ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್‌ ರಾಜ್ ಪರಾರಿ ಪ್ರಕರಣ: ಸಿಸಿಬಿಯಿಂದ ವೈದ್ಯರ ವಿಚಾರಣೆ

'ಚಿಕಿತ್ಸೆಯಲ್ಲಿ ತಲ್ಲೀನ; ನಿರ್ಲಕ್ಷ್ಯ ವಹಿಸಿಲ್ಲ'
Last Updated 3 ನವೆಂಬರ್ 2020, 15:12 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಮುಖಂಡ ಆರ್. ಸಂಪತ್‌ ರಾಜ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಬಗ್ಗೆ ಖಾಸಗಿ ಆಸ್ಪತ್ರೆ ವೈದ್ಯರು ಸಿಸಿಬಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಎರಡನೇ ಬಾರಿ ವೈದ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಕೊರೊನಾ ಸೋಂಕು ತಗುಲಿರುವುದಾಗಿ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್‌ರಾಜ್, ಏಕಾಏಕಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಹೋಗಿದ್ದಾರೆ. ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಅವರಿಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಂಪತ್‌ರಾಜ್ ಬಿಡುಗಡೆ ಬಗ್ಗೆ ವೈದ್ಯರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನೋಟಿಸ್ ನೀಡಿ ವೈದ್ಯರನ್ನು ಸೋಮವಾರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಹೇಳಿಕೆ ಪಡೆದುಕೊಂಡಿದ್ದಾರೆ. ಹೇಳಿಕೆಯಲ್ಲಿ ಕೆಲ ಗೊಂದಲಗಳು ಇದ್ದು, ಅವುಗಳ ಪರಿಶೀಲನೆ ನಡೆಯುತ್ತಿರುವುದಾಗಿ ಸಿಸಿಬಿ ಮೂಲಗಳು ಹೇಳಿವೆ.

‘ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ರೋಗಿಗಳ ಆರೈಕೆಯಲ್ಲಿ ತಲ್ಲೀನರಾಗಿದ್ದೇವೆ. ಗುಣಮುಖವಾದ ರೋಗಿಗಳ ಆರೋಗ್ಯ ತಪಾಸಣೆ ಹಾಗೂ ದಾಖಲೆ ಪರಿಶೀಲಿಸಿ ಬಿಡುಗಡೆ ಪತ್ರಕ್ಕೆ ಸಹಿ ಮಾಡುತ್ತಿದ್ದೇವೆ. ಅದೇ ರೀತಿಯಲ್ಲೇ ಸಂಪತ್‌ ರಾಜ್‌ ಅವರ ಬಿಡುಗಡೆ ಪತ್ರಕ್ಕೂ ಸಹಿ ಮಾಡಿದ್ದೇವೆ. ಆ ಬಳಿಕ ಬಿಡುಗಡೆ ಪ್ರಕ್ರಿಯೆಯನ್ನು ಸಿಬ್ಬಂದಿ ಪೂರ್ಣಗೊಳಿಸಿದ್ದಾರೆ. ಬಿಡುಗಡೆಯಲ್ಲಿ ನಾವು ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ’ ಎಂದು ವೈದ್ಯರು ಹೇಳಿಕೆಯಲ್ಲಿ ಉಲ್ಲೇಖಿಸಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

ಮಾಹಿತಿ ನೀಡದ ಸಂಬಂಧಿಕರು: ಸಂಪತ್‌ರಾಜ್ ಹಾಗೂ ಅವರ ಸಂಬಂಧಿಕರ ಮನೆಗೂ ತೆರಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಂಪತ್‌ ರಾಜ್ ಎಲ್ಲಿದ್ದಾರೆ ಎಂಬ ಬಗ್ಗೆ ಸಂಬಂಧಿಕರು ಯಾವುದೇ ಮಾಹಿತಿ ನೀಡುತ್ತಿಲ್ಲ. ಕೆಲ ತಿಂಗಳಿನಿಂದ ಅವರ ಜೊತೆ ಸಂಪರ್ಕವೇ ಇರಲಿಲ್ಲವೆಂದು ಸಂಬಂಧಿಕರು ಪ್ರತಿಕ್ರಿಯಿಸುತ್ತಿರುವುದಾಗಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT