ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಮತ್ತೆ ‘ಬೇಸಿಗೆ ಸಂಭ್ರಮ’ ಶಿಬಿರಗಳನ್ನು ಪುನರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಶನಿವಾರ ನಡೆದ ‘ಸಂವೇದನಾ’ ಫೋನ್ ಇನ್ ಕಾರ್ಯಕ್ರಮದಲ್ಲಿ ಕೂಡ್ಲಿಗಿಯ ವಿಜಯಕುಮಾರ್ ಎಂಬುವವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಕಾರ್ಯಕ್ರಮಕ್ಕೆ ಮಕ್ಕಳಿಂದ ಅಂತಹ ಸ್ಪಂದನೆ ಇಲ್ಲ ಎಂಬ ಕಾರಣಕ್ಕೆ ಅದನ್ನು ಮುಂದುವರಿಸಿರಲಿಲ್ಲ. ಆದರೆ ಬಿಸಿಯೂಟಕ್ಕೆ ಬರುವ ಮಕ್ಕಳಿಗೆ ಇಂತಹ ಶಿಬಿರ ಹಮ್ಮಿಕೊಂಡರೆ ಅವರ ಸಾಂಸ್ಕೃತಿಕ, ಕ್ರೀಡಾ ಸಾಮರ್ಥ್ಯ ಹೆಚ್ಚುತ್ತದೆ ಎಂಬ ಕಾರಣಕ್ಕೆ ಈ ವರ್ಷದಿಂದ ಅದನ್ನು ಪುನರಾರಂಭಿಸಲಾಗುವುದು ಎಂದರು.
ಸಾಂದರ್ಭಿಕ ರಜೆ ಹೆಚ್ಚಿಸಿ: ‘ಎರಡು ಹಾಗೂ ನಾಲ್ಕನೇ ಶನಿವಾರವೂ ನಾವು ಕೆಲಸ ಮಾಡುತ್ತೇವೆ.ಸಾಂದರ್ಭಿಕ ರಜೆಯನ್ನು(ಸಿಎಲ್) 10ರಿಂದ 15ಕ್ಕೆ ಏರಿಕೆ ಮಾಡಬೇಕು’ ಎಂದುಕೊರಟಗೆರೆಯ ಸುಮಾ ಒತ್ತಾಯಿಸಿದರು. ‘ಶಿಕ್ಷಕರ ಸಾಂದರ್ಭಿಕ ರಜೆ ಹೆಚ್ಚಳ ಮಾಡಬೇಕು ಎನ್ನುವುದಕ್ಕೆ ನನ್ನ ಸಹಮತವಿದೆ. ಈ ಬಗ್ಗೆ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.
ಇದೇ ಪ್ರಥಮ ಬಾರಿಗೆ ಹಮ್ಮಿಕೊಂಡ ಫೋನ್ ಇನ್‌ಗೆ ಸುಮಾರು 44 ಕರೆಗಳು ಬಂದವು. ಶಾಲೆಯ ಕಟ್ಟಡಗಳು ಶಿಥಿಲ, ಶಿಕ್ಷಕರ ಕೊರತೆ, ವರ್ಗಾವಣೆ, ಬಡ್ತಿ ಗೊಂದಲ, ಆರೋಗ್ಯ ವಿಮೆ,ಕಾಲ ಕಾಲಕ್ಕೆ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆ, ಸಾಂದರ್ಭಿಕ ರಜೆ (ಸಿಎಲ್) ಕಡಿತ ಸೇರಿದಂತೆ ಹಲವು ಪ್ರಶ್ನೆಗಳು ಎದುರಾದವು.
ಕರೆ ಮಾಡಿದವರಿರಲ್ಲಿ ಬಹುತೇಕರು ಶಿಕ್ಷಕರೇ ಆಗಿದ್ದು, ತಮ್ಮ ಬವಣೆಗಳನ್ನು ಹೇಳಿಕೊಂಡರು. ಸಚಿವರು ಪ್ರತಿಯೊಬ್ಬರ ಮಾತನ್ನು ತಾಳ್ಮೆಯಿಂದ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದರು. ಬಹುತೇಕ ದೂರವಾಣಿ ಕರೆಗಳು ಉತ್ತರ ಕರ್ನಾಟಕ ಭಾಗದಿಂದಲೇ ಬಂದಿದ್ದವು. ಬೆಂಗಳೂರಿನಿಂದ ಒಂದೂ ಕರೆ ಬರಲಿಲ್ಲ.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಆಯುಕ್ತ ಡಾ.ಕೆ. ಜಿ. ಜಗದೀಶ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕ ಡಾ. ಎಂ.ಟಿ. ರೇಜು ಇದ್ದರು.
ಕರೆ ಮಾಡದ ಮಕ್ಕಳು
ಮಕ್ಕಳು ಹಾಗೂ ಪಾಲಕರು ದೂರವಾಣಿ ಕರೆ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವರು, ‘ಮುಂದಿನ ದಿನಗಳಲ್ಲಿ ಫೋನ್ ಇನ್ ಕಾರ್ಯಕ್ರಮವನ್ನು ಶಾಲೆಗಳಿಗೆ ರಜೆ ಇರುವ ಸಂದರ್ಭವನ್ನು ನೋಡಿ ಏರ್ಪಡಿಸಲಾಗುವುದು’ ಎಂದು ತಿಳಿಸಿದರು. ಅದೇ ರೀತಿ, ‘ಹದಿನೈದು ದಿನಕ್ಕೊಮ್ಮೆ ಫೋನ್ ಇನ್ ನಡೆಸಿ, ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಲಾಗುವುದು’ ಎಂದು ಭರವಸೆ ನೀಡಿದರು.
ಸೊಸೆ ನೋಡಿಕೊಳ್ಳುತ್ತಿಲ್ಲ, ಹಣ ನನಗೇ ದೊರಕಿಸಿ
‘ಶಿಕ್ಷಕನಾಗಿದ್ದ ನನ್ನ ಮಗ ಮೃತಪಟ್ಟಿದ್ದಾನೆ, ಸೊಸೆಯೂ ಶಿಕ್ಷಕಿ, ಆಕೆ ನನ್ನನ್ನು ನೋಡಿಕೊಳ್ಳುತ್ತಿಲ್ಲ, ಹೀಗಾಗಿ ನನ್ನ ಮಗನ ಹಣಕಾಸು ಸೌಲಭ್ಯಗಳನ್ನು ನನ್ನ ಬ್ಯಾಂಕ್ ಖಾತೆಗೇ ಬರುವಂತೆ ವ್ಯವಸ್ಥೆ ಮಾಡಿ’ ಎಂದು 75 ವರ್ಷದ ವೃದ್ಧರೊಬ್ಬರು ಕರೆ ಮಾಡಿದರು. ಈ ಬಗ್ಗೆ ಪ್ರಾದೇಶಿಕ ಆಯುಕ್ತರನ್ನು ಸಂಪರ್ಕಿಸಲು ಸಚಿವರು ಸಲಹೆ ನೀಡಿ, ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆಯ ಅಧಿಕಾರಿಗಳಿಗೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.