ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಮಹೋತ್ಸವ ಸಂಭ್ರಮದಲ್ಲಿ ಎಸ್‌ಜೆಪಿ

Last Updated 19 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಪೂರ್ವದಿಂದಲೇ ವೃತ್ತಿ ಶಿಕ್ಷಣ ತರಬೇತಿ ನೀಡುತ್ತಿರುವ ಬೆಂಗಳೂರಿನ ಕೆ.ಆರ್‌. ವೃತ್ತದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ (ಎಸ್‌ಜೆಪಿ) ಸಿನಿಮಾಟೋಗ್ರಫಿ ಮತ್ತು ಸೌಂಡ್‌ ಎಂಜಿನಿಯರಿಂಗ್‌ ವಿಭಾಗ ಆರಂಭಗೊಂಡು 75 ವಸಂತಗಳು ಸಂದಿವೆ. ಸಿನಿಮಾಟೋಗ್ರಫಿ ಮತ್ತು ಸೌಂಡ್‌ ಎಂಜಿನಿಯರಿಂಗ್‌ನಲ್ಲಿ ತರಬೇತಿ ನೀಡುತ್ತಿದ್ದ ಏಷ್ಯಾ ಖಂಡದ ಮೊದಲ ಕಾಲೇಜು ‘ಎಸ್‌ಜೆಪಿ’ ಈಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.

ಮೈಸೂರು ಸಂಸ್ಥಾನದಲ್ಲಿ ಹೊಸದಾಗಿ ಆರಂಭವಾದ ಕೈಗಾರಿಕೆಗಳಲ್ಲಿ ಕೆಲಸ ಮಾಡುವಯುವ ಪೀಳಿಗೆಗೆ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಬೆಂಗಳೂರಿನಲ್ಲಿ ಆರಂಭವಾದ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಸೌಂಡ್‌ ಮತ್ತು ಸಿನಿಮಾಟೋಗ್ರಫಿ ಸಂಸ್ಥೆಗೆ ಈಗ 75 ವರ್ಷಗಳ ಹರೆಯ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಂದರೆ 1943ರಲ್ಲಿ ಆರಂಭವಾದ ಈ ಕಾಲೇಜ್‌ ಸಿನಿಮಾಟೋಗ್ರಫಿ ಮತ್ತು ಸೌಂಡ್‌ ಎಂಜಿನಿಯರಿಂಗ್‌ ಕಲಿಸುವಏಷ್ಯಾ ಖಂಡದ ಮೊಟ್ಟ ಮೊದಲ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿದೆ.

(ಎಸ್‌ಜೆಪಿ ಹಳೆಯ ವಿದ್ಯಾರ್ಥಿಗಳಾದ ವಿ.ಕೆ. ಮೂರ್ತಿ ಮತ್ತು ಗೋವಿಂದ ನಿಹಲಾನಿ(ಸಂಗ್ರಹ ಚಿತ್ರ))

ದಾದಾ ಸಾಹೇಬ್‌ ಪಾಲ್ಕೆ ಪುರಸ್ಕೃತ ವಿ.ಕೆ. ಮೂರ್ತಿ, ಗೋಂವಿಂದ್‌ ನಿಹಲಾನಿ, ಕೊಡಕ್‌ ಕೃಷ್ಣನ್‌, ಘನಶ್ಯಾಮ್‌ ಮಹಾಪಾತ್ರ, ಆರ್‌.ಎನ್‌. ಜಯಗೋಪಾಲ, ಆರ್‌.ಎನ್‌. ಕೃಷ್ಣಪ್ರಸಾದ್‌, ಬಿ.ಸಿ. ಗೌರಿಶಂಕರ್‌, ಬಿ.ಸಿ. ಬಸವರಾಜು, ಬೆಂಗಳೂರು ನಾಗೇಶ್‌ ಮತ್ತು ಜೇಮಿನ್‌ ರಾಜೇಂದ್ರನ್‌ ಅವರಂತಹ ನೂರಾರು ಸಿನಿಮಾಟೋಗ್ರಾಫರ್‌ಗಳು ಇದೇ ಕಾಲೇಜಿನ ಕುಡಿಗಳು.

ಕೆ.ಆರ್‌. ಸರ್ಕಲ್‌ ಬಳಿಯ ಕಟ್ಟಡದಲ್ಲಿ 1943 ಆಗಸ್ಟ್‌ 2ರಂದು ಕಾರ್ಯಾರಂಭ ಮಾಡಿದ ಸಂಸ್ಥೆ ಮುಂದೆ ‘ಎಸ್‌ಜೆಪಿ‘ ಎಂದೇ ಮನೆಮಾತಾಯಿತು.ಮೈಸೂರು ಅರಸರ ದೂರದೃಷ್ಟಿ ಮತ್ತು ತಂತ್ರಜ್ಞಾನ ಪ್ರೀತಿಯ ಪ್ರತೀಕವಾಗಿರುವ ಸಂಸ್ಥೆ ಏಳೂವರೆ ದಶಕಗಳಲ್ಲಿ ನಾಡಿನ ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ ಆದ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿ ನಿಂತಿದೆ.ಮೆಟ್ರಿಕ್‌ ನಂತರ ಡಿಪ್ಲೊಮಾ ಸೇರುವ ವಿದ್ಯಾರ್ಥಿಗಳಿಗೆ 13 ತಾಂತ್ರಿಕ ವಿಷಯಗಳನ್ನು ಇಲ್ಲಿ ಕಲಿಸಲಾಗುತ್ತಿದೆ.

ಎರಡನೇ ಮಹಾಯುದ್ಧದ ನಂಟು

ಜನ್ಮತಾಳಿದ್ದು ಎಸ್‌ಜೆಪಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ.ವೈರ್‌ಲೆಸ್‌ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಕಾಲ. ಸೈನ್ಯದ ಎರಡು ತಂಡಗಳನ್ನು ಶ್ರೀ ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ಸಂಸ್ಥೆಗೆ ತರಬೇತಿಗೆಂದು ಕಳಿಸಲಾಗಿತ್ತು. ಅದಕ್ಕಾಗಿ ಸಿನಿಮಾ ಸ್ಟುಡಿಯೊ, ರೇಡಿಯೊ ಪ್ರಯೋಗಶಾಲೆಗಳನ್ನು ಆಧುನೀಕರಣಗೊಳಿಸಲಾಯಿತು.

ಸಿನಿಮಾ ಪ್ರಭಾವಿ ಸಂವಹನ ಮಾಧ್ಯಮವಾಗಿ ಬೆಳೆಯುತ್ತಿದ್ದ ಆ ಸಂದರ್ಭದಲ್ಲಿ ಮೈಸೂರು ಅರಸರಿಗೆ ಸಿನಿಮಾದ ಪರಿಚಯ ಚೆನ್ನಾಗಿತ್ತು. ನವರಾತ್ರಿ ಆಚರಣೆ, ಆನೆಗಳನ್ನು ಪಳಗಿಸುವ ಖೆಡ್ಡಾ ಕಾರ್ಯಾಚಾರಣೆ ಕುರಿತು ಕಿರು ಚಿತ್ರಗಳನ್ನು ನಿರ್ಮಿಸಲು ಅರಸರು ಪ್ರೋತ್ಸಾಹ ನೀಡಿದರು.

ಮೈಸೂರು ಸಂಸ್ಥಾನದ ನಿರಂತರ ಪ್ರೋತ್ಸಾಹದಿಂದಾಗಿ ಸಂಸ್ಥೆಯಲ್ಲಿ ಸಿನಿಮಾಟೋಗ್ರಫಿ ಜತೆ ಧ್ವನಿಗ್ರಹಣ ಎಂಜಿನಿಯರಿಂಗ್‌ ಕೋರ್ಸ್‌ ಸೇರಿಕೊಂಡಿತು. ‘ಮೋಷನ್‌ ಪಿಕ್ಚರ್‌ ಟಿಕ್ನಿಕ್‌‘ ಎಂದು ಕರೆಯಲಾಗುವ ಈ ವಿಭಾಗದಲ್ಲಿಯೂ ಪಠ್ಯಕ್ರಮ ಅಳವಡಿಸಲಾಯಿತು. ಸಿನಿಮಾ ಪ್ರೊಜೆಕ್ಷನ್‌ ಕುರಿತು ತರಬೇತಿ ಆರಂಭವಾಯಿತು. ಧ್ವನಿಗ್ರಹಣ ಮತ್ತು ಛಾಯಾಗ್ರಹಣದಲ್ಲಿ ಅತ್ಯುತ್ತಮ ತರಬೇತಿ ನೀಡುತ್ತಿದ್ದ ಏಕೈಕ ಸಂಸ್ಥೆ ಎಂಬ ಕೀರ್ತಿ ದೇಶದಲ್ಲೆಡೆ ಪಸರಿಸಿತು.

ದೇಶದ ನಾನಾ ಭಾಗಗಳಿಂದ ತರಬೇತಿಗಾಗಿ ವಿದ್ಯಾರ್ಥಿಗಳು ಹುಡುಕಿಕೊಂಡು ಬೆಂಗಳೂರಿಗೆ ಬರಲಾರಂಭಿಸಿದರು. ಬೇಡಿಕೆ ಹೆಚ್ಚಾದ ಕಾರಣ ಸಿನಿಮಾಟೋಗ್ರಫಿ ವಿಭಾಗವನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಲಾಯಿತು. ಮೋಷನ್‌ ಪಿಕ್ಚರ್‌ ಟೆಕ್ನಿಕ್‌ ವಿಭಾಗಕ್ಕೆ ಹೊಸದಾಗಿ ಚಲನಚಿತ್ರ ಪ್ರದರ್ಶನ ಮತ್ತು ಧ್ವನಿಗ್ರಹಣ ಉಪಕರಣ ಖರೀದಿಸಲಾಯಿತು.

ಇದೇ ಹೊತ್ತಿಗೆ ಹೊಸ ಗ್ರಂಥಾಲಯ ಆರಂಭವಾಯಿತು. ವಿದ್ಯಾರ್ಥಿಗಳಿಗೆ ಸಾಕ್ಷ್ಯಚಿತ್ರ ತಯಾರಿಸುವ ಅವಕಾಶ ನೀಡಲಾಯಿತು. ಶೈಕ್ಷಣಿಕ ಪ್ರವಾಸದ ಜತೆಗೆ ವಿದ್ಯಾರ್ಥಿಗಳನ್ನು ಪ್ರಾಯೋಗಿಕ ತರಬೇತಿಗಾಗಿ ಸಿನಿಮಾ ಸ್ಟುಡಿಯೊಗಳಿಗೆ ಮೂರು ತಿಂಗಳ ಪ್ರಶಿಕ್ಷಣಾರ್ಥಿ ತರಬೇತಿ (ಅಪರೆಂಟೀಸ್‌) ಕಳಿಸುವ ಪರಿಪಾಠ ಆರಂಭವಾಯಿತು.ಮಾಜಿ ಸೈನಿಕರು ಮತ್ತು ಆಸಕ್ತರಿಗೆ ಸಿನಿಮಾ ಪ್ರೊಜೆಕ್ಷನ್‌ ತರಬೇತಿ ಆರಂಭಿಸಿತು.

(ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ಅವರ ಜತೆ ಎಸ್‌ಜೆಪಿಯ ಮೊದಲ ಬ್ಯಾಚ್‌ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ))

ಸಾಕ್ಷ್ಯಚಿತ್ರಗಳ ತಾಣವಾದ ಸಂಸ್ಥೆ

ಇಲ್ಲಿಯ ವೃತ್ತಿಪರ ಚಟುವಟಿಕೆಗಳ ಖ್ಯಾತಿ ದೇಶ, ವಿದೇಶಗಳಿಗೆ ಹಬ್ಬಿತು. ಸಿನಿಮಾಟೋಗ್ರಫಿ ಮತ್ತು ಸೌಂಡ್‌ ವಿಭಾಗಕ್ಕೆ ದೇಶ, ವಿದೇಶಗಳ ಗಣ್ಯರು, ವಿದ್ಯಾರ್ಥಿಗಳು ಭೇಟಿ ನೀಡ ತೊಡಗಿದರು.ಕಪ್ಪುಬಿಳುಪು ಸಾಕ್ಷ್ಯ ಚಿತ್ರ ನಿರ್ಮಿಸುತ್ತಿದ್ದ ಸಂಸ್ಥೆಯ ವಿದ್ಯಾರ್ಥಿಗಳು ಮೊದಲ ಬಾರಿಗೆ ಬಣ್ಣದಲ್ಲಿ ಸಾಕ್ಷ್ಯಚಿತ್ರ ತಯಾರಿಸಿದರು. ಚಲನಚಿತ್ರಗಳ ಡಬ್ಬಿಂಗ್‌ ಕೆಲಸ ಮಾಡಿ ಗಮನ ಸೆಳೆದರು.

ಮಹಾರಾಜರ ಕನಸಿನ ಕೂಸು

18 ಮತ್ತು 19ನೇ ಶತಮಾನದಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಬ್ರಿಟಿಷರ ವಸಾಹತು ರಾಷ್ಟ್ರವಾಗಿದ್ದ ಭಾರತಕ್ಕೂ ಕಾಲಿಟ್ಟಿತು. ಜಗತ್ತು ಯಂತ್ರೋಪಕರಣಗಳಿಗೆ ತೆರೆದುಕೊಂಡಿತ್ತು. ಮೈಸೂರು ಅರಸರು ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಿದ್ದರು. ಅದರಲ್ಲಿ ಕೆಲಸ ಮಾಡಲು ತಾಂತ್ರಿಕ ನೈಪುಣ್ಯತೆ ಸಾಧಿಸಿದ ಕಾರ್ಮಿಕರ ಅಗತ್ಯವಿತ್ತು. ಅವರನ್ನು ತಯಾರಿಸಲು ವೃತ್ತಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಅಗತ್ಯವಿತ್ತು. ಈ ಉದ್ದೇಶದಿಂದ ಮೈಸೂರು ಮಹಾರಾಜರು ಶ್ರೀಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಕಾಲೇಜು ಆರಂಭಿಸಿದರು.

ಇದೇ ಸಮಯದಲ್ಲಿ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಷ್ಟದಲ್ಲಿತ್ತು. ಅದನ್ನು ಲಾಭದಾಯಕ ಉದ್ದಿಮೆಯಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ದಿವಾನರಾಗಿದ್ದ ವಿಶ್ವೇಶ್ವರಯ್ಯನವರಿಗೆ ವಹಿಸಿದ್ದರು. ಅದಕ್ಕಾಗಿ ಎರಡು ಲಕ್ಷ ರೂಪಾಯಿ ಗೌರವಧನವನ್ನು ನೀಡಿದ್ದರು. ಆ ಕಾಲಕ್ಕೆ ಎರಡು ಲಕ್ಷ ರೂಪಾಯಿ ದೊಡ್ಡ ಮೊತ್ತ. ಅದನ್ನು ವಿಶ್ವೇಶ್ವರಯ್ಯನವರು ಹೊಸದಾಗಿ ಆರಂಭವಾಗಿದ್ದ ಎಸ್‌ಜೆಪಿಗೆ ಕಾಣಿಕೆಯಾಗಿ ನೀಡಿದರು.

(ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಇಂದಿನ ನೋಟ)

ಆ. 22ಕ್ಕೆ ಸಮಾರಂಭ

ಎಸ್‌ಜೆಪಿ ಅಮೃತ ಮಹೋತ್ಸವಕ್ಕೆ ಇದೇ 22ರಂದು ಬೆಳಿಗ್ಗೆ 10 ಗಂಟೆಗೆ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಚಾಲನೆ ದೊರೆಯಲಿದೆ. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಯಾಗಿರುತ್ತಾರೆ.

*ಸ್ವಾತಂತ್ರ್ಯ ಪೂರ್ವದಲ್ಲಿಯೇ ಕರ್ನಾಟಕದಲ್ಲಿ ಎಸ್‌ಜೆಪಿಯಂಥ ಸಂಸ್ಥೆ ಇತ್ತು ಎಂದರೆ ನಂಬಲು ಆಗುವುದಿಲ್ಲ. ಎಷ್ಟೋ ವರ್ಷಗಳ ನಂತರ ಪುಣೆ, ಚೆನ್ನೈ, ಕೋಲ್ಕತ್ತಾದಲ್ಲಿ ಇಂತಹ ಸಂಸ್ಥೆಗಳು ಸ್ಥಾಪನೆಯಾದವು. ಆರಂಭದ ಬೆಳವಣಿಗೆ ನೋಡಿದರೆ ವಿಶ್ವದ ಪ್ರತಿಷ್ಠಿತ ಸಿನಿಮಾ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿಗೆ ಸೇರಬೇಕಿತ್ತು. ವಿಶ್ವಕ್ಕೆ ಸಿನಿಮಾದ ಪಾಠ ಹೇಳುವ ವಿಶ್ವವಿದ್ಯಾಲಯವಾಗಬೇಕಿತ್ತು.

- ಬಿ.ಎಸ್‌. ಬಸವರಾಜು, ಎಸ್‌ಜೆಪಿ ಹಳೆಯ ವಿದ್ಯಾರ್ಥಿ (1962ನೇ ಬ್ಯಾಚ್‌), ಕನ್ನಡ ಮತ್ತು ಹಿಂದಿ ಸೇರಿದಂತೆ ನೂರಾರು ಚಿತ್ರಗಳ ಹಿರಿಯ ಸಿನಿಮಾಟೋಗ್ರಾಫರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT