ಶನಿವಾರ, ಜನವರಿ 18, 2020
21 °C
ದೀರ್ಘಾವಧಿಯ ಪರಿಹಾರಕ್ಕೆ ಶ್ರಮಿಸಿ ವಿಜ್ಞಾನಿಗಳಿಗೆ ಸಲಹೆ

ಅನ್ಯ ವೃತ್ತಿಗಳಿಗೆ ರೈತರ ವಲಸೆ: ವೆಂಕಯ್ಯನಾಯ್ಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೈತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಮುಂದಿನ ದಿನಗಳಲ್ಲಿ ರೈತರು ಅನ್ಯ ವೃತ್ತಿಗಳಿಗೆ ವಲಸೆ ಹೋಗುತ್ತಾರೆ. ಇದರಿಂದ ದೇಶ ಕೃಷಿ ಬಿಕ್ಕಟ್ಟು ಎದುರಿಸಬೇಕಾಗುತ್ತದೆ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ ನೀಡಿದರು.

ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ’ಕೃಷಿಕರ ಸಮಸ್ಯೆಗಳನ್ನು ಬಗೆಹರಿಸಲು ವೈಜ್ಞಾನಿಕ ಸಮುದಾಯ ದೀರ್ಘ ಅವಧಿಯ ಪರಿಹಾರಗಳನ್ನು ಒದಗಿಸಬೇಕು’ ಎಂದು ಹೇಳಿದರು.

‘ಭಾರತದಂತಹ ಬೃಹತ್‌ ರಾಷ್ಟ್ರ ಆಹಾರದ ಆಮದನ್ನು ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮದೇ ಆದ ಆಹಾರ ಭದ್ರತೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಗಮನ ಕೇಂದ್ರೀಕರಿಸಬೇಕು’ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.

‘ಜಾಗತಿಕ ಬಿಸಿ ಏರುವಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು ಇನ್ನು ಮುಂದೆ ಸಾಮಾನ್ಯ. ಇದರಿಂದ ಹವಾಮಾನ ನಮ್ಮ ನಿರೀಕ್ಷೆಗೆ ತಕ್ಕ ಹಾಗೆ ಇರುವುದಿಲ್ಲ. ಪ್ರಾಕೃತಿಕ ದುರಂತದ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಶಮನಗೊಳಿಸುವುದು ಹೇಗೆ ಎಂಬ ಬಗ್ಗೆ ವಿಜ್ಞಾನಿಗಳು ಆಲೋಚನೆ ನಡೆಸಬೇಕಿದೆ’ ಎಂದರು.

ಮುಖ್ಯವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಪ್ರತಿಕೂಲ ಪರಿಸ್ಥಿತಿಯನ್ನೂ ಎದುರಿಸಿ ಪೌಷ್ಠಿಕತೆ ಹೊಂದಿರುವ ಆಹಾರ ಧಾನ್ಯ ಬೆಳೆಯುವುದು, ಕಡಿಮೆ ನೀರಿನಲ್ಲೂ ಬೆಳೆಗಳ ಉತ್ಪಾದಕತೆ ಹೆಚ್ಚಿಸುವ ಸಂಶೋಧನೆಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಈ ಎಲ್ಲ ಸಮಸ್ಯೆಗಳ ಮಧ್ಯೆಯೂ ಅತ್ಯಾಧುನಿಕ ತಂತ್ರಜ್ಞಾನಗಳು ರೈತರ ಕೈ ಹಿಡಿಯಬಲ್ಲದು. ಈ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಕನಸು ನನಸು ಮಾಡಬೇಕಾಗಿದೆ ಎಂದು ನಾಯ್ಡು ಹೇಳಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇದ್ದರು.

107 ನೇ ವಿಜ್ಞಾನ ಕಾಂಗ್ರೆಸ್‌ಗೆ ತೆರೆ

ಐದು ದಿನಗಳ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಸಮಾವೇಶ ಮಂಗಳವಾರ ಕೊನೆಗೊಂಡಿತು. ವಿಜ್ಞಾನ, ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ವಿಷಯದ ಕುರಿತು ವಿಚಾರ ಮಂಡನೆ ಮತ್ತು ಚರ್ಚೆಗಳು ನಡೆದವು. ಗ್ರಾಮೀಣ ಪ್ರದೇಶದಲ್ಲಿ ಕೃಷಿಯಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನಗಳು, ಡಿಜಿಟಲ್‌ ತಂತ್ರಜ್ಞಾನ ಬಳಕೆಯ ಬಗ್ಗೆ ವಿವಿಧ ಗೋಷ್ಠಿಗಳಲ್ಲಿ ಬೆಳಕು ಚೆಲ್ಲಲಾಯಿತು.

ಈ ವರ್ಷ ವಿವಿಧ ಗೋಷ್ಠಿಗಳಿಗೆ ನೋಂದಾಯಿತಗೊಂಡವರ ಸಂಖ್ಯೆ 10,889,  ಪ್ರತಿನಿಧಿಗಳು 4,535, ವಿದ್ಯಾರ್ಥಿಗಳು 5,795, ರೈತರು 225 ಪಾಲ್ಗೊಂಡಿದ್ದರು.  ಐದು ದಿನಗಳಲ್ಲಿ ವಿಜ್ಞಾನ ಕಾಂಗ್ರೆಸ್‌ ಆವರಣಕ್ಕೆ ಭೇಟಿ ನೀಡಿದ ಸಾರ್ವಜನಿಕರ ಸಂಖ್ಯೆ 1,22,200 ಎಂದು ವಿಜ್ಞಾನ ಕಾಂಗ್ರೆಸ್‌ ಮೂಲಗಳು ಹೇಳಿವೆ.

ದೇಶದ 51 ಮತ್ತು ವಿದೇಶಗಳ 23 ವಿಜ್ಞಾನಿಗಳಿಂದ ಒಟ್ಟು 74 ಉಪನ್ಯಾಸ ನಡೆಯಿತು.

ವಿಜಯಲಕ್ಷ್ಮಿ ಸಕ್ಸೇನಾ ಹೊಸ ಅಧ್ಯಕ್ಷೆ:

ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಂಸ್ಥೆಯ ಹೊಸ ಅಧ್ಯಕ್ಷೆಯಾಗಿ ಪ್ರಾಣಿಶಾಸ್ತ್ರಜ್ಞೆ ಡಾ.ವಿಜಯಲಕ್ಷ್ಮಿ ಸಕ್ಸೇನಾ ಆಯ್ಕೆಯಾಗಿದ್ದಾರೆ. ಮುಂದಿನ ವಿಜ್ಞಾನ ಕಾಂಗ್ರೆಸ್‌ ಇವರ ನೇತೃತ್ವದಲ್ಲೇ ನಡೆಯಲಿದೆ. ಹಾಲಿ ಅಧ್ಯಕ್ಷ ಡಾ.ರಂಗಪ್ಪ ಅವರು ಸಕ್ಸೇನಾ ಅವರಿಗೆ ವಿಜ್ಞಾನ ಜ್ಯೋತಿಯನ್ನು ಹಸ್ತಾಂತರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು