‘ಕೆರೆ ಅಭಿವೃದ್ಧಿಗೆ ನಿರಾಸಕ್ತಿ’

ಶುಕ್ರವಾರ, ಜೂಲೈ 19, 2019
26 °C

‘ಕೆರೆ ಅಭಿವೃದ್ಧಿಗೆ ನಿರಾಸಕ್ತಿ’

Published:
Updated:
Prajavani

ಮಹದೇವಪುರ: ಮಹದೇವಪುರ ಕ್ಷೇತ್ರದ ಪ್ರಮುಖ ಕೆರೆಗಳ ಪೈಕಿ ಒಂದಾಗಿರುವ ಸಿದ್ದಾಪುರ ಕೆರೆಯು ಕಳೆ ಸಸ್ಯಗಳಿಂದ ಹಾಗೂ ಕೊಳಚೆ ನೀರಿನಿಂದ ಕಲುಷಿತಗೊಂಡಿದೆ.

ಹಗದೂರು ಹಾಗೂ ದೊಡ್ಡನೆಕ್ಕುಂದಿ ವಾರ್ಡ್‌ಗಳ ಗಡಿಭಾಗದಲ್ಲಿರುವ ಈ ಕೆರೆಯು ಸಂಪೂರ್ಣವಾಗಿ ಒತ್ತುವರಿಯಾಗಿದೆ. ಕೆರೆಯ ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ಸ್ಥಳೀಯ ಕೆಲವರು ಶೆಡ್‌ಗಳನ್ನು ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಲಕ್ಷ್ಮೀಪತಿ ಆರೋಪಿಸಿದರು.

ಜಲಮೂಲದ ಸುತ್ತಮುತ್ತ ತಂತಿ ಬೇಲಿಯನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಗಮನ ಹರಿಸಿಲ್ಲ ಎಂದು ಅವರು ದೂರಿದರು.

ಅಕ್ಕಪಕ್ಕದ ಅಪಾರ್ಟ್‌ಮೆಂಟ್ ಸಮುಚ್ಚಯಗಳ ನಿವಾಸಿಗಳು ಕಸವನ್ನು ಕೆರೆದಂಡೆಯಲ್ಲಿ ಎಸೆದು ಹೋಗುತ್ತಿದ್ದಾರೆ. ಈ ಕಸ ನೀರಿಗೆ ಸೇರಿ ದುರ್ನಾತ ಬರುತ್ತಿದೆ. ಈ ಬಗ್ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂತೋಷ ಆಗ್ರಹಿಸಿದರು.

ಕೆರೆಯ ತುಂಬ ಕಳೆ ರಾಶಿ: ಜಲಮೂಲದ ಶೇ 60ರಷ್ಟು ಭಾಗದಲ್ಲಿ ಕಳೆ ಸಸ್ಯಗಳು ಬೆಳೆದುಕೊಂಡಿವೆ. ಅದರಲ್ಲಿಯೂ ಮುಳ್ಳಿನ ಗಿಡಗಳು ತುಂಬಿಕೊಂಡಿವೆ. ಹೇರಳ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಹೀಗಾಗಿ ಕೆರೆಯನ್ನು ತುರ್ತಾಗಿ ಶುಚಿಗೊಳಿಸುವ ಕಾರ್ಯವೂ ನಡೆಯಬೇಕು’ ಎಂದು ಸ್ಥಳೀಯರಾದ ನಾರಾಯಣ ಆಗ್ರಹಿಸಿದರು.

‘ಹತ್ತು ವರ್ಷಗಳ ಹಿಂದೆ ಕೆರೆಯಲ್ಲಿ ಶುದ್ಧವಾದ ನೀರು ಇರುತ್ತಿತ್ತು. ಆಗ ಅನೇಕ ವಲಸೆ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತಿದ್ದವು. ಆದರೆ, ಈಗ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿರುವುದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಪಕ್ಷಿಗಳು ಇಲ್ಲಿಗೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಿದ್ದಾಪುರ ಕೆರೆಗೆ ಸಂಪರ್ಕವಿರುವ 5–6 ರಾಜಕಾಲುವೆಗಳು ಒತ್ತುವರಿಗೊಂಡು ಸಣ್ಣ ಚರಂಡಿಗಳಷ್ಟಾಗಿವೆ. ಎಇಸಿಎಸ್ ಲೇಔಟ್ ಕಡೆಯಿಂದ ಕೆರೆಗೆ ಸಂರ್ಪಕ ಇರುವ ರಾಜಕಾಲುವೆ ಸಂಪೂರ್ಣ ಒತ್ತುವರಿಯಾಗಿದೆ. ಮಳೆ ಬಂದಾಗ ತೂಬರಹಳ್ಳಿ, ಸಿದ್ದಾಪುರ ಗ್ರಾಮದಲ್ಲಿನ ಮನೆಗಳಿಗೆ ಸಾಕಷ್ಟು ನೀರು ತುಂಬಿಕೊಂಡು ಸ್ಥಳೀಯರು ಪರದಾಡುವಂತಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ರಘುರಾಮ್ ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !