ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೀಣ್ಯದ ಬಿಎಂಟಿಸಿ ಘಟಕದ ಆವರಣದಲ್ಲಿ ಕೊಳಚೆ ನೀರು

ಸಮಸ್ಯೆಗೆ ಸ್ಪಂದಿಸದ ಬಿಬಿಎಂಪಿ, ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳು
Published 14 ಆಗಸ್ಟ್ 2024, 15:46 IST
Last Updated 14 ಆಗಸ್ಟ್ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯದ ಬಿಎಂಟಿಸಿ ಘಟಕದ (ಘಟಕ 22) ಆವರಣದ ಒಳಗೆ ಕೊಳಚೆ ನೀರು ನುಗ್ಗುತ್ತಿದ್ದು, ಬಿಬಿಎಂಪಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಘಟಕದಿಂದ ಗುರುವಾರದಿಂದ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಆರಂಭಗೊಳ್ಳಲಿದೆ.

ಬಸ್‌ ನಿಲ್ದಾಣದ ಮುಂಭಾಗದವರೆಗೆ ಮಾತ್ರ ಚರಂಡಿ ನಿರ್ಮಿಸಲಾಗಿದ್ದು, ಮುಂದಕ್ಕೆ ನೀರು ಹರಿಯಲು ವ್ಯವಸ್ಥೆ ಇಲ್ಲ. ಈ ಕಾರಣದಿಂದ ನಿಲ್ದಾಣದಲ್ಲೇ ನೀರು ಹರಿಯುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಘಟಕ 22ರ ಅಧಿಕಾರಿಗಳು ಅಲವತ್ತುಕೊಂಡರು.

‘ಸಮಸ್ಯೆ ಬಗ್ಗೆ ಬಿಬಿಎಂಪಿ ದಾಸರಹಳ್ಳಿ ವಲಯದ ಜಂಟಿ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ‍ಪಕ್ಕದಲ್ಲೇ ಪಾದಚಾರಿ ಮಾರ್ಗದಲ್ಲಿ ಹೋಟೆಲ್‌ ನಡೆಸುವವರು ಪಾತ್ರೆ ತೊಳೆದ, ಕೈ ತೊಳೆದ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ. ಘಟಕದ ಪ್ರವೇಶ ದ್ವಾರದ ಎಡಭಾಗದಲ್ಲಿ ಕೊಳಚೆ ನೀರು ಶೇಖರಣೆಗೊಂಡು, ಕೆಟ್ಟ ವಾಸನೆ ಬರುತ್ತಿದೆ ಎಂಬುದನ್ನೂ ತಿಳಿಸಲಾಗಿತ್ತು. ಕೆಎಸ್‌ಎಸ್‌ಐಡಿಸಿ ಅದಕ್ಕೆ ಹೊಣೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು. ಕೆಎಸ್‌ಎಸ್‌ಐಡಿಸಿಗೆ ಮಾಹಿತಿ ನೀಡಿದರೂ ಸ್ಪ‍ಂದಿಸಿಲ್ಲ’ ಎಂದು ದೂರಿದರು.

‘ಪೀಣ್ಯ ಬಿಎಂಟಿಸಿ ಘಟಕಕ್ಕೆ ಭೇಟಿ ನೀಡಿದ್ದೇವೆ. ಹಿರಿಯ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲನೆ ನಡೆಸಿದ ಬಳಿಕ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲಿ ಚರಂಡಿ ನೀರು ನಿಲ್ಲದಂತೆ ಮಾಡಲಾಗುವುದು’ ಎಂದು ಕೆಎಸ್‌ಎಸ್‌ಐಡಿಸಿ ಸಿಬ್ಬಂದಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT