ಶುಕ್ರವಾರ, ಅಕ್ಟೋಬರ್ 7, 2022
25 °C

ಶ್ರೀಗಂಧದ ಮರ ಕದ್ದು ಎಣ್ಣೆ ತಯಾರಿ: ಎಂಟು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶ್ರೀಗಂಧದ ಮರ ಕದ್ದುಕೊಂಡು ಹೋಗಿ ಎಣ್ಣೆ ತಯಾರಿಸಿ ಮಾರುತ್ತಿದ್ದ ಜಾಲವನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಭೇದಿಸಿದ್ದು, ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಗೋವಿಂದಸ್ವಾಮಿ (30), ಮಾಧು ಅಲಿಯಾಸ್ ಮಾದ (36), ವೆಂಕಟೇಶ್ (22), ಬೆಂಗಳೂರಿನ ರಾಮಚಂದ್ರ (29), ವರದರಾಜ್ (66), ಆಂಧ್ರಪ್ರದೇಶದ ನಂಜೇಗೌಡ (72), ಹೊಸಕೋಟೆ ಜಡಗೇನಹಳ್ಳಿಯ ವಾಸಿಂ ಬೇಗ್ (35) ಹಾಗೂ ಚಿಕ್ಕಬಳ್ಳಾಪುರದ ರಾಮಚಂದ್ರಪ್ಪ (54) ಬಂಧಿತರು.

‘ಕುಮಾರಕೃಪಾ ರಸ್ತೆಗೆ ಹೊಂದಿಕೊಂಡಿರುವ ಬೆಂಗಳೂರು ಗಾಲ್ಫ್‌ ಕ್ಲಬ್ ಆವರಣದಲ್ಲಿದ್ದ ಶ್ರೀಗಂಧದ ಮರ ಕಡಿದು ಇತ್ತೀಚೆಗೆ ಕಳ್ಳತನ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು. ಇವರಿಂದ ₹ 3 ಕೋಟಿ ಮೌಲ್ಯದ 147 ಕೆ.ಜಿ. ಶ್ರೀಗಂಧದ ಎಣ್ಣೆ ಹಾಗೂ 730 ಕೆ.ಜಿ. ಶ್ರೀಗಂಧದ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳಾದ ಗೋವಿಂದ ಸ್ವಾಮಿ, ಮಾಧು, ವೆಂಕಟೇಶ್ ಹಾಗೂ ರಾಮಚಂದ್ರ ಅವರು ಶ್ರೀಗಂಧದ ಮರಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಇಂಥ ಮರದ ತುಂಡುಗಳನ್ನು ವಾಸಿಂ ಬೇಗ್, ರಾಮಚಂದ್ರಪ್ಪ ಹಾಗೂ ವರದರಾಜ್ ಖರೀದಿಸುತ್ತಿದ್ದರು. ಇನ್ನೊಬ್ಬ ಆರೋಪಿ ನಂಜೇಗೌಡ, ಶ್ರೀಗಂಧ ಎಣ್ಣೆ ತಯಾರಿ ಕಾರ್ಖಾನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ’ ಎಂದೂ ತಿಳಿಸಿದರು.

10 ಕಡೆ ಶ್ರೀಗಂಧದ ಕಳ್ಳತನ: ‘ತಮಿಳುನಾಡಿನ ಆರೋಪಿಗಳು ಆಗಾಗ ಬೆಂಗಳೂರಿಗೆ ಬಂದು, ಶ್ರೀಗಂಧದ ಮರಗಳನ್ನು ಗುರುತಿಸುತ್ತಿದ್ದರು. ರಾತ್ರಿ ಸಂದರ್ಭದಲ್ಲಿ ಮಚ್ಚು, ಗರಗಸ ಬಳಸಿ ಮರವನ್ನು ಕತ್ತರಿಸಿಕೊಂಡು ಪರಾರಿಯಾಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸದಾಶಿವನಗರ, ಜಯನಗರ, ಮಡಿವಾಳ, ಕೆ.ಆರ್.ಪುರ, ಯಶವಂತಪುರ, ಕೆಂಗೇರಿ ಸೇರಿ ನಗರದ 10 ಕಡೆಗಳಲ್ಲಿ ಆರೋಪಿಗಳು ಶ್ರೀಗಂಧದ ಮರ ಕದ್ದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿವೆ.

ಶ್ರೀಗಂಧದ ಎಣ್ಣೆ ಮಾರಾಟ: ‘ಕದ್ದ ಶ್ರೀಗಂಧವನ್ನು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಎಣ್ಣೆ ತಯಾರಿಸಲಾಗುತ್ತಿತ್ತು. ಅದೇ ಎಣ್ಣೆಯನ್ನು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಮಾರಲಾಗುತ್ತಿತ್ತು. ಇದರಿಂದಾಗಿ ಜಾಲದ ಆರೋಪಿಗಳು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು