ಶನಿವಾರ, ಮಾರ್ಚ್ 25, 2023
28 °C

ನಟಿ ಸಂಯುಕ್ತ ಹೆಗ್ಡೆ ಜತೆ ಅನುಚಿತ ವರ್ತನೆ; ಆರೋಪ–ಪ್ರತ್ಯಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಮ್ಮನಹಳ್ಳಿ: ಸರ್ಜಾಪುರ ರಸ್ತೆ ಅಗರ ಕೆರೆಯ ಉದ್ಯಾನದಲ್ಲಿ ನಟಿ ಸಂಯುಕ್ತಾ ಹೆಗ್ಡೆ ಮತ್ತು ಅವರ ಗೆಳತಿಯರು ಅಸಭ್ಯ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ನಟಿಯ ಮೇಲೆ ಸ್ಥಳೀಯರು ಹಲ್ಲೆಗೆ ಮುಂದಾದ ಘಟನೆ ಶುಕ್ರವಾರ ನಡೆದಿದೆ.

ಶುಕ್ರವಾರ ಸಂಜೆ ಉದ್ಯಾನಕ್ಕೆ ಬಂದ ನಟಿ ಸಂಯುಕ್ತಾ, ಗೆಳತಿಯರೊಂದಿಗೆ ಸಂಗೀತ ಹಾಕಿ ‘ಹೂಲಾ ಹೂಪ್’ ಆಟ ಆಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸ್ಥಳೀಯರು ಆಕ್ಷೇಪಿಸಿದ್ದಾರೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ‘ಉದ್ಯಾನದಲ್ಲಿ ನಡಿಗೆ ಮತ್ತು ಯೋಗಕ್ಕೆ ಮಾತ್ರ ಅವಕಾಶವಿದ್ದು, ಸಂಗೀತ ನಿಲ್ಲಿಸಿ’ ಎಂದಿದ್ದಾರೆ. ಇದಕ್ಕೆ ಒಪ್ಪದ ಸಂಯುಕ್ತಾ ಭದ್ರತಾ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದಾರೆ.

ಇದರಿಂದ ನೊಂದ ಭದ್ರತಾ ಸಿಬ್ಬಂದಿ ಸ್ಥಳೀಯರಾದ ಕವಿತಾ ರೆಡ್ಡಿ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕವಿತಾ ರೆಡ್ಡಿ ‘ಉದ್ಯಾನದಲ್ಲಿ ನಿಯಮ ಮೀರಿದ ನಡವಳಿಕೆ ಸರಿಯಲ್ಲ, ಪಾರ್ಕ್ ಗೆ ಬರುವವವರು ಪ್ರಶಾಂತ ವಾತಾವರಣ ಬಯಸಿ ಬರುತ್ತಾರೆ, ಹೀಗಾಗಿ ಸಂಗೀತ ಹಾಕಿ ನೃತ್ಯ ಮಾಡುವುದು ತಪ್ಪು’ ಎಂದು ತಿಳಿ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ದನಿಗೂಡಿಸಿದ ನಡಿಗೆದಾರರು ನಟಿಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಉದ್ಯಾನದಿಂದ ಹೊರಹೋಗುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಮಾತಿನ ಚಕಮಕಿ ನಡೆಯುತ್ತಿರುವಾಗ ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಕರೆದೊಯ್ದು ದೂರು ಸ್ವೀಕರಿಸಿದ್ದಾರೆ.

‘ಒಬ್ಬ ನಟಿಯ ತೇಜೋವಧೆಗೆ ಮುಂದಾಗಿರುವುದು ಸರಿಯಲ್ಲ, ಕಾಂಗ್ರೆಸ್ಸಿಗರು ಪ್ರಕರಣವನ್ನು  ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಕೆರೆಯನ್ನು ತಮ್ಮ ಸ್ವಂತ ಆಸ್ತಿ ಎಂದು ಭಾವಿಸಿದಂತಿದೆ, ಕೆರೆ ಮತ್ತು ಉದ್ಯಾನವನ್ನು ಬಿಡಿಎ ಮತ್ತು ಕೆರೆ ಅಭಿವೃದ್ಧಿ ಮಂಡಳಿ ನೋಡಿಕೊಳ್ಳುತ್ತದೆ. ಇದರಲ್ಲಿ ಬೇರೆಯವರು ಮೂಗು ತೂರಿಸುವುದು ಬೇಡ’ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು.

‘ಪ್ರಕರಣವನ್ನು ಬಳಸಿಕೊಂಡು ನಟಿ ಸಂಯುಕ್ತಾ ಮೇಲೆ ಕೆಲವರು ಡ್ರಗ್ಸ್ ಸೇವನೆ ಆರೋಪ ಹೊರಿಸುತ್ತಿರುವುದು ಅತ್ಯಂತ ಖಂಡನಾರ್ಹ’ ಎಂದು ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ ವಿಜಯಲಕ್ಷ್ಮಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು