ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಎಸ್ಐಟಿ ವಶಕ್ಕೆ

Last Updated 8 ಜುಲೈ 2019, 17:57 IST
ಅಕ್ಷರ ಗಾತ್ರ

ಬೆಂಗಳೂರು: ಐಎಂಎ ಸಮೂಹ ಕಂಪನಿಗೆ ‘ಕ್ಲೀನ್‌ ಚಿಟ್‌’ ನೀಡಲು ₹1.5 ಕೋಟಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್‌ ಅವರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರಾದ ರಾಜ್ಯದ ಎರಡನೇ ಅಧಿಕಾರಿ ವಿಜಯಶಂಕರ್‌. ಕಂಪನಿಯ ಪರ ವರದಿ ಕೊಡಲು ₹ 4.5 ಕೋಟಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಅವರನ್ನು ಶುಕ್ರವಾರ ಬಂಧಿಸಲಾಗಿದೆ.

ಐಎಂಎ ವಂಚನೆ ಕುರಿತು ಕೆಪಿಐಡಿ ಕಾಯ್ದೆಯ ಅನ್ವಯ ವಿಚಾರಣೆ ನಡೆಸುವ ಅಧಿಕಾರ ಜಿಲ್ಲಾಧಿಕಾರಿಗೆ ಇದ್ದರೂ, ತಮ್ಮ ಜವಾಬ್ದಾರಿ ನಿರ್ವಹಿಸದೆ ಉಪ ವಿಭಾಗಾಧಿಕಾರಿಗೆ ಹೊಣೆಗಾರಿಕೆ ಹೊತ್ತು ಹಾಕಿದ್ದರು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಆನಂತರ, ಐಎಂಎ ವ್ಯವಹಾರ ಕುರಿತು ವಿಚಾರಣೆ ನಡೆಸಲು ಎಸಿ ನೇತೃತ್ವದಲ್ಲಿ2018ರ ಜೂನ್‌ನಲ್ಲಿ ದೂರು ‍ಪ್ರಾಧಿಕಾರ ರಚಿಸಲಾಗಿತ್ತು. ಅವರು ಫೆಬ್ರುವರಿಯಲ್ಲಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು.

‘ಸದರಿ ಕಂಪನಿ ವಿರುದ್ಧ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದು ವಿಜಯಶಂಕರ್‌ ಟಿಪ್ಪಣಿ ಹಾಕಿ, ಏಪ್ರಿಲ್‌ 8ರಂದು ಎಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದರು.

ಕಂಪನಿ ಪರವಾಗಿ ಈ ಟಿಪ್ಪಣಿ ಹಾಕಲು ವಿಜಯಶಂಕರ್‌ ಎರಡು ದಿನಗಳ ಮೊದಲು ಅಂದರೆ, ಏಪ್ರಿಲ್‌ 6ರಂದು ₹ 1.5 ಕೋಟಿ ಲಂಚ ಪಡೆದಿದ್ದರು.

ಈಹಣವನ್ನು ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರಿಗೆ ಕೊಟ್ಟು ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ಫ್ಲ್ಯಾಟ್‌ ಹಾಗೂ ನಿವೇಶನ ಖರೀದಿಸಲುಉದ್ದೇಶಿಸಿದ್ದರು ಎಂದೂ ಮೂಲಗಳು ಹೇಳಿವೆ.

ಎಸ್‌ಐಟಿ ಮುಖ್ಯಸ್ಥ ಬಿ.ಆರ್‌.ರವಿಕಾಂತೇಗೌಡ, ಅಪರಾಧ ವಿಭಾಗದ ಡಿಸಿಪಿ ಗಿರೀಶ್‌ ನೇತೃತ್ವದಲ್ಲಿ ಎಸ್‌ಐಟಿ ಅಧಿಕಾರಿಗಳು ಜಿಲ್ಲಾಧಿಕಾರಿಯನ್ನು ಬಂಧಿಸಿದ್ದಾರೆ.

ಸೋಮವಾರ ಬೆಳಿಗ್ಗೆ ವಿಜಯಶಂಕರ್‌ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಸಂಜೆವರೆಗೂ ನಡೆದ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಯಿತು.

ಎಸ್‌ಐಟಿ ಅಧಿಕಾರಿಗಳು ವಿಜಯಶಂಕರ್‌ ಮನೆಯನ್ನು ಶೋಧಿಸುತ್ತಿದ್ದಾರೆ. ಜಿಲ್ಲಾಧಿಕಾರಿಯಿಂದ ಹಣ ಪಡೆದಿದ್ದಾರೆ ಎನ್ನಲಾದ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹಣ ವಶ‍ಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿರುವ ಐಎಂಎ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ಕಳುಹಿಸಿದ್ದ ಆಡಿಯೊ ರೆಕಾರ್ಡ್‌ನಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಹಣ ನೀಡಿರುವುದಾಗಿ ಹೇಳಿದ್ದರು.

ಈ ಆಡಿಯೊದ ಸತ್ಯಾಸತ್ಯತೆಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪ್ರಕರಣ ಎಸಿಬಿಗೆ ವರ್ಗ

ಜಿಲ್ಲಾಧಿಕಾರಿ ವಿಜಯಶಂಕರ್‌ ಹಾಗೂ ನಾಗರಾಜ್‌ ಅವರ ಲಂಚ ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹಸ್ತಾಂತರಿಸಲಾಗುತ್ತಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಈ ಪ್ರಕರಣಗಳ ತನಿಖೆ ನಡೆಯಬೇಕಿರುವುದರಿಂದ ಎಸಿಬಿಗೆ ವರ್ಗಾಯಿಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಅಮಾನತಿಗೆ ಕ್ರಮ

ಎಸ್‌ಐಟಿ ವಶದಲ್ಲಿರುವ ನಾಗರಾಜ್‌ ಅವರ ಅಮಾನತಿಗೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಯಾವುದೇ ಸರ್ಕಾರದ ಅಧಿಕಾರಿ ಬಂಧಿತರಾಗಿ ಎರಡು ದಿನ ಪೊಲೀಸ್‌ ಅಥವಾ ಪೊಲೀಸರ ವಶದಲ್ಲಿ ಇದ್ದರೆ ಅಮಾನತಿಗೆ ಅರ್ಹರಾಗಿರುತ್ತಾರೆ.

ವಿಜಯಶಂಕರ್‌ ಅವರನ್ನು ಅಮಾನತು ಮಾಡುವಕುರಿತು ಮಂಗಳವಾರ ತೀರ್ಮಾನ ಮಾಡಲಾಗುವುದು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT