ಭಾನುವಾರ, ಜುಲೈ 3, 2022
27 °C
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಮತ

ಮಲಹೊರುವ ಪದ್ಧತಿ ತಡೆಗೆ ತಂತ್ರಜ್ಞಾನ ಬಳಸಿ: ಬಿ.ಎಲ್.ಸಂತೋಷ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದಲ್ಲಿ ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಮಲ ಹೊರುವ ಪದ್ಧತಿಯನ್ನು ಬೇರುಸಹಿತ ನಿರ್ಮೂಲನೆ ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.

ರಾಷ್ಟ್ರೀಯ ಹಾಗೂ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗಗಳು ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಪರಿಷತ್‌ನ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ಸಫಾಯಿ ಕರ್ಮಚಾರಿ ಆಯೋಗದ ಯೋಜನೆಗಳು, ಕಾರ್ಯಕ್ಷಮತೆ, ಸಾಧನೆ, ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ಅನುಷ್ಠಾನ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಸೇನೆಯೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆಯಿಂದ ಜೀವಹಾನಿ ತಪ್ಪಿದೆ. ದೇಶದಲ್ಲಿ ನಿಷೇಧಿತ ಮಲಹೊರುವ ಪದ್ಧತಿಗೂ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೇರುಸಹಿತ ಕಿತ್ತು ಹಾಕಬೇಕು‌’ ಎಂದರು.

‘ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸೌಲಭ್ಯ ಪಡೆದುಕೊಳ್ಳುವ ದಾರಿ ತೋರಿದರು. ಬಾಬು ಜಗಜೀವನರಾಂ ಅವರು ಆಡಳಿತ ವ್ಯವಸ್ಥೆಯ ಒಳಗಿದ್ದುಕೊಂಡು ಶೋಷಿತರ ನ್ಯಾಯಕ್ಕಾಗಿ ಹೋರಾಡಿದರು. ಇವರ ಹೋರಾಟದ ಫಲವಾಗಿ ಸಮುದಾಯಕ್ಕೆ ಆಯೋಗಗಳು ರಚನೆಯಾಗಿವೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರನ್ನು ‘ಕೊರೊನಾ ಸೇನಾನಿ’ಗಳೆಂದು ಕರೆದಿದ್ದರು. ಇದರಿಂದ ಈ ವರ್ಗಗಳನ್ನು ಗೌರವಯುತವಾಗಿ ನೋಡುವ ವಾತಾವರಣ ಇಂದು ದೇಶದಲ್ಲಿ ಸೃಷ್ಟಿಯಾಗಿದೆ’ ಎಂದರು.

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ,‘  ಸಫಾಯಿ ಕರ್ಮಚಾರಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ತಂದು ಆಯೋಗಕ್ಕೆ ಶಕ್ತಿ ತುಂಬಿದೆ. ಬಿಜೆಪಿ ಸರ್ಕಾರ ಬಂದ ನಂತರ ಸಮುದಾಯಕ್ಕೆ ಗೌರವ ಹೆಚ್ಚಿದೆ. ಪೌರಕಾರ್ಮಿಕರನ್ನು ಕಾಯಂಗೊಳಿಸುವುದೂ ಸೇರಿದಂತೆ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿದೆ’ ಎಂದರು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ,‘ರಾಜ್ಯದಲ್ಲಿ ಪ್ರಥಮ ಬಾರಿಗೆ ಮಲ ಸ್ವಚ್ಛಗೊಳಿಸಲು ರೊಬೊಟಿಕ್ ತಂತ್ರಜ್ಞಾನ ತರಲಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು