ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಪ್ರತ್ಯೇಕ ಅಪಘಾತ: ಬಿಎಂಟಿಸಿ ಗುತ್ತಿಗೆ ನೌಕರ ಸೇರಿ ಇಬ್ಬರ ಸಾವು

Published 30 ಜೂನ್ 2024, 15:17 IST
Last Updated 30 ಜೂನ್ 2024, 15:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೆಬ್ಬಾಳದ ಭದ್ರಪ್ಪ ಬಡಾವಣೆ ಸಮೀಪದ ರಿಂಗ್ ರಸ್ತೆಬದಿಯಲ್ಲಿ ನಿಲುಗಡೆ ಮಾಡಿದ್ದ ಸಿಮೆಂಟ್ ಮಿಕ್ಸರ್ ವಾಹನಕ್ಕೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾರೆ. 

ಜಾಲಹಳ್ಳಿಯ ಮುತ್ಯಾಲನಗರ ನಿವಾಸಿ ಜನಾರ್ದನ್‌ (26) ಮೃತಪಟ್ಟವರು. ಭಾನುವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಹೇಳಿದರು.

‘ಬಿಎಂಟಿಸಿಯಲ್ಲಿ ಗುತ್ತಿಗೆ ನೌಕರನಾಗಿರುವ ಜನಾರ್ದನ್‌ ಅವರು ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಯಲಹಂಕದಿಂದ ಮುತ್ಯಾಲನಗರಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ರಿಂಗ್ ರಸ್ತೆಯಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲುಗಡೆ ಮಾಡಿದ್ದ ಸಿಮಿಂಟ್ ಮಿಕ್ಸರ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ಡಿಕ್ಕಿಯಿಂದ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟರು’ ಎಂದು ಮೂಲಗಳು ಹೇಳಿವೆ.

‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಯಾವುದೇ ಸಿಗ್ನಲ್ ಲೈಟ್ ಹಾಕದೆ ರಸ್ತೆಯಲ್ಲಿ ಸಿಮೆಂಟ್ ಮಿಕ್ಸರ್ ವಾಹನ ನಿಲುಗಡೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ವಾಹನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸವಾರ ಸಾವು:

ಬೈಕ್‌ ಚಲಾಯಿಸುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕುರುಬರಹಳ್ಳಿ ನಿವಾಸಿ ಕುಮಾರಸ್ವಾಮಿ(28) ಮೃತ ಸವಾರ. ಬೊಮ್ಮನಹಳ್ಳಿ ನಿವಾಸಿ ನವೀನ್ ಕುಮಾರ್ ಗಾಯಗೊಂಡ ಹಿಂಬದಿ ಸವಾರ. ಭಾನುವಾರ ಬೊಮ್ಮನಹಳ್ಳಿ ಆಕ್ಸ್‌‌ಫರ್ಡ್ ಕಾಲೇಜು ಸಮೀಪದ ಸರ್ವಿಸ್ ರಸ್ತೆಯಲ್ಲಿ ಘಟನೆ ನಡೆದಿದೆ.

ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಸವಾರ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದರು. ಈತನ ಸ್ನೇಹಿತ, ಶಿವಮೊಗ್ಗ ಮೂಲದ ನವೀನ್ ಕುಮಾರ್ ಬೊಮ್ಮನಹಳ್ಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ಬೈಕ್‌ನಲ್ಲಿ ಬೊಮ್ಮನಹಳ್ಳಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದರು. ಆಗ ಆಕ್ಸ್‌‌ಫರ್ಡ್ ಕಾಲೇಜು ಸಮೀಪದ ಸರ್ವಿಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಹೇಳಿದರು.

‘ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ’

ಇಬ್ಬರೂ ಹೆಲ್ಮೆಟ್ ಧರಿಸಿದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿತ್ತು. ನವೀನ್ ಕುಮಾರ್ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT