ಸೋಮವಾರ, ಜುಲೈ 4, 2022
24 °C
‘ವಜ್ರದ ಬೇರುಗಳು’ ಸಾಹಿತ್ಯ ಪ್ರಕಾರ ಮಾಲಿಕೆಯ 10 ಪುಸ್ತಕಗಳ ಬಿಡುಗಡೆ

‘ಸಾಹಿತ್ಯದ ಒಳನೋಟ ನೀಡುವ ಕೃತಿಗ‌ಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಜ್ರದ ಬೇರುಗಳು’ ಮಾಲಿಕೆಯಲ್ಲಿ ಪ್ರಕಟಗೊಂಡಿರುವ 10 ಪುಸ್ತಕಗಳಲ್ಲೂ ಲೇಖಕರು ಒಂದೊಂದು ವಿಚಾರದ ಕುರಿತು ಚರ್ಚಿಸಿದ್ದಾರೆ. ಈ ಕೃತಿಗಳು ಹಳಗನ್ನಡ, ನಡುಗನ್ನಡ, ಕಾವ್ಯ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರದ ಸಾಧ್ಯತೆಗಳ ಕುರಿತು ಮಾತನಾಡುತ್ತವೆ’ ಎಂದು ಮಾಲಿಕೆಯನ್ನು ಸಂಪಾದನೆ ಮಾಡಿರುವ ಬಸವರಾಜ ಕಲ್ಗುಡಿ ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಶುಕ್ರವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹೊಸ ವಿಷಯಗಳನ್ನು ಕಲಿಯಲು ಈ ಪುಸ್ತಕಗಳು ಸಹಕಾರಿಯಾಗಿವೆ. ಬರಹದ ಅವರೋಹಣ ಕಾಲದಲ್ಲಿ ಬರಹಕ್ಕೆ ಇನ್ನೂ ಬಲವಿದೆ ಎಂಬ ಕೂಗನ್ನು ಗಟ್ಟಿಗೊಳಿಸುವ ಕೆಲಸವನ್ನೂ ಇವು ಮಾಡುತ್ತವೆ. ಕಾವ್ಯದ ಭಾಷೆ ಮತ್ತು ವಸ್ತು, ಅದು ರೂಪುಗೊಳ್ಳುವ ಆತಂಕದ ಸ್ಥಿತಿ, ಇದನ್ನು ನಮ್ಮ ಸಾಹಿತ್ಯ ಪರಂಪರೆಯಲ್ಲಿ ಕವಿಗಳು ನೋಡಿರುವ ಬಗೆಯ ಕುರಿತು ಚರ್ಚಿಸುವ ಕೆಲಸವನ್ನು ‘ಕನ್ನಡ ಕಾವ್ಯ’ ಕೃತಿ ಮಾಡುತ್ತದೆ’ ಎಂದು ಹೇಳಿದರು.

‘ವಸಾಹತು ಪ್ರಭಾವದಿಂದ ಜನ್ಮತಾಳಿದ ಕಾದಂಬರಿ, ಕಥನ, ನಾಟಕದಂತಹ ಹೊಸ ಪ್ರಕಾರಗಳು ಹಿಡಿದ ಭಾಷೆ ಯಾವುದು, ಇವುಗಳನ್ನು ಓದುವ ಬಗೆ ಹೇಗೆ, ನಿರೂಪಣೆಯೂ ಒಂದು ಭಾಷೆ ಎಂಬುದನ್ನು ಶಶಿಕಲಾ ಅವರು ತಮ್ಮ ‘ಕನ್ನಡ ಕಾದಂಬರಿ ಲೋಕ’ ಕೃತಿಯಲ್ಲಿ ಹೇಳುತ್ತಾರೆ. ಈ ಕೃತಿಗಳಿಂದ ಸಾಹಿತ್ಯದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತವೆ’ ಎಂದರು.

ಮಾಲಿಕೆ ಸಂಪಾದನೆ ಮಾಡಿರುವ ಮತ್ತೊಬ್ಬ ಲೇಖಕ ಎಚ್‌.ಎಸ್‌.ರಾಘವೇಂದ್ರರಾವ್‌, ‘ಬಿಡುಗಡೆಯಾಗಿರುವ ಎಲ್ಲ ಪುಸ್ತಕಗಳೂ ಗಟ್ಟಿ ಕಾಳಿನಂತಿವೆ. ಇವು ಸಂಪಾದಕ ನಿರ್ಮಿತವಲ್ಲ. ಲೇಖಕರ ಸ್ವಾತಂತ್ರ್ಯ, ಸಂಪಾದಕರ ಆಲೋಚನೆಗಳ ಸಮ್ಮಿಳಿತದಿಂದ ಒಡಮೂಡಿರುವ ಕೃತಿಗಳು’ ಎಂದು ಹೇಳಿದರು. 

ಕೃತಿಗಳನ್ನು ಬಿಡುಗಡೆ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌.ನಂದೀಶ್‌ ಹಂಚೆ, ‘ಅನುವಾದ, ಸಂಶೋಧನೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಕುರಿತು ಸಂಕ್ಷಿಪ್ತ ಹಾಗೂ ಸಮಗ್ರ ಮಾಹಿತಿ ಒದಗಿಸುವ ಕೆಲಸವನ್ನು ಸಾಹಿತ್ಯ ಅಕಾಡೆಮಿಯು ಈ ಕೃತಿಗಳ ಮೂಲಕ ಮಾಡಿದೆ’ ಎಂದು ತಿಳಿಸಿದರು. 

ಬಿಡುಗಡೆಯಾದ ಕೃತಿಗಳು

ಹಳಗನ್ನಡ ಸಾಹಿತ್ಯ ಪ್ರಕಾರಗಳು (ರಾ.ಲಕ್ಷ್ಮೀನಾರಾಯಣ), ಸಾಹಿತ್ಯ ಸಂಶೋಧನೆ (ನಿತ್ಯಾನಂದ ಬಿ.ಶೆಟ್ಟಿ), ಕನ್ನಡ ಕಾವ್ಯ (ಆನಂದ ಝಂಜರವಾಡ), ಮಹಾಕಾವ್ಯ ಖಂಡಕಾವ್ಯ ಕಥನ ಕವನ (ನೀ.ಗೂ.ರಮೇಶ್‌), ಕನ್ನಡದಲ್ಲಿ ಅಂಕಣ ಸಾಹಿತ್ಯ (ದೊಡ್ಡೇಗೌಡ ಬಿ.ಸಿ), ಮಕ್ಕಳ ಸಾಹಿತ್ಯ (ಆನಂದ ಪಾಟೀಲ), ಕನ್ನಡ ಜನಪದ ಸಾಹಿತ್ಯ ಪ್ರಕಾರಗಳು (ಹಿ.ಶಿ.ರಾಮಚಂದ್ರೇಗೌಡ), ಕನ್ನಡ ಕಾದಂಬರಿ ಲೋಕ (ಎಚ್‌.ಶಶಿಕಲಾ), ಅನುವಾದ (ಮೋಹನ ಕುಂಟಾರ್‌), ನಡುಗನ್ನಡ ಸಾಹಿತ್ಯ ಪ್ರಕಾರಗಳು (ಎಂ.ಪ್ರಸನ್ನಕುಮಾರ್‌).

ಪುಸ್ತಕ ಪರಿಚಯ

ಮಾಲಿಕೆಯ ಹೆಸರು: ‘ವಜ್ರದ ಬೇರುಗಳು’

ಪ್ರಧಾನ ಸಂಪಾದನೆ: ಡಾ.ಬಿ.ವಿ.ವಸಂತಕುಮಾರ್‌

ಸಂಪಾದನೆ: ಡಾ.ಬಸವರಾಜ ಕಲ್ಗುಡಿ, ಡಾ.ಎಚ್‌.ಎಸ್‌.ರಾಘವೇಂದ್ರರಾವ್‌.

ಪ್ರಕಾಶಕರು: ಎನ್‌.ಕರಿಯಪ್ಪ, ರಿಜಿಸ್ಟ್ರಾರ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು