ಗುರುವಾರ , ಜನವರಿ 23, 2020
23 °C
ಎಚ್.ಎನ್.ನಾಗಮೋಹನ್ ದಾಸ್ ಹೇಳಿಕೆ

ಎಸ್‌ಸಿ,ಎಸ್‌ಟಿ ಮೀಸಲಾತಿ ಏರಿಕೆ ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಗಂಭೀರವಾಗಿ ಗಮನಿಸಲಾಗಿದ್ದು, ವರದಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ತಿಳಿಸಿದರು.

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯದ ಲಂಬಾಣಿ ಸಮುದಾಯದ ಸಮಾಲೋಚನಾ ಸಭೆ ಮತ್ತು ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಿ 70 ವರ್ಷ ಕಳೆದರೂ ಈ ಸಮುದಾಯಗಳ ಅಭಿವೃದ್ಧಿಯಾಗಿಲ್ಲ. ಹೀಗಾಗಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಪರಿಗಣಿಸಿ ಮೀಸಲಾತಿ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ,‘ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ 15ರಿಂದ ಶೇ 19ಕ್ಕೆ ಹೆಚ್ಚಿಸಬೇಕು. ಲಂಬಾಣಿ ಸಮುದಾಯ ಅಭಿವೃದ್ಧಿಯಿಂದ ಹಿಂದುಳಿದಿದೆ. ರಾಜ್ಯದಲ್ಲಿ 3,300 ತಾಂಡಾಗಳಿದ್ದು, 2,750 ತಾಂಡಗಳು ಇಂದಿಗೂ ಕಂದಾಯ ಗ್ರಾಮಗಳಾಗಿಲ್ಲ. ಅವರಿಗೆ ಇಂದಿಗೂ ಹಕ್ಕುಪತ್ರಗಳು ಸಿಕ್ಕಿಲ್ಲ. ಸರ್ಕಾರಿ ಹಾಗೂ ಖಾಸಗಿ ಭೂಮಿಗಳಲ್ಲಿ ಬದುಕುತ್ತಿದ್ದಾರೆ’ ಎಂದರು.
ಲೇಖಕಿ ಬಿ.ಟಿ.ಲಲಿತಾ ನಾಯಕ್, ‘ಕಳೆದ 70 ವರ್ಷಗಳಲ್ಲಿ ಲಂಬಾಣಿ ಸಮುದಾಯದಲ್ಲಿ ಒಬ್ಬರು ಮಾತ್ರ ಸಂಸದರಾಗಿದ್ದಾರೆ. ಉನ್ನತ ಉದ್ಯೋಗಗಳಲ್ಲಿ ಯಾರೂ ಇಲ್ಲದಿರುವುದರಿಂದ ಮೀಸಲಾತಿಯನ್ನು ಹೆಚ್ಚಿಸುವ ಅಗತ್ಯವಿದೆ’ ಎಂದರು.

ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ನಾಯ್ಕ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಶಾಸಕ ಅವಿನಾಶ್ ಜಾಧವ್, ಸಬೀರ್ ಅಹಮದ್ ಮುಲ್ಲಾ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು