ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಆಧಾರ್ ಜೋಡಣೆ ಸಂದೇಶ: ₹ 12.29 ಲಕ್ಷ ವಂಚನೆ

Last Updated 17 ಜೂನ್ 2021, 17:21 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಖಾತೆಗೆ ಆಧಾರ್ ಜೋಡಣೆ ಮಾಡಬೇಕು’ ಎಂಬ ಸಂದೇಶ ನಂಬಿ ಗ್ರಾಹಕರೊಬ್ಬರು ₹ 12.29 ಲಕ್ಷ ಕಳೆದುಕೊಂಡಿದ್ದಾರೆ.

ಈ ವಂಚನೆ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಾಗವಾರ ವೀರಣ್ಣಪಾಳ್ಯದ 49 ವರ್ಷದ ಮಹಿಳೆಯೊಬ್ಬರು, ಎಸ್‌ಬಿಐನಲ್ಲಿ ಖಾತೆ ಹೊಂದಿದ್ದಾರೆ. ‘ನಿಮ್ಮ ಎಸ್‌ಬಿಐ ಖಾತೆಗೆ ಕೆವೈಸಿ (ಗ್ರಾಹಕರ ಮಾಹಿತಿ) ಹಾಗೂ ಆಧಾರ್ ಜೋಡಣೆ ಮಾಡಬೇಕು’ ಎಂದು ಜೂನ್ 13ರಂದು ಮಹಿಳೆಯ ಮೊಬೈಲ್‌ಗೆ ಸಂದೇಶ ಬಂದಿತ್ತು’ ಎಂದು ಪೊಲೀಸರು ಹೇಳಿದರು.

‘ಸಂದೇಶದಲ್ಲಿದ್ದ ಮೊಬೈಲ್ ನಂಬರ್‌ಗೆ ಮಹಿಳೆ ಕರೆ ಮಾಡಿದ್ದರು. ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ಮಾತನಾಡಿದ್ದ ಆರೋಪಿ, ಮಹಿಳೆಯ ಬ್ಯಾಂಕ್ ಖಾತೆ ಮಾಹಿತಿ ತಿಳಿದುಕೊಂಡಿದ್ದ. ಲಿಂಕ್ ಕಳುಹಿಸಿ ಅದನ್ನು ತೆರೆಯುವಂತೆಯೂ ಹೇಳಿದ್ದ. ಆತನ ಮಾತು ನಂಬಿದ್ದ ಮಹಿಳೆ, ಲಿಂಕ್ ಕ್ಲಿಕ್ ಮಾಡಿದ್ದರು. ಅದಾದ ಕೆಲ ನಿಮಿಷಗಳಲ್ಲೇ ಹಂತ ಹಂತವಾಗಿ ಖಾತೆಯಿಂದ ₹ 12.29 ಲಕ್ಷ ಕಡಿತವಾಗಿದೆ’ ಎಂದೂ ತಿಳಿಸಿದರು.

‘ಹಣ ಕಡಿತದ ನಂತರ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಬಳಿಕ ಮಹಿಳೆಯು ಠಾಣೆಗೆ ದೂರು ನೀಡಿದ್ದಾರೆ‘ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT