ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ ಪುತ್ಥಳಿಗೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಿದರೆ ಪ್ರತಿಭಟನೆ’

Last Updated 8 ಏಪ್ರಿಲ್ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಬೇಡ್ಕರ್‌ ಜಯಂತಿಯಂದು ವಿಧಾನಸೌಧದ ಆವರಣದಲ್ಲಿರುವ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡುವುದಿಲ್ಲ. ಒಂದೊಮ್ಮೆ ಮಾಲಾರ್ಪಣೆ ಮಾಡಿದರೆ ಕ‍ಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುತ್ತೇವೆ’ ಎಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ– ಕರ್ನಾಟಕ ಎಚ್ಚರಿಸಿದೆ.

‘ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಫೆಬ್ರುವರಿ 19ರಂದು ಬೃಹತ್‌ ಪ್ರತಿಭಟನೆ ನಡೆಸಲಾಗಿತ್ತು. ಆಗ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಮುಖ್ಯಮಂತ್ರಿಯವರು ತಪ್ಪಿತಸ್ಥರ ವಿರುದ್ಧ ಮೂರೇ ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸಭೆ ನಡೆಸುವುದಾಗಿಯೂ ಹೇಳಿದ್ದರು. ಕೊಟ್ಟ ಮಾತು ಮರೆತಿರುವ ಅವರು ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ’ ಎಂದು ಒಕ್ಕೂಟದ ಸದಸ್ಯರು ದೂರಿದರು.

‘ಮುಖ್ಯಮಂತ್ರಿಯವರು ಆರ್‌ಎಸ್‌ಎಸ್‌ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ. ಅವರಿಗೆ ಕಾನೂನಿನ ಮೇಲೆ ಗೌರವವೇ ಇಲ್ಲ. ಸಮುದಾಯದ ಹೆಸರು ಹೇಳಿಕೊಂಡು ಆಯ್ಕೆಯಾಗಿರುವ ಶಾಸಕರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ‘ಶ್ರದ್ಧಾಂಜಲಿ’ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ’ ಎಂದೂ ತಿಳಿಸಿದರು.

‘ವಿಧಾನಸಭೆ ಅಧಿವೇಶನ ಮುಗಿದ ನಂತರ ದಲಿತ ಮುಖಂಡರ ಜೊತೆ ಮುಖ್ಯಮಂತ್ರಿಯವರು ಸಭೆ ನಡೆಸಬಹುದೆಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ‌ಹೀಗಾಗಿ ಅಂಬೇಡ್ಕರ್‌ ಜಯಂತಿಯಂದು ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಸಚಿವರು ಹಾಗೂ ಶಾಸಕರಿಗೂ ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧರಿಸಿದ್ದೇವೆ’ ಎಂದರು.

‘ದಲಿತ ಸಂಘಟನೆಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಜನಪ್ರತಿನಿಧಿಗಳು ತಾತ್ಸಾರ ಮನೋಭಾವ ಹೊಂದಿದ್ದಾರೆ. ಅವರಿಗೆ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ’ ಎಂದು ಎಚ್ಚರಿಸಿದರು.

‘ತಮ್ಮ ಕುಟುಂಬ ಸದಸ್ಯರಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸಿರುವಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಶಾಸಕತ್ವ ರದ್ದುಪಡಿಸಬೇಕು. ಪಿಟಿಸಿಎಲ್‌ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಹಾಗೂ ವರ್ಗದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣದ ದುರುಪಯೋಗಕ್ಕೆ ಕಾರಣವಾಗಿರುವ ಸೆಕ್ಷನ್‌ 7 ಡಿ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ,ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ದಲಿತ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT