ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

SCSPT TSP ನಿಧಿ ಬಳಕೆಗೆ ಖಂಡನೆ: ಸರ್ಕಾರದ ವಿರುದ್ಧ ‘ಅಹಿಂದ’ ಪ್ರತಿಭಟನೆ

Published 28 ಆಗಸ್ಟ್ 2024, 16:18 IST
Last Updated 28 ಆಗಸ್ಟ್ 2024, 16:18 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯ (ಟಿಎಸ್‌ಪಿ) ₹26 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ಸದಸ್ಯರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಕಾರರು ‘ಕಾಂಗ್ರೆಸ್‌ ಹಠಾವೋ, ದಲಿತ್ ಬಚಾವೋ’, ‘ನಿಮ್ಮ ಗ್ಯಾರಂಟಿಗೆ ನಮ್ಮ ಹಣ ಏಕೆ?’, ‘ದಲಿತ ವಿರೋಧಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಎಸ್‌ಸಿಎಸ್‌ಪಿ, ಟಿಸಿಪಿಯ ಅನುದಾನದಲ್ಲಿ ಈವರೆಗೆ ₹2.56 ಲಕ್ಷ ಕೋಟಿ ಅನುದಾನವನ್ನು ಹಿಂದಿನ ಸರ್ಕಾರಗಳು ಅನ್ಯ ಉದ್ದೇಶಕ್ಕೆ ಬಳಸಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರ ನೇತೃತ್ವದ ಸರ್ಕಾರವೇ ₹26 ಸಾವಿರ ಕೋಟಿ ವರ್ಗಾವಣೆ ಮಾಡುತ್ತಿದೆ. ಈ ಅನುದಾನ ಯಾವುದಕ್ಕೆ ಬಳಕೆಯಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು. ಈ ₹3 ಲಕ್ಷ ಕೋಟಿ ಅನುದಾನದಲ್ಲಿ ದಲಿತರಿಗಾಗಿ ಪ್ರತ್ಯೇಕ ಬಜೆಟ್‌ ಮಂಡಿಸಬೇಕು’ ಎಂದು ಆಗ್ರಹಿಸಿದರು.

‘ಕ್ರಾಂಗೆಸ್‌ಗೆ ದಲಿತರ ಹಿತ ಮತ್ತು ಏಳಿಗೆ ಬೇಕಾಗಿಲ್ಲ. ಅವರಿಗೆ ನಮ್ಮ ಮತ ಮಾತ್ರ ಬೇಕಾಗಿದೆ. ಆದ್ದರಿಂದ, ನಾವು ನಮ್ಮ ಮತಶಕ್ತಿಯ ಮೂಲಕ ಹೋರಾಡಬೇಕಿದೆ. ಪ್ರಜಾತಾಂತ್ರಿಕವಾಗಿ ಈ ಸರ್ಕಾರವನ್ನು ಕಿತ್ತೊಗೆಯಬೇಕು. ನಮ್ಮ ಹಿತಾಸಕ್ತಿ ಕಾಪಾಡುವ ಪ್ರತ್ಯೇಕ ರಾಜಕೀಯ ಅಸ್ಮಿತೆ ಕಂಡುಕೊಳ್ಳಲು ರಾಜಕೀಯ ಪಕ್ಷ ಕಟ್ಟಬೇಕಿದೆ’ ಎಂದರು.

ಒಕ್ಕೂಟದ ಹರಿರಾಮ್, ಹೈಕೋರ್ಟ್‌ ವಕೀಲ ಬಾಲನ್, ಎಎಪಿ ಮುಖಂಡ ಮೋಹನ್ ದಾಸರಿ ಭಾಗವಹಿಸಿದ್ದರು.

‘ಅಹಿಂದ ಪರಿಕಲ್ಪನೆ ಕಾಂಗ್ರೆಸ್‌ನದ್ದಲ್ಲ’

‘ಅಹಿಂದ ಕಾಂಗ್ರೆಸ್‌ನ ಪರಿಕಲ್ಪನೆ ಅಲ್ಲ ಇದು ದಲಿತ ಚಳವಳಿಯ ಪರಿಕಲ್ಪನೆ. ಅದನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಅಧಿಕಾರ ಅನುಭವಿಸುವ ಮೂಲಕ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಕೋಟಿಗಾನಹಳ್ಳಿ ರಾಮಯ್ಯ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT