ಶುಕ್ರವಾರ, ಜನವರಿ 24, 2020
28 °C
107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ಗೆ ಕೃಷಿ ವಿಶ್ವವಿದ್ಯಾಲಯ ಸಜ್ಜು

ವಿಜ್ಞಾನಿಗಳ ‘ಮಹಾಮೇಳ’ದಲ್ಲಿ ವಿಜ್ಞಾನದ ಮಂಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಜ್ಞಾನದ ವಿದ್ಯಾರ್ಥಿಗಳು, ವಿಜ್ಞಾನದ ಬೆಳವಣಿಗೆಯ ಆಸಕ್ತರ ಪಾಲಿಗೆ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಮಾವೇಶವು ‘ಕುಂಭ ಮೇಳ’. ವಿಜ್ಞಾನಿಗಳ ಈ ಮಹಾ ಮೇಳಕ್ಕೆ ನಗರದ ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ) ವೇದಿಕೆಯಾಗಿದೆ.

ದೇಶದ ಮೂಲೆ ಮೂಲೆಯಿಂದ ನೂರಾರು ಹಿರಿಯ ಮತ್ತು ಕಿರಿಯ ವಿಜ್ಞಾನಿಗಳು ಈಗಾಗಲೇ ಇಲ್ಲಿ ಬಂದು ಸೇರಿದ್ದು, ಚಿಂತನ ಮಂಥನಕ್ಕೆ ಕೃಷಿ ವಿಶ್ವವಿದ್ಯಾಲಯದ ಆವರಣ ಸಜ್ಜಾಗಿದೆ. ಭಾರತೀಯ ವಿಜ್ಞಾನಿಗಳು ವಿವಿಧ ಕ್ಷೇತ್ರಗಳಲ್ಲಿ ನಡೆಸುತ್ತಿರುವ ಸಂಶೋಧನೆಗಳು ಮತ್ತು ಅವುಗಳ ಫಲಿತಾಂಶಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗುತ್ತದೆ.

ಸಾಕಷ್ಟು ಕುತೂಹಲ ಕೆರಳಿಸುವ ವಿಷಯ ಮಂಡನೆಗಳ ಜತೆಗೆ ವಿವಾದಕ್ಕೂ ಕಾರಣವಾಗುವ ವಿಷಯಗಳ ಪ್ರಸ್ತಾಪವೂ ಕಳೆದ ಕೆಲವು ವಿಜ್ಞಾನ ಕಾಂಗ್ರೆಸ್‌ಗಳಲ್ಲಿ ಆಗಿದೆ. ಈ ಬಗ್ಗೆ ದೇಶದಾದ್ಯಂತ ಚರ್ಚೆಯೂ ನಡೆದಿದೆ. ಪುರಾಣಗಳಲ್ಲಿ ಪ್ರಸ್ತಾಪವಾಗಿರುವ ಕೆಲವು ಕೌತುಕದ ವಿಷಯಗಳನ್ನು ವಿಜ್ಞಾನದ ಜತೆ ಸಮೀಕರಿಸುವ ಬಗ್ಗೆ ಟೀಕೆಯೂ ವ್ಯಕ್ತವಾಗಿದೆ. ಕಳೆದ ವರ್ಷ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್‌ನಲ್ಲೂ ವಿಜ್ಞಾನಿಯೊಬ್ಬರು ಪುರಾಣಗಳ ಸಂಗತಿಯನ್ನು ಉಲ್ಲೇಖಿಸಿದ್ದು ಟೀಕೆ– ಟಿಪ್ಪಣಿಗೆ ಕಾರಣವಾಗಿತ್ತು.

ಹೈದರಾಬಾದ್‌ನಲ್ಲಿ ಕೆಲವು ವಿಜ್ಞಾನಿಗಳು ಬುಧವಾರ ಸಭೆ ಸೇರಿ, ‘ವಿಜ್ಞಾನವಲ್ಲದ ವಿಷಯವನ್ನು ಪ್ರಸ್ತಾಪಿಸಬಾರದು. ಪುರಾಣ, ತತ್ವಶಾಸ್ತ್ರಗಳು ಬೇರೆ, ವಿಜ್ಞಾನ ಬೇರೆ. ಇವುಗಳನ್ನು ಬೆರೆಸಬಾರದು. ಇದರಿಂದ ವಿಜ್ಞಾನ ಕಾಂಗ್ರೆಸ್‌ನ ಮಹತ್ವ ಕಡಿಮೆ ಆಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.ಈ

ಬಾರಿಯ ವಿಶೇಷಗಳು: ಈ ಬಾರಿ ನಾಲ್ಕು ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ನೊಬೆಲ್‌ ಪುರಸ್ಕೃತ ವಿಜ್ಞಾನಿ ಪ್ರೊ.ಸ್ಟೆಫನ್‌ ಹೆಲ್‌, ಡಾ. ಸುಬ್ರ ಸುರೇಶ್‌ ಉಪನ್ಯಾಸ ನೀಡುವ ಪ್ರಮುಖರು. ಅಲ್ಟ್ರಾ ಶಾರ್ಪ್‌ ಫ್ಲೋರೊಸೆನ್ಸ್‌ ಮೈಕ್ರೊಸ್ಕೋಪಿ, ಮೂಲ ವಿಜ್ಞಾನ ಮತ್ತು ಕೈಗಾರಿಕೆಗಳಲ್ಲಿ ಅನ್ವಯವಾಗುವ ಸಂಶೋಧನೆಗಳು, ಆಧುನಿಕ ಔಷಧ, ಜೀವನ ಶೈಲಿಯಿಂದ ಬರುತ್ತಿರುವ ಕಾಯಿಲೆಗಳು, ಹೃದ್ರೋಗದಲ್ಲಿ ಮುಂದುವರಿದ ತಂತ್ರಜ್ಞಾನಗಳ ಬಗ್ಗೆ ಉಪನ್ಯಾಸ ನಡೆಯಲಿದೆ.

ರೈತರ ವಿಜ್ಞಾನ ಕಾಂಗ್ರೆಸ್‌: ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಗ್ರಾಮೀಣ ಅಭಿವೃದ್ಧಿ ಈ ಬಾರಿಯ ವಿಜ್ಞಾನ ಕಾಂಗ್ರೆಸ್‌ನ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ರೈತರ ವಿಜ್ಞಾನ ಕಾಂಗ್ರೆಸ್‌ ಏರ್ಪಡಿಸಲಾಗಿದೆ. ವಿಜ್ಞಾನ ಕಾಂಗ್ರೆಸ್‌ನಲ್ಲಿ ಈ ವಿಷಯ ಸೇರ್ಪಡೆ ಆಗಿರುವುದು ಇದೇ ಮೊದಲು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು