ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ ಸಾಹಿತ್ಯ ಶ್ರೀಮಂತಿಕೆಯ ತಾಣ

Last Updated 28 ಫೆಬ್ರುವರಿ 2018, 8:28 IST
ಅಕ್ಷರ ಗಾತ್ರ

ಅಫಜಲಪುರ: ‘ವೇದಗಳ ಕಾಲದಿಂದ ಬಸವಾದಿ ಶರಣರ ವರೆಗೆ, ಕಡಕೋಳದ ಮಡಿವಾಳಪ್ಪನವರ ಕಾಲದಿಂದ ಇಂದಿನವರೆಗೆ ಸಾಂಸ್ಕೃತಿಕ ಶ್ರೀಮಂತಿಕೆಯ ತಾಣವಾಗಿ ಅಫಜಲಪುರ ಹೆಸರಾಗಿದೆ’ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪುಗೆರೆ ಸೋಮಶೇಖರ ಹೇಳಿದರು.

ತಾಲ್ಲೂಕಿನ ಚಿನ್ಮಯಗಿರಿಯಲ್ಲಿ ಶ್ರೀ ಕಡಕೋಳ ಮಡಿವಾಳಪ್ಪನವರ ವೇದಿಕೆಯಲ್ಲಿ ಮಂಗಳವಾರ ನಡೆದ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘12ನೇ ಶತಮಾನದ ವಚನಕಾರರು ವೈಚಾರಿಕ ಚಳವಳಿಗೆ ನಾಂದಿ ಹಾಡಿದ್ದರು. ನಂತರ ಕಡಕೋಳ ಮಡಿವಾಳಪ್ಪನಂಥವರು ತತ್ವ ಪದಗಳ ಮುಖಾಂತರ ವೈಚಾರಿಕ ಚಿಂತನೆಗೆ ಮೆರಗು ತಂದರು. ವಚನಕಾರರ ಚಳವಳಿಯ ನಾಡಿನಲ್ಲಿರುವ ನೀವು ಪುಣ್ಯವಂತರು. ವೈಚಾರಿಕ ಚಿಂತನೆಗಳಿಗೆ ಸಾಹಿತ್ಯ ಸಮ್ಮೇಳನಗಳು ಪೂರಕವಾಗುತ್ತವೆ’ ಎಂದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಾಜಿ ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ಸಾಹಿತ್ಯ ಸಮ್ಮೇಳನಗಳು ಜನರ ಬದುಕಿನ ಜೀವನಾಡಿಯಾಗಬೇಕು. ನಮ್ಮ ತಾಲ್ಲೂಕಿಗೆ ಅಂಟಿಕೊಂಡಿರುವ ಭೀಮಾ ನದಿಯ ಕಳಂಕ ಅಳಿಸಿ ಹೋಗಬೇಕು. ಮಹಾಜನ ವರದಿ ಯಥಾವತ್ತಾಗಿ ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಚಿನ್ಮಯಗಿರಿಯ ಮಹಾಂತ ಮಠದ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ‘ಕನ್ನಡ ನಾಡು ಜಗತ್ತಿಗೆ ಏನು ಕೊಟ್ಟಿದೆ ಎಂಬುದು ಪ್ರತಿಯೊಬ್ಬರು ಅರಿಯಬೇಕು. 12ನೇ ಶತಮಾನದ ಬಸವಣ್ಣನವರ ಪುತ್ಥಳಿಯನ್ನು ಲಂಡನ್‌ ನಗರದಲ್ಲಿ ಸ್ಥಾಪಿಸಿದ್ದು ನಮ್ಮ ರಾಜ್ಯಕ್ಕೆ ಹೆಮ್ಮೆ ಎನಿಸುತ್ತದೆ. ಶರಣರು ನಂತರ ತತ್ವಪದಕಾರರು ಸಾಹಿತ್ಯ ಹಾಗೂ ಸಮಾಜದ ಜಾಗೃತಿಗಾಗಿ ಹಗಲಿರುಳು ಶ್ರಮಿಸಿದರು. ಪ್ರತಿಯೊಬ್ಬರು ಬೆಳಿಗ್ಗೆ ಎದ್ದು ದೇಶ ಕಾಯುವ ಸೈನಿಕರನ್ನು ಸ್ಮರಿಸಿ ಅವರಿಗೆ ಶಕ್ತಿ ಕೊಡು ತಾಯಿ ಎಂದು ಭಾರತಾಂಬೆಯನ್ನು ಬೇಡಿಕೊಳ್ಳಬೇಕು’ ಎಂದರು.

‘ಪಠ್ಯಪುಸ್ತಕಗಳಲ್ಲಿ ಪ್ರಗತಿಪರ ರೈತರ ಚರಿತ್ರೆಯನ್ನು ಹಾಕಿ ಮಕ್ಕಳು ಅದರಿಂದ ಸ್ಫೂರ್ತಿ ಪಡೆಯುವಂತಾಗಬೇಕು’ ಎಂದು ಆಶಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. ತಾ.ಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ ಪುಸ್ತಕ ಮಳಿಗೆ ಉದ್ಘಾಟಿಸಿದರು. ಡಾ.ಎಂ.ಎಸ್‌ ಜೋಗದ್, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಮಾಲೀಕಯ್ಯ ಗುತ್ತೇದಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕಸಾಪ ಅಧ್ಯಕ್ಷ ಡಿ.ಎಂ ನದಾಫ್ ಪರಿಷತ್ ಧ್ವಜಾರೋಹಣ ಮಾಡಿದರು. ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ತಹಸೀಲ್ದಾರ್‌ ಇಸ್ಮಾಯಿಲ್ ಮುಲ್ಕಿಸಿಪಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸಮನ್ವಾಯಧಿಕಾರಿ ಸುಧಾಕರ ನಾಯಕ, ಡಾ. ಹನುಮಂತರಾವ್ ದೊಡ್ಮನಿ, ಸಿದ್ದು ಶಿರಸಗಿ, ಮಹಾಂತಪ್ಪ ಅವರಾದಿ, ಶಿವಶರಣಪ್ಪ ಹೀರಾಪುರ, ಶಿವಶರಣಪ್ಪ ಮಹಾಂತಪುರ, ಬಸವರಾಜ ಸಪ್ಪನಗೋಳ, ವೀರಭದ್ರಪ್ಪ ದೊಡ್ಮನಿ, ಗುರಣ್ಣ ಜಮಾದಾರ, ಸಿದ್ದಾರ್ಥ ಬಸರಿಗಿಡದ, ಬಸವರಾಜ ಚಾಂದಕವಟೆ, ಸುರೇಶ ಅವಟೆ, ಶಿವಾನಂದ ಪೂಜಾರಿ ಬಳೂರ್ಗಿ, ಮಹೇಶ ಅಂಜುಟಗಿ, ಶಿವಕುಮಾರ ನಾಟೀಕಾರ, ಪಂಡಿತ ಸೂಲೇಕರ, ರಾಜು ಉಕ್ಕಲಿ, ಗುರಣ್ಣ ಲಿಂಗಶೆಟ್ಟಿ, ಶಿವಾನಂದ ಪೂಜಾರಿ, ಶ್ರೀಮಂತ ಬಿರಾದಾರ, ಮಡಿವಾಳಪ್ಪ ನಾಗರಳ್ಳಿ, ದೌಲತ್‌ರಾವ ಪಾಟೀಲ, ಬಸವರಾಜ ಬೂಸನೂರ, ವಿಜಯಕುಮಾರ ಮಾಸ್ತರ್, ಬಾಬುಮಿಯಾ ಪೂಲಾರಿ ಇದ್ದರು. ಮಲ್ಲಿಕಾರ್ಜುನ ಚವಡಿಹಾಳ ನಿರೂಪಿಸಿದರು. ರಾಹುಲ್ ಸಿಂಪಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT