತಿ ಬರುತ್ತಿದ್ದಂತೆ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಕೆಲ ಪುರಾವೆಗಳನ್ನು ಅಧರಿಸಿ ನಾಲ್ವರನ್ನು ವಶಕ್ಕೆ ಪಡೆದಿದ್ದು, ಅವರ ಹಿನ್ನೆಲೆ ಏನು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.