ಬುಧವಾರ, ನವೆಂಬರ್ 20, 2019
26 °C
ಗಣಿ ಹಾನಿ ಪ್ರದೇಶ: ಜೈವಿಕ ಪರಿಸರ ಪುನರ್‌ನಿರ್ಮಾಣಕ್ಕೆ ಯೋಜನೆ ಜಾರಿ

‘ಸುಪ್ರೀಂ’ ಅನುಮತಿ: ಕ್ರಮಕ್ಕೆ ಸೂಚನೆ

Published:
Updated:
Prajavani

ಬೆಂಗಳೂರು: ಗಣಿಗಾರಿಕೆ ಪರಿಣಾಮ ವಲಯದಲ್ಲಿ ಜೈವಿಕ ಪರಿಸರ ಪುನರ್‌ ನಿರ್ಮಾಣಕ್ಕಾಗಿ ಸಮಗ್ರ ಪರಿಸರ ಯೋಜನೆ (ಸಿಇಪಿ
ಎಂಐಝಡ್) ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಗಣಿಗಾರಿಕೆ ಪ್ರದೇಶದಲ್ಲಿ ಸಮಗ್ರ ಪರಿಸರ ಯೋಜನೆ ಜಾರಿ ಕುರಿತು ಸೋಮವಾರ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಸುಪ್ರೀಂ ಕೋರ್ಟ್‌ನಿಂದ ಆದಷ್ಟು ಬೇಗ ಅನುಮತಿ ಪಡೆಯಬೇಕು’ ಎಂದು ಸೂಚಿಸಿದರು.

ಈ ಯೋಜನೆಗಾಗಿ ರಾಜ್ಯ ಸರ್ಕಾರ ₹24,996 ಕೋಟಿ ಖರ್ಚು ಮಾಡಲಿದೆ. ರಾಜ್ಯದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ತಾರಕದಲ್ಲಿದ್ದಾಗ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಪರಿಸರಕ್ಕೆ ಭಾರಿ ಪ್ರಮಾಣದ ಹಾನಿಯಾಗಿತ್ತು. ಸಮಗ್ರ ಪರಿಸರ ಯೋಜನೆ ಆ ಹಾನಿಯನ್ನು ಸರಿಪಡಿಸುವ ಪರಿಹಾರ ಕ್ರಮವಾಗಿದೆ.

ರಾಜ್ಯ ಸರ್ಕಾರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಿಇಪಿಎಂಐಝಡ್ ಯೋಜನೆಯನ್ನು ಸಲ್ಲಿಸಿತ್ತು. ಆರಂಭದಲ್ಲಿ ₹15,742.35 ಕೋಟಿ ಯೋಜನಾ ಪ್ರಸ್ತಾವ ಸಲ್ಲಿಸಲಾಗಿತ್ತು. ಬಳಿಕ ಅದನ್ನು ಪರಿಷ್ಕರಿಸಲಾಯಿತು.

ಗಣಿಗಾರಿಕೆ ಪರಿಣಾಮ ವಲಯದಲ್ಲಿ ಜೈವಿಕ ಪರಿಸರ ಪುನರ್‌ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸಲ್ಲಿಸಿರುವ ಯೋಜನೆಯನ್ನು ಅಧ್ಯಯನ ನಡೆಸಿ ಈ ಪ್ರಕರಣದಲ್ಲಿ ಸಹಕರಿಸಲು, ಸುಪ್ರೀಂ ಕೋರ್ಟ್‌ ಅಮಿಕಸ್‌ ಕ್ಯೂರಿ ಶ್ಯಾಂ ದಿವಾನ್‌ ಅವರಿಗೆ ಸೂಚಿಸಿದೆ. ದಿವಾನ್‌ ಅವರು ಈ ಸಂಬಂಧ ನ್ಯಾಯಾಲಯಕ್ಕೆ ಸಲಹೆ– ಸೂಚನೆ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ನ್ಯಾಯಾಲಯವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕೆ ಅಥವಾ ಜಾರಿ ಜವಾಬ್ದಾರಿಯನ್ನು ಸರ್ಕಾರಕ್ಕೆ ವಹಿಸಿ ಅನುಮತಿ ಮಾತ್ರ ನೀಡಬೇಕೆ ಎಂಬ ಬಗ್ಗೆ ಅಮಿಕಸ್‌ ಕ್ಯೂರಿ ಅವರನ್ನು ನ್ಯಾಯಾಲಯ ಕೇಳಿಕೊಂಡಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಅನುಮತಿಗಾಗಿ ಕಾಯುತ್ತಿದ್ದು, ಒಪ್ಪಿಗೆ ಸಿಕ್ಕ ತಕ್ಷಣ ಗಣಿಗಾರಿಕೆಯಿಂದ ಹಾನಿಯಾದ ಪ್ರದೇಶದಲ್ಲಿ ಜೈವಿಕ ಪರಿಸರ ಪುನರ್‌ ನಿರ್ಮಾಣ ಕಾರ್ಯದಲ್ಲಿ ತೊಡಗಲಿದೆ. ಗಣಿಗಾರಿಕೆ ಪರಿಣಾಮ ವಲಯದಲ್ಲಿ ಸಮಗ್ರ ಪರಿಸರ ಯೋಜನೆಯ ಅಡಿ ಬಳ್ಳಾರಿಯಲ್ಲಿ ₹13,378.41 ಕೋಟಿ, ಚಿತ್ರದುರ್ಗದಲ್ಲಿ ₹3,792.30 ಕೋಟಿ ಮತ್ತು ತುಮಕೂರು ಜಿಲ್ಲೆಯಲ್ಲಿ ₹2,554.05 ಕೋಟಿ ವೆಚ್ಚದಲ್ಲಿ ಪರಿಸರ ಪುನರ್‌ ನಿರ್ಮಾಣ ಕಾರ್ಯ ನಡೆಯಲಿದ್ದು, ಇದಕ್ಕೆ ಸುಪ್ರೀಂ ಕೋರ್ಟ್‌ ಕಣ್ಗಾವಲು ಇರಲಿದೆ.

ಈ ನಿಧಿಯಲ್ಲಿ ಸ್ವಲ್ಪ ಪ್ರಮಾಣವನ್ನು ನೆರೆ ಪರಿಹಾರಕ್ಕೆ ಬಳಸಲು ಸಭೆ ಕರೆಯಲಾಗಿದೆ ಎಂಬ ವದಂತಿ ಕೇಳಿ ಬಂದಿತ್ತು. ‘ಅಂತಹ ಯಾವುದೇ ಪ್ರಸ್ತಾಪ ಇಲ್ಲ. ವದಂತಿಯಲ್ಲಿ ಹುರುಳಿಲ್ಲ’ ಎಂದು ವಾಣಿಜ್ಯ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರರಾವ್‌ ತಿಳಿಸಿದರು.

ಯೋಜನೆಯ ಪ್ರಮುಖ ಕಾರ್ಯಗಳು

* ಅರಣ್ಯೀಕರಣ, ಮಣ್ಣಿನ ತೇವಾಂಶ ಮತ್ತು ಜಲಸಂಪನ್ಮೂಲ ಸಂರಕ್ಷಣೆಗೆ ಕ್ರಮ

* ಗಣಿಗಾರಿಕೆಯಿಂದ ಹಾನಿಯಾಗಿರುವ ಗ್ರಾಮಗಳಲ್ಲಿ ರಸ್ತೆಗಳ ದುರಸ್ತಿ, ಕ‌ಟ್ಟಡಗಳ ಪುನರ್‌ನಿರ್ಮಾಣ.

* ಗಣಿಗಾರಿಕೆಯಿಂದ ಬಾಧಿತರಾದ ಜನರಿಗೆ ಆರೋಗ್ಯ ವಿಮೆ, ವೈದ್ಯಕೀಯ ಸೌಲಭ್ಯ ಕಲ್ಪಿಸುವುದು.

* ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ವಲಯ ಸರಿಪಡಿಸಲು ಕ್ರಮ.

* ಕುಡಿಯುವ ನೀರಿನ ಯೋಜನೆ, ಒಳಚರಂಡಿ ಹಾಗೂ ನೈರ್ಮಲ್ಯ ಕಾರ್ಯಕ್ರಮಗಳ ಜಾರಿ.

ಪ್ರತಿಕ್ರಿಯಿಸಿ (+)