ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಎಸಗಿ ಬ್ಲ್ಯಾಕ್‌ಮೇಲ್: ಆಸ್ಟ್ರೇಲಿಯಾದ ಸಿನಿಮಾ ವಿತರಕ ಬಂಧನ

ನಂದಿನಿ ಲೇಔಟ್ ಠಾಣೆಯಲ್ಲಿ ಎಫ್‌ಐಆರ್‌
Last Updated 6 ಮಾರ್ಚ್ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದರ ಫೋಟೊ ಹಾಗೂ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ರೂಪೇಶ್ (39) ಎಂಬುವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಯಶವಂತಪುರದ ಜೆ.ಪಿ.ಪಾರ್ಕ್‌ ನಿವಾಸಿಯಾದ ರೂಪೇಶ್, ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ. ಕನ್ನಡ ಹಾಗೂ ದಕ್ಷಿಣ ಭಾರತದ ಸಿನಿಮಾಗಳನ್ನು ಆಸ್ಟ್ರೇಲಿಯಾದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ವಿತರಕ ಆಗಿದ್ದ. ಕಾರ್ಯಕ್ರಮ ಸಂಘಟನಾ ವ್ಯವಸ್ಥಾಪಕರಾಗಿಯೂ ಕೆಲಸ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

ಆಸ್ಟ್ರೇಲಿಯಾದಲ್ಲಿ ಪರಿಚಯ: ‘ದೂರುದಾರ ಮಹಿಳೆ, ಪತಿ ಹಾಗೂ ಮಕ್ಕಳ ಜೊತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಕಾರ್ಯಕ್ರಮವೊಂದರಲ್ಲಿ ರೂಪೇಶ್‌ ಹಾಗೂ ಮಹಿಳೆಗೆ ಪರಿಚಯ ಆಗಿತ್ತು. ಇಬ್ಬರೂ ಬೆಂಗಳೂರಿನವರಾಗಿದ್ದರಿಂದ ಹೆಚ್ಚು ಆತ್ಮೀಯತೆ ಬೆಳೆದಿತ್ತು’ ಎಂದು ಪೊಲೀಸರು ತಿಳಿಸಿದರು.

ಲೈಂಗಿಕ ದೌರ್ಜನ್ಯ: ‘ಕಾರ್ಯಕ್ರಮವೊಂದರ ಟಿಕೆಟ್ ಪಡೆಯಲೆಂದು ಮಹಿಳೆ, ರೂಪೇಶ್‌ ಅವರನ್ನು ಹೋಟೆಲೊಂದರಲ್ಲಿ ಭೇಟಿ ಆಗಿದ್ದರು. ಮತ್ತು ಬರುವ ಔಷಧಿ ಬೆರೆಸಿದ್ದ ಪಾನೀಯ ಕುಡಿಸಿದ್ದ ಆರೋಪಿ, ಬಲವಂತವಾಗಿ ಹುಕ್ಕಾ ಸೇದಿಸಿದ್ದ. ಲೈಂಗಿಕ ದೌರ್ಜನ್ಯ ಎಸಗಿದ್ದ. ಅದರ ಫೋಟೊ ಹಾಗೂ ವಿಡಿಯೊಗಳನ್ನು ತೆಗೆದಿಟ್ಟುಕೊಂಡಿದ್ದ.’

‘ಫೋಟೊ ಹಾಗೂ ವಿಡಿಯೊವನ್ನು ಮಹಿಳೆಗೆ ತೋರಿಸಿದ್ದ ಆರೋಪಿ, ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಹಾಗೂ ಹಣ ನೀಡುವಂತೆ ಒತ್ತಾಯಿಸಲಾರಂಭಿಸಿದ್ದ. ಇಲ್ಲದಿದ್ದರೆ, ಫೋಟೊ ಹಾಗೂ ವಿಡಿಯೊವನ್ನು ಪತಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ಆರೋಪಿ ಮಾತಿಗೆ ಹೆದರಿದ ಮಹಿಳೆ ₹ 6 ಲಕ್ಷ ಕೊಟ್ಟಿದ್ದರು. ಅದಾದ ನಂತರವೂ ಆರೋಪಿ ಹಣಕ್ಕಾಗಿ ಪೀಡಿಸುತ್ತಿದ್ದ. ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

ಬೆಂಗಳೂರಿಗೂ ಬಂದು ಕಿರುಕುಳ: ‘ಆರೋಪಿ ವರ್ತನೆಯಿಂದ ಬೇಸತ್ತ ಮಹಿಳೆ ಇತ್ತೀಚೆಗೆ ಬೆಂಗಳೂರಿಗೆ ಬಂದು ತಮ್ಮ ಮಾವನ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇದನ್ನು ತಿಳಿದುಕೊಂಡ ಆರೋಪಿಯೂ ಬೆಂಗಳೂರಿಗೆ ಬಂದು ಪುನಃ ಕಿರುಕುಳ ನೀಡಲಾರಂಭಿಸಿದ್ದ. ‘ಹಣ ಕೊಡು, ಇಲ್ಲದಿದ್ದರೆ ಲೈಂಗಿಕವಾಗಿ ಸಹಕರಿಸು’ ಎಂದು ಪೀಡಿಸಲಾರಂಭಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ನೊಂದ ಮಹಿಳೆ ಠಾಣೆಗೆ ದೂರು ನೀಡಿದ್ದರು. ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಲೈಂಗಿಕ ದೌರ್ಜನ್ಯ, ಅಕ್ರಮ ಬಂಧನ ಹಾಗೂ ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಕನ್ನಡದ ಸಿನಿಮಾ ವಿತರಣೆ ಮಾಡಿದ್ದ’
‘ಆರೋಪಿ ರೂಪೇಶ್‌ ಅವರಿಗೆ ಆಸ್ಟ್ರೇಲಿಯಾದ ಹಲವು ಚಿತ್ರಮಂದಿರಗಳ ಮಾಲೀಕರ ಪರಿಚಯವಿದೆ. ಹೀಗಾಗಿಯೇ ಆತ ವಿತರಕನಾಗಿ ಕೆಲಸ ಮಾಡುತ್ತಿದ್ದ. ಕನ್ನಡದ ರಂಗಿತರಂಗಿ ಹಾಗೂ ಅವನೇ ಶ್ರೀಮನ್ನಾರಾಯಣ ಸೇರಿ ಹಲವು ಸಿನಿಮಾಗಳನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆ ಮಾಡಿಸಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT