ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರಹಳ್ಳಿ ಅರಣ್ಯದಲ್ಲಿ ‘ಟ್ರೀ ಪಾರ್ಕ್‌’: ಪ್ರತಿಭಟನೆ

ಮರಗಳ ಉದ್ಯಾನ ವಿರೋಧಿಸಿ ಪಿಸಿಸಿಎಫ್‌ಗೆ ಮನವಿ
Last Updated 4 ಫೆಬ್ರುವರಿ 2021, 18:01 IST
ಅಕ್ಷರ ಗಾತ್ರ

ಬೆಂಗಳೂರು: ತುರಹಳ್ಳಿ ಮೀಸಲು ಅರಣ್ಯದಲ್ಲಿ ‘ಮರಗಳ ಉದ್ಯಾನ’ ಹೆಸರಿನಲ್ಲಿ ಅರಣ್ಯೇತರ ಚಟುವಟಿಕೆಗಳ ಪ್ರಾರಂಭಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಪರಿಸರ ಪ್ರಿಯರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ತುರಹಳ್ಳಿ ಅರಣ್ಯಕ್ಕೆ ಹೊಂದಿಕೊಂಡಿರುವ ಬನಶಂಕರಿಯ 80 ಅಡಿ ರಸ್ತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ‘ಕ್ಲೀನಪ್ ತುರಹಳ್ಳಿ ಗ್ರೂಪ್’, ‘ಆರ್ ಆರ್ ನಗರ ಐ-ಕೇರ್ ಗ್ರೂಪ್’, ‘ಮಿಷನ್ ದಿಶಾ ಗ್ರೂಪ್’, ‘ತುರಹಳ್ಳಿ ಫಾರೆಸ್ಟ್ ಗ್ರೂಪ್’ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿ, ಅರಣ್ಯವನ್ನು ‘ಪಾರ್ಕ್’ ಮಾಡುವ ಸರ್ಕಾರದ ನಿರ್ಧಾರ ಮೂರ್ಖತನದ್ದಾಗಿದೆ. ಯಾವುದೇ ಕಾರಣಕ್ಕೂ ಈ ಕಾರ್ಯಕ್ಕೆ ಅವಕಾಶ ಕಲ್ಪಿಸಬಾರದು ಎಂದು ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಪ್ರತಿಭಟನಕಾರರು, ತುರಹಳ್ಳಿ ಅರಣ್ಯ ಪ್ರದೇಶ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಏಕೈಕ ಮತ್ತು ಕೊನೆ ಕಾಡಾಗಿದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದ್ದು, ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಬಾರದು. ಈ ಭಾಗದಲ್ಲಿ 120ಕ್ಕೂ ಹೆಚ್ಚು ವಿವಿಧ ಜೀವ ಸಂಕುಲ ನೆಲೆಸಿವೆ. ಟ್ರೀ ಪಾರ್ಕ್ ಮಾಡುವ ಮೂಲಕ ಇರುವ ಮರಗಳನ್ನು ಕಡಿದು ಬೇರೆ ಜಾತಿಯ ಮರಗಳನ್ನು ನೆಡುವ ಅಗತ್ಯವಿಲ್ಲ ಎಂದರು.

‘ಸ್ಥಳೀಯರಿಗೆ ಯಾವುದೇ ಮಾಹಿತಿ ಇಲ್ಲದೆ ಕಾಮಗಾರಿ ಪ್ರಾರಂಭಿಸಲಾಗಿದೆ. ನೈಸರ್ಗಿಕವಾಗಿ ಬೆಳೆದಿರುವ ಮರಗಳನ್ನು ಕಡಿಯಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಕಾಮಗಾರಿ ಪ್ರಾರಂಭವಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಇದಕ್ಕೂ ಮುನ್ನ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಬೇಕು’ ಎಂದು ಒತ್ತಾಯಿಸಿದರು.

ಪಿಸಿಸಿಎಫ್‌ಗೆ ಮನವಿ

ತುರಹಳ್ಳಿ ಅರಣ್ಯದಲ್ಲಿ ಯಾವುದೇ ರೀತಿಯ ಕಾಮಗಾರಿ ಪ್ರಾರಂಭಿಸಬಾರದು. ನೈಸರ್ಗಿಕವಾಗಿ ಬೆಳೆದಿರುವ ಅರಣ್ಯವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರಿಗೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಂಜಯ್ ಮೋಹನ್, ಸಾರ್ವಜನಿಕರಿಂದಲೇ ಬೇಡಿಕೆ ಬಂದಿದ್ದರಿಂದ ಮರಗಳ ಉದ್ಯಾನ ಮಾಡಲಾಗುತ್ತಿದೆ. ಇದು ಸರ್ಕಾರದ ನಿರ್ಧಾರ. ‘ಟ್ರೀ ಪಾರ್ಕ್’ ಬೇಡ ಎಂದು ಪರಿಸರಪ್ರೇಮಿಗಳು ಸಲ್ಲಿಸಿರುವ ಮನವಿಯನ್ನು ಅರಣ್ಯ ಸಚಿವರ ಗಮನಕ್ಕೆ ತರಲಾಗುವುದು’ ಎಂದು ಪ್ರತಿಭಟನಕಾರರಿಗೆ ತಿಳಿಸಿದರು.

ಶುಕ್ರವಾರ ವರದಿ ಸಲ್ಲಿಕೆ:‘ನಗರವನ್ನು ಕಾಂಕ್ರೀಟ್ ಕಾಡು ಮಾಡಿದ್ದಾಯಿತು. ಇನ್ನು, ನಿಜವಾದ ಕಾಡನ್ನು ಕಾಂಕ್ರೀಟ್‌ ಪ್ರದೇಶವನ್ನಾಗಿಸಲು ಸರ್ಕಾರ ಮುಂದಾಗಿದೆ. ಅರಣ್ಯವನ್ನು ಪಾರ್ಕ್‌ ಮಾಡಲು ಅರಣ್ಯ ಇಲಾಖೆಗೆ ಅಧಿಕಾರವೇ ಇಲ್ಲ. ಇಲಾಖೆಯು ಅರಣ್ಯವನ್ನು ಸಂರಕ್ಷಿಸುವ ಕೆಲಸವನ್ನು ಮಾಡುವುದು ಬಿಟ್ಟು, ಮಹಾನಗರ ಪಾಲಿಕೆಯ ಕೆಲಸವನ್ನು ಮಾಡುತ್ತಿದೆ’ ಎಂದು ಪರಿಸರ ತಜ್ಞ ಲಿಯೊ ಸಲ್ಡಾನಾ ಅಸಮಾಧಾನ ವ್ಯಕ್ತಪಡಿಸಿದರು.

‘ತುರಹಳ್ಳಿ ಅರಣ್ಯದಲ್ಲಿ ಮರಗಳ ಉದ್ಯಾನ ಏಕೆ ಬೇಡ ಎಂಬುದಕ್ಕೆ ಕಾರಣ ಸಹಿತ ಮನವಿ ರೂಪದ ವರದಿ ಕೊಡುವಂತೆ ಪಿಸಿಸಿಎಫ್‌ ಹೇಳಿದ್ದಾರೆ. ಶುಕ್ರವಾರ ಈ ವರದಿ ಸಲ್ಲಿಸಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT