ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 1,753 ಅನಧಿಕೃತ ಕಟ್ಟಡಗಳಿಗೆ ಕುತ್ತು

ಡಾ.ಶಿವರಾಮ ಕಾರಂತ ಬಡಾವಣೆ * 2018ರ ಆಗಸ್ಟ್‌ ಬಳಿಕ ನಿರ್ಮಾಣವಾದ ಕಟ್ಟಡಗಳ ತೆರವು
Last Updated 26 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾದ ಕಡೆ ಬಿಡಿಎ ಅಧಿಕಾರಿಗಳು 2021ರ ಜುಲೈವರೆಗೆ 1,798 ಅನಧಿಕೃತ ಕಟ್ಟಡಗಳನ್ನು ಗುರುತಿಸಿದ್ದಾರೆ.

ಬಿಡಿಎ ಅಧಿಕಾರಿಗಳು ಮೊದಲ ಹಂತದ ತೆರವು ಕಾರ್ಯಾಚರಣೆಯಲ್ಲಿ ಸೋಮಶೆಟ್ಟಿಹಳ್ಳಿ, ಲಕ್ಷ್ಮೀಪುರ ಹಾಗೂ ಮೇಡಿ ಅಗ್ರಹಾರದಲ್ಲಿ ಒಟ್ಟು 22 ಅನಧಿಕೃತ ಕಟ್ಟಡಗಳನ್ನು 2021ರ ಜುಲೈ ಅಂತ್ಯದಲ್ಲಿ ತೆರವುಗೊಳಿಸಿದ್ದರು. ಎರಡನೇ ಹಂತದ ಕಾರ್ಯಾಚರಣೆಯಲ್ಲಿ ದೊಡ್ಡಬೆಟ್ಟಹಳ್ಳಿಯಲ್ಲಿ 16 ಕಟ್ಟಡಗಳನ್ನು ಹಾಗೂ ಮೂರನೇ ಹಂತದಲ್ಲಿ ಸೋಮಶೆಟ್ಟಿಹಳ್ಳಿಯಲ್ಲಿ ಏಳು ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ. ಇದುವರೆಗೆ 45 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಇನ್ನೂ 1,753 ಕಟ್ಟಡಗಳು ಹಾಗೆಯೇ ಇವೆ. ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ಇವೆಲ್ಲವನ್ನೂ ತೆರವುಗೊಳಿಸಬೇಕಾಗುತ್ತದೆ ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.

ಈ ಬಡಾವಣೆಗೆ ಗೊತ್ತುಪಡಿಸಿದ ಜಾಗದಲ್ಲಿ 2021ರ ಫೆಬ್ರುವರಿವರೆಗೆ ನಡೆಸಲಾದ ಡ್ರೋನ್‌ ಸರ್ವೆ ಹಾಗೂ ಉಪಗ್ರಹ ಚಿತ್ರ ಆಧರಿತ ಸಮೀಕ್ಷೆಯಲ್ಲಿ 735 ಅನಧಿಕೃತ ಕಟ್ಟಡಗಳನ್ನು ಬಿಡಿಎ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಜುಲೈ ವೇಳೆಗೆ ಅನಧಿಕೃತ ಕಟ್ಟಡಗಳ ಸಂಖ್ಯೆ 1798ಕ್ಕೆ ಹೆಚ್ಚಳವಾಗಿದೆ. ಆರ್‌ಸಿಸಿ ಕಟ್ಟಡಗಳನ್ನು ಶಾಶ್ವತ ಕಟ್ಟಡಗಳೆಂದು, ಶೆಡ್‌ಗಳನ್ನು ತಾತ್ಕಾಲಿಕ ಕಟ್ಟಡಗಳೆಂದು ಬಿಡಿಎ ಅಧಿಕಾರಿಗಳು ವರ್ಗೀಕರಿಸಿದ್ದಾರೆ.

2018ರ ಆಗಸ್ಟ್‌ 3ರ ಬಳಿ ನಿರ್ಮಾಣವಾದ ಅನಧಿಕೃತ ಕಟ್ಟಡಗಳ ಕುರಿತು ವರದಿ ನೀಡಲೆಂದು ಸುಪ್ರೀಂಕೋರ್ಟ್‌ ನ್ಯಾ.ಎ.ವಿ.ಚಂದ್ರಶೇಖರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಬಿಡಿಎ ಅಧಿಕಾರಿಗಳು ಗುರುತಿಸಿರುವ ಅನಧಿಕೃತ ಕಟ್ಟಡಗಳ ಪಟ್ಟಿಯಲ್ಲಿರುವ ಕಟ್ಟಡಗಳ ಮಾಲೀಕರಲ್ಲಿ ಕೆಲವರು ನ್ಯಾ.ಚಂದ್ರಶೇಖರ ಸಮಿತಿ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ದಾಖಲೆಗಳನ್ನು ಸಲ್ಲಿಸಿರುವ ಮಾಲೀಕರ ಕಟ್ಟಡಗಳನ್ನು ಉಳಿಸಿಕೊಳ್ಳಬೇಕೇ ಅಥವಾ ಕೆಡವಬೇಕೇ ಎಂಬ ಬಗ್ಗೆ ನ್ಯಾ.ಚಂದ್ರಶೇಖರ ನೇತೃತ್ವದ ಸಮಿತಿಯೇ ಶಿಫಾರಸು ಮಾಡುತ್ತದೆ.

‘ಈ ಬಡಾವಣೆಗೆ ಗೊತ್ತುಪಡಿಸಿದ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ಕಟ್ಟಿದವರು ನ್ಯಾ.ಚಂದ್ರಶೇಖರ ನೇತೃತ್ವದ ಸಮಿತಿ ಮುಂದೆ ಅರ್ಜಿ ಸಲ್ಲಿಸಿದ್ದರೆ, ಅಂತಹ ಕಟ್ಟಡಗಳನ್ನು ಸದ್ಯ ನಾವು ಕೆಡಹುವುದಿಲ್ಲ. ಅವುಗಳನ್ನು ಕೆಡಹುವ ಬಗ್ಗೆ ಸಮಿತಿಯೇ ಶಿಫಾರಸು ಮಾಡಲಿದೆ. ಆದರೆ, ಸಮಿತಿಗೆ ಅರ್ಜಿ ಸಲ್ಲಿಸದ ಅನಧಿಕೃತ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ನೆಲಸಮಗೊಳಿಸಲೇಬೇಕಾಗುತ್ತದೆ’ ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಶಾಂತರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ವರ್ಷದಿಂದ ಈಚೆಗೆ ಅನೇಕರು ತರಾತುರಿಯಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಕೆಲವರು ಈ ಹಿಂದೆ ನಿರ್ಮಾಣ ಕಾರ್ಯ ಆರಂಭಿಸಿದ್ದ ಕಟ್ಟಡಗಳ ಕೆಲಸವನ್ನು ಮುಂದುವರಿಸಿದ್ದಾರೆ. ಹಾಗಾಗಿ ಅನಧಿಕೃತ ಕಟ್ಟಡಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಲೇ ಸಾಗುತ್ತಿದೆ. ಬಡಾವಣೆಗೆ ಗೊತ್ತುಪಡಿಸಿದ ಜಾಗದಲ್ಲಿ 2018ರ ಆ.3ರ ನಂತರ ನಿರ್ಮಿಸಿದ ಯಾವುದೇ ಕಟ್ಟಡವನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ 2021ರ ಜುಲೈ 14ರಂದು ಸ್ಪಷ್ಟಪಡಿಸಿದೆ. ಹಾಗಾಗಿ, ಯಾರದ್ದೋ ಮಾತು ಕೇಳಿ ತರಾತುರಿಯಲ್ಲಿ ಕಟ್ಟಡ ನಿರ್ಮಿಸುವವರು ಅದಕ್ಕೆ ಬೆಲೆ ತೆರಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ಈ ಬಡಾವಣೆಗೆ ಬಿಡಿಎ 2008ರ ಡಿಸೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಪೀಠವು 2018ರ ಆಗಸ್ಟ್‌ 3ರಂದು ನಿರ್ದೇಶನ ನೀಡಿತ್ತು. ಪ್ರಾಥಮಿಕ ಅಧಿಸೂಚನೆ ಪ್ರಕಟವಾದ 10 ವರ್ಷದ ಬಳಿಕ 2018ರ ನ.1ರಂದು ಬಿಡಿಎ ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಅಂತಿಮ ಅಧಿಸೂಚನೆ ಪ್ರಕಟಿಸಿತ್ತು.

ಅಂಕಿ ಅಂಶ
* 3,546 ಎಕರೆ 12 ಗುಂಟೆ‌:
ಶಿವರಾಮ ಕಾರಂತ ಬಡಾವಣೆಗಾಗಿ ಬಿಡಿಎ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಒಟ್ಟು ಜಾಗ
* 17:ಗ್ರಾಮಗಳಲ್ಲಿ ಈ ಬಡಾವಣೆಗೆ ಜಾಗ ಬಳಸಿಕೊಳ್ಳಲಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT