ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ರಕ್ಷಣೆ ನೀಡುವ ‘ಸಂಕಲ್ಪ’: ಥಲಸ್ಸೇಮಿಯಾ ರೋಗಿಗಳಿಗೆ ನೆರವು

ಸುರಕ್ಷಿತ ರಕ್ತ ಒದಗಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ
Last Updated 12 ಜನವರಿ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಕಾಳಜಿಯ ಆಶಯದೊಂದಿಗೆ ಸಮಾನ ಮನಸ್ಕರು ಸೇರಿ ಆರಂಭಿಸಿದ ಸಂಸ್ಥೆ, ಈಗ ಅತ್ಯಮೂಲ್ಯ ಜೀವ ಉಳಿಸುವ ಕೈಂಕರ್ಯದಲ್ಲಿ ತೊಡಗಿದೆ.

‘ರಚನಾತ್ಮಕ ಕಾರ್ಯಗಳ ಮೂಲಕ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು’ ಎನ್ನುವ ಉದ್ದೇಶದೊಂದಿಗೆ 2003ರಲ್ಲಿ ಸ್ನೇಹಿತರೇ ಒಗ್ಗೂಡಿ ಬೆಂಗಳೂರಿನಲ್ಲಿ ಆರಂಭಿಸಿದ ‘ಸಂಕಲ್ಪ ಇಂಡಿಯಾ ಫೌಂಡೇಷನ್‌’, ರಕ್ತಕ್ಕೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

ಬಹುತೇಕ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸೇರಿಕೊಂಡು ಸ್ಥಾಪಿಸಿರುವ ಸಂಸ್ಥೆ ಇದಾಗಿದ್ದು, ರಕ್ತದಾನಿಗಳಿಗೂ ಮತ್ತು ರೋಗಿಗಳ ನಡುವಣ ಸಂಪರ್ಕದ ಕೊಂಡಿಯಾಗುವ ಜತೆಗೆ ಥಲಸ್ಸೇಮಿಯಾದಂತಹ ರೋಗಿಗಳು ಚಿಕಿತ್ಸೆ ಪಡೆಯಲು ನೆರವಾಗುತ್ತಿದೆ. ರಕ್ತ ನಿಧಿಗಳ ಜತೆ ಸಮನ್ವಯ ಸಾಧಿಸಿ ’ಸುರಕ್ಷಿತ ರಕ್ತ‘ವನ್ನು ಅಗತ್ಯ ಇರುವ ರೋಗಿಗಳಿಗೆ ಒದಗಿಸುವ ಕಾರ್ಯದಲ್ಲಿ ತೊಡಗಿದೆ.

ದೇಶದಾದ್ಯಂತ ತನ್ನ ಜಾಲವನ್ನು ವಿಸ್ತರಿಸಿಕೊಂಡಿರುವ ಈ ಸಂಸ್ಥೆಯು ಕರ್ನಾಟಕದಲ್ಲಿ 1600ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿ 1.5 ಲಕ್ಷ ಯೂನಿಟ್‌ ರಕ್ತವನ್ನು ಸಂಗ್ರಹಿಸಿದೆ. ರಕ್ತದಾನಿಗಳ ಸಮಗ್ರ ಮಾಹಿತಿಯನ್ನು ಸಹ ಸಂಗ್ರಹಿಸಿಟ್ಟುಕೊಂಡಿದೆ.

ಈ ಸಂಸ್ಥೆ ಅಡಿಯಲ್ಲಿ ’ರಕ್ತಕ್ರಾಂತಿ‘ ಎನ್ನುವ ಯೋಜನೆ ಆರಂಭಿಸಲಾಗಿದೆ. ಇದರ ಅನ್ವಯ ರಕ್ತ ದಾನಿಗಳ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

2011ರಲ್ಲಿ ಥಲಸ್ಸೇಮಿಯಾ ಪೀಡಿತರಿಗೆ ಚಿಕಿತ್ಸೆ ಪಡೆಯುವವರಿಗೆ ನೆರವಾಗಲು ಸಂಸ್ಥೆಯು, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ’ಡೇ ಕೇರ್‌ ಸೆಂಟರ್‌‘ ಆರಂಭಿಸಿತು.

ಇಲ್ಲಿಗೆ ಬರುವ ರೋಗಿಗಳಿಗೆ ತಪಾಸಣೆ, ಚಿಕಿತ್ಸೆ, ಔಷಧಿ ಇಲ್ಲಿ ಒದಗಿಸಲಾಗುತ್ತದೆ. ಈ ರೀತಿಯ ಕೇಂದ್ರಗಳನ್ನು ದೇಶದ 17 ಸ್ಥಳಗಳಲ್ಲಿ ಆರಂಭಿಸಲಾಗಿದೆ.

ಥಲಸ್ಸೇಮಿಯಾ ರೋಗಿಗಳಿಗೆ ಮೂಳೆ ಮಜ್ಜೆ ಕಸಿ (ಬೋನ್‌ ಮ್ಯಾರೊ ಟ್ರಾನ್ಸ್‌ಪ್ಲಾಂಟ್‌) ಚಿಕಿತ್ಸೆಯನ್ನು ನಗರದ ವಸಂತನಗರದ ಭಗವಾನ ಮಹಾವೀರ ಜೈನ್‌ ಆಸ್ಪತ್ರೆಯಲ್ಲಿ ಈ ಸಂಸ್ಥೆಯ ನೆರವಿನೊಂದಿಗೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಈ ಸಂಸ್ಥೆಯ ಆಶ್ರಯದಲ್ಲಿ 250ಕ್ಕೂ ಹೆಚ್ಚು ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್‌ ಮಾಡಲಾಗಿದೆ.

’ನಮ್ಮದು ಲಾಭರಹಿತ ಸಂಸ್ಥೆ. ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಥಲಸ್ಸೇಮಿಯಾಗೆ ಮೂಳೆ ಮಜ್ಜೆ ಕಸಿ ಚಿಕಿತ್ಸೆ ಪಡೆಯುವುದು ದುಬಾರಿ. ಹಣ ಇಲ್ಲದ ಕಾರಣ ಮಕ್ಕಳು ಚಿಕಿತ್ಸೆಯಿಂದ ವಂಚಿತರಾಗಬಾರದು ಎನ್ನುವುದು ನಮ್ಮ ಉದ್ದೇಶ‘ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್‌ ಹೇಳುತ್ತಾರೆ.

’ಖಾಸಗಿ ಆಸ್ಪತ್ರೆಗಳಲ್ಲಿ ಥಲಸ್ಸೇಮಿಯಾಗೆ ಚಿಕಿತ್ಸೆ ಪಡೆಯಲು ಸುಮಾರು ₹20 ಲಕ್ಷ ವೆಚ್ಚವಾಗುತ್ತದೆ. ನಾವು ಸುಮಾರು 9 ಲಕ್ಷ ವೆಚ್ಚದಲ್ಲಿ ಈ ಚಿಕಿತ್ಸೆ ಮಾಡಿಸುತ್ತಿದ್ದೇವೆ. ಇದರಲ್ಲಿ ಪೋಷಕರು ಸಾಧ್ಯವಿರುವಷ್ಟು ವೆಚ್ಚ ಭರಿಸುತ್ತಾರೆ. ಇದು ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮೇಲೆ ಅವಲಂಬಿಸುತ್ತದೆ. ಉಳಿದ ಮೊತ್ತವನ್ನು ನಾವು ವಿವಿಧ ಸಂಘ–ಸಂಸ್ಥೆಗಳು, ಕಂಪನಿಗಳಿಂದ ಹಣ ಸಂಗ್ರಹಿಸಿ ಕೊಡುತ್ತೇವೆ‘ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT