ಗುರುವಾರ , ಜುಲೈ 29, 2021
22 °C

ಸವಿತಾ ಮಹರ್ಷಿ ಜಯಂತಿ: ಸವಿತಾ ಸಮಾಜ ಮುಖ್ಯವಾಹಿನಿಗೆ ಬರಲಿ; ಅರವಿಂದ ಲಿಂಬಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ’ಸಮಾಜದಲ್ಲಿ ಮುಂದುವರಿದಿರುವ ಸಮುದಾಯಗಳೇ ಈಗ ಮೀಸಲಾತಿಗಾಗಿ ಹೋರಾಟ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜ ಮುಖ್ಯವಾಹಿನಿಗೆ ಬರುವ ಅಗತ್ಯವಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಹಿಂದುಳಿದ ಸಮಾಜ ಶಿಕ್ಷಣದಿಂದ ವಂಚಿತರಾಗಬಾರದು. ಉನ್ನತ ಶಿಕ್ಷಣ ಪಡೆಯಲು ಅವಶ್ಯವಿರುವ ಸಾಲಸೌಲಭ್ಯಗಳನ್ನು ಸರ್ಕಾರದಿಂದ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಇತ್ತೀಚೆಗೆ ನಾದಸ್ವರ ಕಾರ್ಯಕ್ರಮಗಳು ಕಡಿಮೆಯಾಗಿವೆ. ನಾದಸ್ವರದ ಮೂಲಕವೇ ಸರ್ಕಾರಿ ಕಾರ್ಯಕ್ರಮ ಆರಂಭಿಸಲು ಆದ್ಯತೆ ನೀಡುವಂತೆ ಮನವಿ ಮಾಡುತ್ತೇನೆ. ಖಾಸಗಿ ಕಾರ್ಯಕ್ರಮಗಳಿಗೂ ನಾದಸ್ವರ ಬಳಕೆ ಹೆಚ್ಚಾದರೆ ಸಮಾರಂಭಕ್ಕೂ ಮೆರಗು ಬರಲಿದೆ. ಸಮಾಜದ ಜನರಿಗೆ ಉದ್ಯೋಗ ಸಿಗುವ ಜೊತೆಗೆ ಕಲೆಯ ಪರಂಪರೆಯೂ ಉಳಿಯಲಿದೆ’ ಎಂದರು.

‘ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಹಿಂದಿನ ವರ್ಷದ ಜಯಂತ್ಯುತ್ಸವಗಳಿಗೆ ಬಾಕಿ ಉಳಿಸಿಕೊಂಡಿರುವ ಅನುದಾನವನ್ನು ಕೂಡ ಆದಷ್ಟು ಬೇಗ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ವಸತಿ ಸಚಿವ ವಿ. ಸೋಮಣ್ಣ, ‘ಪೂರ್ವಜರು ನೀಡಿರುವ ಪದ್ಧತಿಯನ್ನು ಅಳವಡಿಸಿಕೊಳ್ಳುವ ಜೊತೆಗೆ ಹಳ್ಳಿಗಾಡಿನಲ್ಲಿರುವ ಸಮುದಾಯದ ಜೀವನಮಟ್ಟವನ್ನು ಸುಧಾರಿಸಬೇಕಿದೆ’ ಎಂದರು.

ಕರ್ನಾಟಕ ಸವಿತ ಸಮಾಜದ ಅಧ್ಯಕ್ಷರಾದ ನರೇಶ್, ‘ಸಮಾಜವು ವಾದ್ಯ ಕಲೆ, ನಾದಸ್ವರ ಮತ್ತು ಡೋಲು ಸಂಗೀತವನ್ನು ಪಾರಂಪರಿಕವಾಗಿ ನುಡಿಸಿಕೊಂಡು ಬರಲಾಗುತ್ತಿದೆ. ನಾದಸ್ವರ ಮತ್ತು ಡೋಲು ನುಡಿಸಲು ಇಲಾಖೆಯಲ್ಲಿ ಪ್ರಾಮುಖ್ಯತೆ ನೀಡಬೇಕು’ ಎಂದು ಕೋರಿದರು.

‘ಸವಿತಾ ಮಹರ್ಷಿ ಜಯಂತಿ ಆಚರಣೆಗೆ ಹಿಂದಿನ ವರ್ಷದ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜಯಂತಿ ಆಚರಣೆಗೆ ಹೆಚ್ಚಿನ ಅನುದಾನ ನೀಡಿದರೆ, ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಲಿದೆ’ ಎಂದರು.

‘ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತ್ಯಾಗರಾಜರ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದೇ ರೀತಿಯಲ್ಲಿ ರಾಜ್ಯದಲ್ಲಿಯೂ ತ್ಯಾಗರಾಜರ ಆಚರಣೆಗೆ ಸರ್ಕಾರ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಶಾಸಕ ಉದಯ ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ, ಕೆಪಿಎಸ್‌ಸಿ ಸದಸ್ಯ ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು