ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠ-ಮಂದಿರಕ್ಕಿಂತ ಮನಸು ಕಟ್ಟಿಕೊಳ್ಳಿ :ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವ
Last Updated 14 ಜನವರಿ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆ, ಮಠ, ಮಂದಿರಕ್ಕಿಂತ ಮನಸನ್ನು ಕಟ್ಟಿಕೊಳ್ಳಿ‌. ಅದರಲ್ಲಿಯೇ ಬದುಕಿನ ಏಳಿಗೆ ಇದೆ’ ಎಂದು ಚಿತ್ರದುರ್ಗ ಶಿವಯೋಗಿ ಸಂಸ್ಥಾನ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಯುವಕರ ಮನದಲ್ಲಿ ಜ್ಞಾನದ ಜೊತೆ ವಿಜ್ಞಾನ ಇದೆ‌. ಹೀಗಾಗಿ ಅವರಿಗೆ ವೈಜ್ಞಾನಿಕ ಧರ್ಮ ಕೊಡಬೇಕಾದ ಅಗತ್ಯವಿದೆ. ಸಿದ್ಧರಾಮೇಶ್ವರರ ಧರ್ಮ ವೈಜ್ಞಾನಿಕ ಧರ್ಮ. ಅವರ ವಚನಗಳಲ್ಲಿ ವೈಜ್ಞಾನಿಕತೆ ಕಾಣಬಹುದು’ ಎಂದರು.

ಸಾಹಿತಿ ಪ್ರೊ.ಎಫ್.ಎಸ್. ಕರಿದುರುಗನವರ, ‘ಜ್ಯೋತಿಷ ನಂಬಬೇಡಿ. ಅದು ಅವರವರ ಹೊಟ್ಟೆಪಾಡಿಗೆ ಮಾಡಿಕೊಂಡಿರುವುದು‌‌ ದುಡಿದು ತಿನ್ನಿ ಎಂದು ಸಿದ್ಧರಾಮೇಶ್ವರರು ಸಾರಿದರು’ ಎಂದರು.

‘ಎಲ್ಲ ಪಾಪಗಳನ್ನು ಮಾಡಿ, ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿದರೆ ಆ ಪಾಪ ಪರಿಹಾರ ಆಗುವುದಿಲ್ಲ. ಎಲ್ಲರನ್ನೂ ಗೌರವಿಸಬೇಕು, ಸನ್ಮಾರ್ಗದಲ್ಲಿ ನಡೆಯಬೇಕು ಎಂದು ವಚನಗಳಲ್ಲಿ ಹೇಳಿದ್ದಾರೆ’ ಎಂದರು.

‘ಬೋವಿ ಸಮಾಜದ ವಡ್ಡರನ್ನು ಕೀಳಾಗಿ ಕಾಣಲಾಗುತ್ತದೆ. ಆದರೆ, ವಿಶ್ವದ ಎಲ್ಲ ಕೋಟೆಗಳನ್ನು, ದೆಹಲಿಯ ಸಂಸತ್ತನ್ನು, ಬೆಂಗಳೂರಿನ ವಿಧಾನಸೌಧವನ್ನು, ಕೋಟ್ಯಂತರ ದೇಗುಲ, ಚರ್ಚ್‌ಗಳನ್ನು ಕಟ್ಟಿದವರು ಬೋವಿಗಳು’ ಎಂದು ಹೇಳಿದರು.

‘ಸರ್ಕಾರ ಬೋವಿ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಅನುದಾನವನ್ನೂ ಕೊಟ್ಟಿಲ್ಲ. ನಮ್ಮ ಕೂಗು ಸರ್ಕಾರಕ್ಕೆ ಮುಟ್ಟಿಸುವ ಅವಶ್ಯಕತೆ ಇದೆ’ ಎಂದರು.

ಬೋವಿ ಸಮಾಜದ ಕಾರ್ಯಾಧ್ಯಕ್ಷ ರವಿ ಮಾಕಳಿ, ‘ಎಲ್ಲರಿಗೂ ಆಹ್ವಾನ ನೀಡಿದ್ದರೂ ನಮ್ಮ ಸಮುದಾಯದ ಒಬ್ಬ ಜನಪ್ರತಿನಿಧಿಯೂ ಕಾರ್ಯಕ್ರಮಕ್ಕೆ ಬಂದಿಲ್ಲ‌. ನಮ್ಮ ಸಮುದಾಯದ ಬಗ್ಗೆ ಸರ್ಕಾರಕ್ಕೆ ಇರುವ ಅಸಡ್ಡೆಯನ್ನು ಇದು ತೋರಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT