ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಬೆಂಗಳೂರಿನಲ್ಲಿ ಕನ್ನಡ ಕಲರವ

ಮೆರವಣಿಗೆಗೆ ಮೆರುಗು ನೀಡಿದ ಜಾನಪದ ಕಲಾ ತಂಡಗಳು
Last Updated 11 ಮಾರ್ಚ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳ ಬಳಿಕ ನಡೆದ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ರಾಜಧಾನಿಯಲ್ಲಿ ಕನ್ನಡಿಗರ ಸ್ಥಿತಿಗತಿ, ಭಾಷೆಯ ಬಗೆಗಿನ ಚರ್ಚೆಗೆ ವೇದಿಕೆ ಕಲ್ಪಿಸಿತು. ಎರಡು ಕಿ.ಮೀ. ನಡೆದ ಮೆರವಣಿಗೆ ಕನ್ನಡದ ಕಂಪನ್ನು ಪಸರಿಸಿತು.

15ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2021ರ ಮಾರ್ಚ್‌ ತಿಂಗಳು ಹೆಬ್ಬಾಳದಲ್ಲಿ ನಡೆಸಲಾಗಿತ್ತು. ಕೋವಿಡ್ ಕಾರಣ ಎರಡು ವರ್ಷಗಳಿಂದ ಸಮ್ಮೇಳನ ನಡೆದಿರಲಿಲ್ಲ. ‘ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಉಳಿದರೆ, ಇಡೀ ರಾಜ್ಯದಲ್ಲಿ ಕನ್ನಡ ಉಳಿದೀತು’ ಎಂಬ ಆಶಯದೊಂದಿಗೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ 16ನೇ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಚಾಲನೆ ದೊರೆಯಿತು.

ವಿಧಾನಸೌಧದ ಮುಂಭಾಗದಲ್ಲಿರುವ ಶಾಂತವೇರಿ ಗೋಪಾಲಗೌಡ ವೃತ್ತದಿಂದ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದವರೆಗೆ ಸಾರೋಟ್‌ನಲ್ಲಿ ಕನ್ನಡ ಮಾತೆಯ ಪ್ರತಿಮೆ ಇರಿಸಿ, ಕನ್ನಡ ಜಾಗೃತಿ ಮೆರವಣಿಗೆ ನಡೆಸಲಾಯಿತು. ಕನ್ನಡ ಜಾಗೃತಿ ಜ್ಯೋತಿಯನ್ನು ಸಾಹಿತಿ ದೊಡ್ಡರಂಗೇಗೌಡ ಬೆಳಗಿಸಿದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಕನ್ನಡ ಪರ ಘೋಷಣೆಗಳು ಮೊಳಗಿದವು. ವಿವಿಧ ಜಾನಪದ ಕಲಾತಂಡಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾಹಿತಿಗಳು, ಕನ್ನಡ ಪ್ರೇಮಿಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.

ಸಮ್ಮೇಳನದ ವೇದಿಕೆಗೆ ಬೆಂಗಳೂರು ನಗರ ಜಿಲ್ಲೆಯ ಮೊದಲ ಸಾಹಿತಿ ‘ಆನೇಕಲ್ ನಾಡಪ್ರಭು ಮುಮ್ಮಡಿ ತಮ್ಮೇಗೌಡರ ವೇದಿಕೆ’ ಎಂದೂ, ‌ಮುಖ್ಯದ್ವಾರಗಳಿಗೆ ‘ಶ್ರೀ ಸರ್ಪಭೂಷಣ ಶಿವಯೋಗಿಗಳ ಹೆಬ್ಬಾಗಿಲು’ ಮತ್ತು ‘ಶಾಸನಶಾಸ್ತ್ರ ಪಿತಾಮಹಾ ಬೆಂಜಮೀನ್ ಲೂಯಿ ರೈಸ್ ಹೆಬ್ಬಾಗಿಲು’ ಎಂದೂ ಇಟ್ಟಿರುವ ಹೆಸರು ಗಮನ ಸೆಳೆಯಿತು.

ಪ್ರೇಕ್ಷಕರ ಕೊರತೆ: 1,500 ಆಸನಗಳ ಅಂಬೇಡ್ಕರ್‌ ಭವನದಲ್ಲಿ ನಡೆದ ಸಮ್ಮೇಳನವು ಪ್ರೇಕ್ಷಕರ ಬರ ಅನುಭವಿಸಿತು. ಉದ್ಘಾಟನಾ ಸಮಾರಂಭ ಮುಕ್ತಾಯವಾಗುವ ವೇಳೆಗಾಗಲೇ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. ಇದು ಅತಿಥಿಗಳ ಅಸಮಾಧಾನಕ್ಕೂ ಕಾರಣವಾಯಿತು. ಗೋಷ್ಠಿಗಳಲ್ಲಿ ಬೆರಳಣಿಕೆಯಷ್ಟು ಪ್ರೇಕ್ಷಕರಿದ್ದರು.

‘ಮುಂಬೈ, ಗೋವಾದಲ್ಲಿ ನಡೆಸುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ನಮ್ಮಲ್ಲಿಯೂ ಭಾಷಾಭಿಮಾನ ಮೂಡಬೇಕು’ ಎಂದು ಕವಿ ಮಾರ್ಕಂಡಪುರಂ ಶ್ರೀನಿವಾಸ್ ಹೇಳಿದರು.

ಶಾಸಕ ರಿಜ್ವಾನ್ ಅರ್ಷದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಅವರು ಸಹ ನಿರೀಕ್ಷಿತ ಪ್ರಮಾಣದಲ್ಲಿ ಕನ್ನಡಿಗರು ಬರದಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಕವಿಗೋಷ್ಠಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಅದಮ್ಯ ರಂಗಸಂಸ್ಕೃತಿ ಟ್ರಸ್ಟ್ ಪ್ರಸ್ತುತಪಡಿಸಿದ ‘ಮೇಘದೂತ’ ನಾಟಕ ಸಂಜೆ ಪ್ರದರ್ಶನ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT