ಶನಿವಾರ, ಸೆಪ್ಟೆಂಬರ್ 18, 2021
26 °C
ಸಂಜಯನಗರ ಪೊಲೀಸರಿಂದ ಮೂವರ ಬಂಧನ, ₹ 6.20 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಚಿನ್ನದ ಸರ ಕದಿಯಲು ತಂಡ ಕಟ್ಟಿದ್ದ ವ್ಯಾಪಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತನ್ನದೇ ತಂಡ ಕಟ್ಟಿಕೊಂಡು ಚಿನ್ನದ ಸರ ಕಳವು ಮಾಡುತ್ತಿದ್ದ ತರಕಾರಿ ವ್ಯಾಪಾರಿಯೂ ಸೇರಿ ಮೂವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

'ಮುಂಬೈನ ಮ್ಯಾಕ್ಸನ್‌ ಪಸನ್, ಜಮಾಲ್ ಹಾಗೂ ಉತ್ತರ ಪ್ರದೇಶದ ಮೊಹಮ್ಮದ್ ತಾರಿಕ್ ಬಂಧಿತರು. ಅವರಿಂದ ₹ 6.20 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳಾದ ಮ್ಯಾಕ್ಸನ್ ಹಾಗೂ ಜಮಾಲ್ ಅಪರಾಧ ನಂಟು ಉಳ್ಳವರು. ಮುಂಬೈನಲ್ಲಿ ಇವರ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕೆಲ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಬಳಿಕವೂ ಕೃತ್ಯವನ್ನು ಮುಂದುವರಿಸಿದ್ದರು. ಅವರಿಬ್ಬರಿಗಾಗಿ ಮುಂಬೈ ಪೊಲೀಸರು ಹುಡುಕುತ್ತಿದ್ದರು.’

‘ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂಬೈ ತೊರೆದಿದ್ದ ಮ್ಯಾಕ್ಸನ್, ಬೆಂಗಳೂರಿಗೆ ಬಂದು ಬಿಟಿಎಂ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ರಸ್ತೆ ಬದಿಯಲ್ಲಿ ಇಡ್ಲಿ ಮಾರಲಾರಂಭಿಸಿದ್ದ. ಕೆಲ ದಿನ ಬಿಟ್ಟು, ವಿಮಾನ ನಿಲ್ದಾಣದ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಲಾಕ್‌ಡೌನ್‌ನಿಂದಾಗಿ ಕೆಲಸ ಹೋಗಿತ್ತು. ಹೀಗಾಗಿ, ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಆರಂಭಿಸಿದ್ದ. ಅದರಿಂದ ಹೆಚ್ಚು ಲಾಭ ಬಂದಿರಲಿಲ್ಲ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಸರ ಕಳವು ಮುಂದುವರಿಸಲು ತೀರ್ಮಾನಿಸಿದ್ದ ಆರೋಪಿ ಮ್ಯಾಕ್ಸನ್, ಸಹಚರರಾದ ಜಮಾಲ್ ಹಾಗೂ ತಾರಿಕ್‌ನನ್ನು ನಗರಕ್ಕೆ ಕರೆಸಿದ್ದ. ಅವರಿಗೆ ವಸತಿಗೃಹಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ನಂತರ, ಸರದಿ ಪ್ರಕಾರವಾಗಿ ಸಹಚರರ ಜೊತೆ ಸೇರಿ ಕೃತ್ಯ ಎಸಗಿದ್ದ.’

ಕದ್ದ ಬೈಕ್‌ನಿಂದ ಸಿಕ್ಕಿಬಿದ್ದರು: ‘ಬಂಡೆ ಕಾಲೊನಿ ನಿವಾಸಿಯಾದ 43 ವರ್ಷದ ಮಹಿಳೆ, ಆಗಸ್ಟ್ 17ರಂದು ಕೆಲಸಕ್ಕೆಂದು ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಹೆಲ್ಮೆಟ್‌ ಧರಿಸಿಕೊಂಡು ಕೆಟಿಎಂ ಡ್ಯೂಕ್ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳು, ಆರ್‌.ಟಿ.ನಗರದಲ್ಲಿ ಕದ್ದಿದ್ದ ಬೈಕ್‌ನ್ನೇ ಕೃತ್ಯಕ್ಕೆ ಬಳಸಿದ್ದರು. ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಬೈಕ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಿಟಿಎಂ ಬಡಾವಣೆಯಲ್ಲಿ ಹುಡುಕಾಟ ನಡೆಸಿದಾಗ ಬೈಕ್ ಪತ್ತೆಯಾಯಿತು. ಅದರಿಂದಲೇ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಸಂಜಯನಗರ, ಅಮೃತಹಳ್ಳಿ, ಮೈಕೊ ಲೇಔಟ್, ಆರ್‌.ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಬಂಧನದ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದೂ ಮೂಲಗಳು ವಿವರಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು