ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿತಾ ಸಮಾಜ ‘ಪ್ರವರ್ಗ–1’ಕ್ಕೆ ಸೇರ್ಪಡೆ ವಿಚಾರವಾಗಿ ಶೀಘ್ರ ತೀರ್ಮಾನ: ಸಚಿವ ಪರಮೇಶ್ವರ

ಜಾತಿ ನಿಂದನೆ ಮಾಡಿದವರ ವಿರುದ್ಧ ಕಾನೂನು ಕ್ರಮ
Published 18 ಜುಲೈ 2023, 15:33 IST
Last Updated 18 ಜುಲೈ 2023, 15:33 IST
ಅಕ್ಷರ ಗಾತ್ರ

ಬೆಂಗಳೂರು: ‘ಸವಿತಾ ಸಮಾಜವನ್ನು ‘ಪ್ರವರ್ಗ–1’ಕ್ಕೆ ಸೇರ್ಪಡೆ ಮಾಡುವಂತೆ ಕೋರಿಕೆ ಬಂದಿದ್ದು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಭರವಸೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಕರ್ನಾಟಕ ಸವಿತಾ ಕ್ಷೌರಿಕರ ಹಿತರಕ್ಷಣಾ ವೇದಿಕೆಯ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸವಿತಾ ಸಮಾಜಕ್ಕೆ ಎಲ್ಲ ರೀತಿಯ ನೆರವು ನೀಡಲು ರಾಜ್ಯ ಸರ್ಕಾರವು ಬದ್ಧವಿದೆ. ಸವಿತಾ ಸಮಾಜದವರನ್ನು ಹೀಗಳೆಯುವಂತೆ ಜಾತಿ ನಿಂದನಾ ಪದವಾಗಿ ಕೆಲವರು ಬಳಸುತ್ತಿದ್ದಾರೆ . ಅಂಥವರಿಗೆ ಶಿಕ್ಷೆ ನೀಡಬೇಕೆಂದು ಸಮಾಜವು ಒತ್ತಾಯಿಸಿದೆ. ಸಮಾಜದ ಆತ್ಮಗೌರವ ಹೆಚ್ಚಿಸುವ ಉದ್ದೇಶದಿಂದ ನಿಂದನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

‘ಪ್ರಪಂಚದ ಬೇರೆ ಎಲ್ಲೂ ವೃತ್ತಿ ಆಧಾರದಲ್ಲಿ ಸಮಾಜಗಳ ವರ್ಗೀಕರಣ ನಡೆದಿಲ್ಲ. ನಮ್ಮಲ್ಲಿ ಮಾತ್ರ ವೃತ್ತಿಯ ಆಧಾರದ ಮೇಲೆ ಸಮಾಜಗಳನ್ನು ವರ್ಗೀಕರಿಸಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಸಮಾಜಗಳನ್ನು ಬೇರೆ ಬೇರೆ ರೀತಿಯಲ್ಲಿ ಕಾಣಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸವಿತಾ ಸಮಾಜವು ಶೈಕ್ಷಣಿಕವಾಗಿ ಮುಂದುವರಿಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕು. ಸರ್ಕಾರವು ಎಲ್ಲ ರೀತಿಯಲ್ಲೂ ನೆರವು ನೀಡಲಿದ್ದು ವಿದ್ಯಾವಂತರಾಗಲು ಜಾತಿ, ಧರ್ಮ ಬೇಕಾಗಿಲ್ಲ’ ಎಂದು ಹೇಳಿದರು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿ, ‘ಸವಿತಾ ಸಮಾಜವು ಒಗ್ಗಟ್ಟು ತೋರಿದರೆ ಎಲ್ಲ ಸೌಲಭ್ಯಗಳೂ ದೊರೆಯಲಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ರಾಜಕೀಯ ಸ್ಥಾನಮಾನಗಳನ್ನೂ ಪಡೆದುಕೊಳ್ಳಬೇಕು. ರಾಜಕೀಯ ಸ್ಥಾನಮಾನ ಇಲ್ಲದಿದ್ದರೆ ಹೆಚ್ಚಿನ ಸವಲತ್ತು ಪಡೆದುಕೊಳ್ಳಲು ಸಾಧ್ಯ ಆಗುವುದಿಲ್ಲ’ ಎಂದು ನುಡಿದರು.

‘ಸಮಾಜವು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜವು ಅಭಿವೃದ್ಧಿ ಹೊಂದಲು ಪ್ರತ್ಯೇಕ ಮೀಸಲಾತಿ ಅಥವಾ ‘ಪ್ರವರ್ಗ–1’ಕ್ಕೆ ಸೇರ್ಪಡೆ ಮಾಡಬೇಕು’ ಎಂದು  ಕೊಂಚೂರು ಕ್ಷೇತ್ರದ ಸವಿತಾಪೀಠ ಮಹಾಸಂಸ್ಥಾನದ ಸವಿತಾನಂದನಾಥ ಸ್ವಾಮೀಜಿ ಕೋರಿದರು.

ಸವಿತಾ ಸಮಾಜದ ಸಂಘಟನೆಗಳು ಸಮುದಾಯದ ಎಳಿಗೆಗೆ ಶ್ರಮಿಸಬೇಕು. ಆಗ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ.
ಜಿ.ಪರಮೇಶ್ವರ ಗೃಹ ಸಚಿವ

ಬೇಡಿಕೆಗಳು ಏನೇನು?

* ಹೊರ ರಾಜ್ಯದಿಂದ ಬಂದವರು ಪರವಾನಗಿ ಪಡೆಯದೇ ಕರ್ನಾಟಕದಲ್ಲಿ ಸೆಲೂನ್‌ ಸ್ಪಾ ತೆರೆಯುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

* ಸವಿತಾ ಸಮಾಜದವರ ಮೇಲೆ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರು ಜಾತಿ ನಿಂದನಾ ಪದ ಬಳಸುತ್ತಿದ್ದಾರೆ. ಇದು ನೋವು ತರಿಸಿದೆ. ಜಾತಿ ನಿಂದನೆ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಬೇಕು.

* ಕುಲವೃತ್ತಿ ಉಳಿಸಲು ಆಧುನಿಕ ತರಬೇತಿ ಅಗತ್ಯವಿದೆ. ಇದಕ್ಕೆ ಜಾಗ ಕೊರತೆಯಿದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಾಗ ನೀಡಬೇಕು.

* ಕ್ಷೌರಿಕರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಲಾಗಿದ್ದು ಯಾವುದೇ ಸೌಲಭ್ಯ ನೀಡುತ್ತಿಲ್ಲ. ಶಿಕ್ಷಣ ಹಾಗೂ ಆರೋಗ್ಯಕ್ಕೆ ಪ್ರತ್ಯೇಕ ಅನುದಾನ ಕಲ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT