ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನಕ್ಕೆ ಮರಳಿದಂತೆ ಪ್ರಶಾಂತವಾಯಿತು ಕಲಬುರ್ಗಿ

Last Updated 9 ಫೆಬ್ರುವರಿ 2020, 1:30 IST
ಅಕ್ಷರ ಗಾತ್ರ

ಕಲಬುರ್ಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣ ಮೂರು ದಿನ ವೈಭೋಗ ಕಂಡ ಕಲಬುರ್ಗಿ ನಗರ, ಶನಿವಾರ ಖಾಲಿಖಾಲಿ ಎನಿಸಿತು. ಲಕ್ಷಲಕ್ಷ ಜನರ ಓಡಾಟ, ನಿರಂತರ ಗಲಿಬಿಲಿ ಮಾತು, ಜೈಕಾರ, ಬಿಡುವಿಲ್ಲದ ಚಟುವಟಿಕೆಗಳಿಂದ ಗದ್ದಲಮಯವಾಗಿದ್ದ ಊರು; ಈಗ ಧ್ಯಾನಕ್ಕೆ ಕುಳಿತಂತೆ ಪ್ರಶಾಂತವಾಗಿದೆ. ಸಂಭ್ರಮ ಉಂಡು ದನಿದ ಮನಸ್ಸುಗಳು ರಿಲ್ಯಾಕ್ಸ್‌ ಮೂಡ್‌ಗೆ ಜಾರಿವೆ.

ಕಳೆದೊಂದು ತಿಂಗಳಿಂದ ಗಡಿಬಿಡಿಯಿಂದ ಕೂಡಿದ್ದ ನಗರದಲ್ಲಿ ಮೂರು ದಿನ ಜನಜಾತ್ರೆಯೇ ಸೇರಿತು. ರಾಜ್ಯದ ಮೂಲೆಮೂಲೆಯಿಂದ, ನೆರೆರಾಜ್ಯಗಳಿಂದ ಕನ್ನಡಾಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬಂದರು. ವಿದೇಶಗಳಿಂದಲೂ ಕೆಲವರು ಬಂದಿದ್ದರು. ರೈಲು ನಿಲ್ದಾಣ, ಬಸ್‌ ನಿಲ್ದಾಣಗಳು ಹಗಲು– ರಾತ್ರಿಯ ಪರಿವೇ ಇಲ್ಲದೇ ಕ್ರಿಯಾಶೀಲವಾಗಿದ್ದವು. ಎಲ್ಲ ದಿಕ್ಕಿನಿಂದ ನಗರಕ್ಕೆ ಬಂದ ವಾಹನಗಳಿಗೆ ಲೆಕ್ಕವೇ ಇಲ್ಲ. ವಿಶ್ರಾಂತಿಯೇ ಇಲ್ಲದೇ ಇರುವೆ ಸಾಲಿನಂತೆ ವಾಹನಗಳು ಗಿಜಿಗುಟ್ಟಿದವು. ಇದೆಲ್ಲವೂ ಈಗ ‘ಸ್ಮರಣೀಯ ಕ್ಷಣ’ವಾಗಿ ಜನಮಾನಸದಲ್ಲಿ ಉಳಿಯಿತು.

ಶನಿವಾರ ಸೂರ್ಯಾಸ್ತದ ನಂತರ ಎದ್ದವರೇ ಹೆಚ್ಚು. ಹಾಯಾದ ನಿದ್ರೆಯ ನಂತರ ತುಸು ವಿಶ್ರಾಂತಿಗೆ ಜಾರಿದರು. ವಾಹನಗಳ ಸದ್ದಿನಿಂದ ಬೋಂಗುಟ್ಟಿದ ರಸ್ತೆಗಳು, ವೃತ್ತಗಳಲ್ಲಿ ಸಂಚಾರ ವಿರಳವಾಗಿತ್ತು. ಸಮ್ಮೇಳನ ಮುಗಿದಿದ್ದೇ ತಡ; ಲಗ್ನ ಮುಗಿದ ಮರುದಿನ ಖಾಲಿಖಾಲಿ ಆಗುವ ಮದುವೆ ಮನೆಯಂತೆ ಇಡೀ ನಗರ ಖಾಲಿ ಎಣಿಸಿತು.

ದೂರದ ಊರುಗಳಿಂದ ಬಂದಿದ್ದ ಬಂಧು– ಮಿತ್ರರಲ್ಲಿ ಹಲವರು ಬೆಳಿಗ್ಗೆಯೇ ತಮ್ಮೂರಿಗೆ ಮರಳಿದರು. ಮತ್ತೆ ಹಲವರು ದಿನವಿಡೀ ವಿಶ್ರಾಂತಿ ಪಡೆದು, ಬಂಧುಗಳೊಂದಿಗೆ ಹರಟಿದರು. ರಾತ್ರಿಯ ರೈಲು– ಬಸ್‌ಗಳಲ್ಲಿ ಬುಕ್‌ ಮಾಡಿಕೊಂಡು ತೆರಳಿದರು.

ನುಡಿ ಗೌರವದ ಭಾರ: ಮೂರು ದಶಕಗಳ ಹುಮ್ಮಸ್ಸು ಏಕಕಾಲಕ್ಕೆ ಪುಟಿದೆದ್ದ ರೀತಿ ಪ್ರಿತಿಕ್ರಿಯಿಸಿ ನಗರದ ಜನ, ಅಭಿಮಾನದ ಮೂಟೆಯನ್ನು ಕನ್ನಡಿಗರ ತಲೆ ಮೇಲೆ ಹೊರಿಸಿ ಕಳುಹಿಸಿದರು. ಇಡೀ ಸಮ್ಮೇಳನ ಜನರ ಗೆಲುವಾಗಿ ಪ್ರತಿಫಲಿಸಿತು.

***

ಕನ್ನಡದ ಭವಿಷ್ಯದ ಬಗ್ಗೆ ನಾವು ಚಿಂತೆ ಮಾಡಬೇಕಿಲ್ಲ ಎಂದು ಕಲಬುರ್ಗಿ ಸಮ್ಮೇಳನ ಘಂಟಾಘೋಷವಾಗಿ ಹೇಳಿದೆ. ಹಿಂದುಳಿದ ನಾಡಿನ ಜನ ಎಂದು ಹೇಳುವವರಿಗೆ ನೀವು ಸರಿಯಾದ ಉತ್ತರ ಕೊಟ್ಟಿದ್ದೀರಿ‌. ಕೃತಜ್ಞನಾಗಿದ್ದೇನೆ -ಡಾ.ಎಚ್.ಎಸ್‌.ವೆಂಕಟೇಶಮೂರ್ತಿ, ಸಮ್ಮೇಳನ ಸರ್ವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT