ಮಂಗಳವಾರ, ಜನವರಿ 18, 2022
23 °C

ಸರಸ್ವತಿನಗರ ಪೊಲೀಸ್ ಠಾಣೆ ಉದ್ಘಾಟನೆ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರದಲ್ಲಿ ಸರಸ್ವತಿನಗರ ಪೊಲೀಸ್ ಠಾಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಉದ್ಘಾಟಿಸಿದರು. ವಿಶೇಷ ಪೂಜೆಯನ್ನೂ ನೆರವೇರಿಸಿದರು.

ನಗರದ 111ನೇ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ ಇದಾಗಿದ್ದು, ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿದೆ. ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಕೆಲಸ ಆರಂಭಿಸಿದ್ದಾರೆ.

ಬಸವರಾಜ ಬೊಮ್ಮಾಯಿ, ‘ಸರಸ್ವತಿನಗರ ಠಾಣೆ ಆರಂಭಕ್ಕೆ ಗೃಹ ಸಚಿವನಾಗಿದ್ದಾಗ ಅನುಮತಿ ನೀಡಿದ್ದೆ. ಇದೀಗ ಅದೇ ಠಾಣೆಯನ್ನು ನಾನು ಉದ್ಘಾಟಿಸುತ್ತಿದ್ದೇನೆ’ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ, 'ಸರಸ್ವತಿನಗರ ಠಾಣೆಯಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ₹ 200 ಕೋಟಿ ವೆಚ್ಚದಲ್ಲಿ 100 ಪೋಲಿಸ್ ಠಾಣೆ ಕಟ್ಟಡಗಳನ್ನು ನಿರ್ಮಿಸುವ ಗುರಿ ಇದೆ’ ಎಂದರು.

ಸಚಿವ ಆರ್‌. ಅಶೋಕ, ಸಂಸದ ತೇಜಸ್ವಿ ಸೂರ್ಯ, ಶಾಸಕ ವಿ. ಸೋಮಣ್ಣ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಕಮಿಷನರ್ ಕಮಲ್ ಪಂತ್ ಹಾಗೂ ಇತರರು ಇದ್ದರು.

‘ರಾತ್ರೋರಾತ್ರಿ ಡಾಂಬರೀಕರಣ’

‘ಸರಸ್ವತಿನಗರ ಠಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿ, ಗುಂಡಿಗಳು ಬಿದ್ದಿದ್ದವು. ವಾಹನ ಸವಾರರು ನಿತ್ಯವೂ ಭಯದಲ್ಲಿ ಸಂಚರಿಸುತ್ತಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರುವ ಸೂಚನೆ ಸಿಗುತ್ತಿದ್ದಂತೆ ಗುರುವಾರ ರಾತ್ರಿಯೇ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಲಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

‘ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಬಂದಿದ್ದರಿಂದ ಸುಸಜ್ಜಿತ ರಸ್ತೆ ಆಗಿದೆ. ಇದು ಮುಖ್ಯಮಂತ್ರಿಯವರನ್ನೇ ದಿಕ್ಕು ತಪ್ಪಿಸುವ ಯತ್ನ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು